"ಇಲ್ಲಿವೆ ವ್ಯಕ್ತಿ-ವ್ಯಕ್ತಿತ್ವಗಳ ಅನಾವರಣದ ಅಷ್ಟ ಹನಿಗಳು. ಭಾವ ಮಾಧುರ್ಯ
ಮಾರ್ದನಿಸುವ ಸ್ಪಷ್ಟ ರಿಂಗಣಗಳ ದನಿಗಳು. ಜೀವ ಸೌಂದರ್ಯದ ನಿಜ ಖನಿಗಳು. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಭಾವಗಳ ಸತ್ವವಿದೆ. ಅರಿತಷ್ಟೂ ಬದುಕು-ಬೆಳಕಿನ ತತ್ವವಿದೆ. ಅರ್ಥೈಸಿದಷ್ಟೂ ವ್ಯಕ್ತಿತ್ವ ಮೌಲ್ಯಗಳ ಮಹತ್ವವಿದೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
1. ವ್ಯಕ್ತಿತ್ವ.!
ವ್ಯಕ್ತಿತ್ವವೆಂದರೆ ನಮಗೆ ನಾವೇ
ಕೊಟ್ಟುಕೊಳ್ಳುವ ಪ್ರಶಂಸಾಪತ್ರವಲ್ಲ
ಅದು ಜಗತ್ತು ನೀಡುವ ಪ್ರಮಾಣಪತ್ರ.!
*********************
2. ಚೆಲುವು.!
ವ್ಯಕ್ತಿತ್ವದ ಸೌಂದರ್ಯ ಮೊಗದಲ್ಲಿಲ್ಲ
ಗುಣ ಅಂತಃಕರಣ ಔದಾರ್ಯದಲ್ಲಿದೆ
ವ್ಯಕ್ತಿತ್ವದ ಮಾಧುರ್ಯ ಮಾತಿನಲ್ಲಿಲ್ಲ
ಮೌನ ಘನತೆ ಗಾಂಭೀರ್ಯದಲ್ಲಿದೆ.!
***********************
3. ಮಹತ್ವ.!
ನುಡಿಯಲಲ್ಲ
ನಡೆಯಲಿರಬೇಕು ಸತ್ವ
ಆಡುವುದರಲಲ್ಲ
ಆಚರಣೆಯಲಿರಬೇಕು ತತ್ವ.!
******************
4. ಕೆತ್ತನೆ-ಕಡೆಗಣನೆ.!
ತನ್ನನ್ನು ತಾನು ಕಡೆದುಕೊಂಡವ
ಪಕ್ವ ಪರಿಪೂರ್ಣ ಶಿಲ್ಪವಾಗುತ್ತಾನೆ
ಕಡೆದುಕೊಳ್ಳದೆ ಕಡೆಗಣಿಸಿಕೊಂಡರೆ
ಚರ್ವಿತಚವರ್ಣ ವಿಕಲ್ಪವಾಗುತ್ತೇನೆ.!
*********************
5. ಅಸ್ಮಿತೆ.!
ಶಕ್ತಿಯಿಂದ ಕೊಂಡುಕೊಳ್ಳಲಾಗದು
ಯುಕ್ತಿಯಿಂದ ಕಸಿದುಕೊಳ್ಳಲಾಗದು
ಭಕ್ತಿಯಿಂದ ಪಡೆದುಕೊಳ್ಳಲಾಗದು
ಅರಿವಿನಿಂದ ರೂಪಿಸಿಕೊಳ್ಳಬಹುದು
ಆಸಕ್ತಿಯಿಂದ ರೂಢಿಸಿಕೊಳ್ಳಬಹುದು.!
**********************
6. ಸ್ವಯಂಭು.!
ಜನನದಿಂದ ತಾನೇ
ವ್ಯಕ್ತಿಗತವಾಗಿ ಬರುವುದು ಸ್ವಭಾವ.!
ಜತನದಿಂದ ನಾವೇ
ಆತ್ಮಗತವಾಗಿ ಕಟ್ಟಿಕೊಳ್ಳುವುದು ವ್ಯಕ್ತಿತ್ವ.!
***********************
7. ರೂಪಾಂತರ.!
ಹೊಳೆವ ಸೆಳೆವ ವಿಗ್ರಹವಾಗಲು
ಬೇಕು ಉಳಿಪೆಟ್ಟು ತಿನ್ನುವ ಒಲವು
ತುಟಿಕಚ್ಚಿ ಸಹಿಸಿ ನಿಲ್ಲುವ ಛಲವು
ಒಳಗೆ ಛಿದ್ರವಾಗದ ಕಸುವು ಬಲವು.!
*******************
8. ಸೂಕ್ತ.!
ಲೋಕಕ್ಕೆಲ್ಲ ಸ್ತೂಪವಾಗುವ ಮೊದಲು
ಮನೆ ಬೆಳಗುವ ದೀಪವಾಬೇಕು.!
ತತ್ವಗಳ ಪ್ರದರ್ಶನವಾಗುವ ಬದಲು
ವ್ಯಕ್ತಿತ್ವದ ನಿದರ್ಶನವಾಗಬೇಕು.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments