“ಇದು ಬೆಂಕಿಯಲ್ಲೂ ಅರಳುವ ಹೂವಿನಂತಹ ಅಗಾಧ ಸ್ತ್ರೀಶಕ್ತಿಯ ಅನಾವರಣದ ಅನನ್ಯ ಕವಿತೆ. ಪುರುಷ ಸಮಾಜದ ಕಬಂಧ ಬಾಹುಗಳ ಬೇಧಿಸುತ, ಪ್ರತಿಕೂಲ ಪರಿಸ್ಥಿತಿಯಲ್ಲು ಫೀನಿಕ್ಸಿನಂತೆ ಮೇಲೆದ್ದು ಹಾರುವ ಹೆಣ್ಣಿನ ಪ್ರಚಂಡ ರೆಕ್ಕೆಬಡಿತಗಳ ರಿಂಗಣದ ಭಾವಗೀತೆ. ಹೆಚ್ಚೇನೂ ಹೇಳಲಾರೆ. ಬರೆಯುತ್ತಿದ್ದಂತೆ ನನಗೇ ತುಂಬಾ ಇಷ್ಟವಾದ ಕವಿತೆಯಿದು. ಓದಿ ನೋಡಿ.. ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಏಕೆಂದರೆ ನಾವೆಲ್ಲರೂ ಹೆಣ್ಣಿನ ಒಡಲಿಂದ ಜನ್ಮ ತಳೆದವರು. ಅವಳೆದೆಯೇ ನಮ್ಮೆಲ್ಲರ ತವರು. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಬೆಂಕಿಯಲ್ಲರಳಿದ ಹೂ.!
ಕೆಡಕು ಕಟಕಿ ನುಡಿಗಳ
ಸಾಗರವನ್ನೇ ದಾಟಿ ಬಂದವಳು ನಾನು..
ನಿಮ್ಮಯ ಕುಹಕ ನಗೆಯ
ಕೊಚ್ಚೆಗುಂಡಿಗೆ ಹೆದರಿ ಹಿಂಜರಿಯುವೆನೆ.?
ಬೆನ್ನಿಗಿರಿದು ನಿಂತವರನ್ನೇ
ನಗುನಗುತ ಕ್ಷಮಿಸಿ ನಿಂದವಳು ನಾನು
ಎದುರಲ್ಲಿ ಎದೆಗೆರಿಯಲು
ಬಂದ ನಿಮ್ಮನ್ನು ಮನ್ನಿಸದಿರುವೆನೆ.?
ಹುಟ್ಟಿನಿಂದ ನಂಬಿದವರಿಟ್ಟ
ವಿಷವನ್ನೇ ಉಂಡು ಗಟ್ಟಿಯಾದವಳು ನಾನು
ನಿಮ್ಮಂತ ಅಪರಿಚಿತರಿಡುವ
ಹನಿ ಹಾಲಾಹಲಕೆ ಬೆಚ್ಚಿ ಬೆದರುವೆನೆ.?
ಪ್ರತಿ ಮೆಟ್ಟಿಲಲು ಕಾಲೆಳೆಯಲು
ಕುಳಿತವರ ಕೊಡವಿ ಮೇಲೇರಿದವಳು ನಾನು
ನಿಮ್ಮದೊಂದು ಸಣ್ಣ ತಳ್ಳುವಿಕೆಗೆ
ಹೆದರಿ ಹಾರಿ ಜಾರಿ ಕೆಳಗೆ ಬೀಳುವೆನೆ.?
ಅವರಿವರೆಸೆದ ಬಂಡೆಗಲ್ಲುಗಳ
ಮೈಲುಗಲ್ಲಾಗಿಸಿಕೊಂಡು ನಡೆದವಳು ನಾನು
ನೀವೆರಚುವ ಹಿಡಿ ಮಣ್ಣಿಗೆ
ದಿಗಿಲಾಗಿ ದಿಕ್ಕೆಟ್ಟು ದಾರಿ ತಪ್ಪಿ ನಿಲ್ಲುವೆನೆ.?
ಅಕ್ಕಪಕ್ಕದವರಿಟ್ಟ ಅಸೂಯೆಯ
ಬೆಂಕಿಯಲ್ಲಿ ಬೆಂದು ಹದವಾದವಳು ನಾನು
ನಿಮ್ಮಯ ಹೊಟ್ಟೆಕಿಚ್ಚಿನ ಕಿಡಿಗೆ
ಸುಟ್ಟು ಕರಕಲಾಗಿ ಬೂದಿಯಾಗುವೆನೆ.?
ಶತಶತಮಾನದಿಂದ ಶೋಷಣೆಯ
ಧಿಕ್ಕರಿಸಿ ದಿಟ್ಟನಿಂತ ನಾರಿಕುಲದವಳು ನಾನು
ನಿಮ್ಮಯ ಧಿಮಾಕು ದಬ್ಬಾಳಿಕೆಗೆ
ಶರಣಾಗಿ ಸ್ತ್ರೀ ಕೀರ್ತಿಗೆ ಕಳಂಕವಾಗುವೆನೆ?
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments