“ಇಲ್ಲಿವೆ ಕವಿ-ಕಾವ್ಯದ ಕೀಟಲೆಯ ಕಚಗುಳಿಯಿಡುವ ಎಂಟು ಹನಿಗಳು. ನಿಮ್ಮನ್ನು ನಗಿಸಿ ಹೊಟ್ಟೆ ಹುಣ್ಣಾಗಿಸುವ ತುಂಟ ದನಿಗಳು. ನಿಮ್ಮ
ಮೊಗದ ಗಂಟು ಬಿಡಿಸಿ ಮಂದಹಾಸವರಳಿಸುವ ಉಲ್ಲಾಸದ ಖನಿಗಳು. ಇಲ್ಲಿ ಮನ ಮುದಗೊಳಿಸುವ ಹಾಸ್ಯವಿದೆ. ಆಮೋದ ನೀಡುವ ನಗೆ ಲಾಸ್ಯವಿದೆ. ನಿಮ್ಮನ್ನು ಪುಳಕಿಸುವ ಆನಂದ ಭಾಷ್ಯವಿದೆ. ಕವಿಯ ಕೀಟಲೆ ಕೋಟಲೆ ಹನಿಗಳಿವು. ಬಿಕ್ಕುಬಿಡಿ, ನಕ್ಕುಬಿಡಿ. ಏನಂತೀರಾ.?” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
1. ನಿ(ವೇ)ದನೆ.!
ಅವನು ಅವಳಿಗೆ ಕಾವ್ಯಮಯವಾಗಿ
ತನ್ನಯ ಪ್ರೇಮ ನಿವೇದಿಸುವಷ್ಟರಲ್ಲಿ..
ಅವಳಿಗೆ ಮದುವೆಯಾಗಿ ಮೂರು ಮಕ್ಕಳಾಗಿತ್ತು.!
*********************
2. ಕಾವ್ಯ ಪವಾಡ.!
ಅವನು ಕಣ್ಮುಚ್ಚಿ ವಾಚಿಸಿದರೆ ಕಾವ್ಯ
ಅಬ್ಬಾ ಸುತ್ತು ಮುತ್ತೆಲ್ಲ ಕಾವ್ಯಮಯ
ಅವ ಕಣ್ಣು ಬಿಡುವಷ್ಟರಲ್ಲಿ ಮಾರಾಯ
ಅಬ್ಬಬ್ಬಾ ಅಕ್ಕಪಕ್ಕದವರೆಲ್ಲಾ ಮಾಯ.!
******************
3. ಪ್ರಾಶಸ್ತ್ಯ.!
ಸಾಹಿತ್ಯ ಸಮ್ಮೇಳನಗಳಲ್ಲಿ
ಸುಗ್ರಾಸ ಭೋಜನದ ನಂತರ
ತಲೆದೂ(ತೂ)ಗಲು ಪ್ರಶಸ್ತಜಾಗ
ಕವಿಗೋಷ್ಥಿಯ ಮುಂಭಾಗ.!
*********************
4. ಕವಿ ಕಾರ್ಪಣ್ಯ.!
ಈಗೀಗ ಕವಿಗಳಿಗೆಷ್ಟು ಪ್ರಯಾಸ
ಪ್ರಾಸದಿ ಬರೆವುದೇ ಹರಸಾಹಸ
ಅಬ್ಬ ಬರೆದರೂ ಪಟ್ಟು ಆಯಾಸ
ಬರೆದಿದ್ದನು ಕೇಳುವ ಕಿವಿಗಳನು
ಹುಡುಕುವುದಂತೂ ಮಹಾತ್ರಾಸ.!
*********************
5. ಹುಚ್ಚು.!
ಅವನಿಗಾರೋ ಹೇಳಿದರಂತೆ
“ಬರೆಯಿರಿ.. ಹರಿಯಿರಿ..” ಎಂದು
ಹಾಗಾಗಿ ಅವನು ಬರೆದುದಕಿಂತ
ಹರಿಯುವುದೇ ಹೆಚ್ಚಾಗಿದೆ ನಿತ್ಯ
ಅದ ನೋಡಿನೋಡಿ ಅಕ್ಕಪಕ್ಕದವರು
ಬಟ್ಟೆ ಹರಿದುಕೊಳ್ಳುತ್ತಿರುವುದು ಸತ್ಯ.!
********************
6. ಕಾವ್ಯಫಲ.!
ಅವನು ತನ್ನವಳಿಗಾಗಿ ಕೊಡಲು
ನನ್ನಿಂದ ಪ್ರೇಮಕವಿತೆ ಬರೆಸಿಕೊಂಡ.!
ಪ್ರೇಮ ಫಲಿಸಿತೇ..? ಹ್ಹೂ......
ಅವಳೀಗ ನನ್ನವಳು.!!
************************
7. ಶೋಚನೀಯ.!
ಕವಿಗಳೆಂದರೆ ಆಯೋಜಕರಿಗೆ
ನಿಜಕ್ಕೂ ಬಲು ಬಲು ಸಸ್ತಾ..
ಒಮ್ಮೊಮ್ಮೆ ಕವಿತೆ ಓದಿದವರಿಗೆ
ಕೊಡುವುದೂ ಇಲ್ಲ ಚಾ-ನಾಸ್ತ.!
*******************
8. ಸಂಚಲನ.!
ಆರಂಭವಾಗುತ್ತಿದ್ದಂತೆ ಅವನ ಕವನ
ವಾವ್.. ವಾವ್.. ವಾವ್...
ಶುರುವಾಗುತ್ತಿದ್ದಂತೆ ಕವನ ವಾಚನ
ವ್ಹಾ... ವಾವ್ಹಾ.. ವಾವಾವ್ಹಾ,,
ಖಾಲಿಯಾಯ್ತು ಸಭಾಂಗಣದಿ ಎಲ್ಲ ಆಸನ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments