*ವಿದ್ಯಾ ಬಾಲನ್ ಹೇಳಿದ ಸುಂದರ ಕಥೆ.*
ಒಬ್ಬ ವಯಸ್ಸಾದ ಅದ್ಭುತ ದರ್ಜಿ ಇದ್ದ. ಅವನು ಆ ಊರಿನ ಶ್ರೀಮಂತರ ಬಟ್ಟೆಗಳನ್ನು ಹೊಲಿಯುತ್ತಿದ್ದ. ಅವನು ಆ ಶ್ರೀಮಂತರ ಮನೆಗೆ ಹೋದಾಗಲೆಲ್ಲ, ಅವರು ಅವನನ್ನು ಗಂಟೆಗಟ್ಟಲೆ ಕಾಯಿಸುತ್ತಿದ್ದರು. ಆದರೂ ದರ್ಜಿ ಬೇಸರ ಮಾಡಿಕೊಳ್ಳದೆ ಅವರ ಅಳತೆ ತೆಗೆದುಕೊಂಡು ಬಂದು ಅವರಿಗೆ ಅದ್ಭುತವಾದ ದಿರಿಸು ತಯಾರು ಮಾಡಿಕೊಡುತ್ತಿದ್ದ.
ಹೀಗಿರುವಾಗಲೇ ಆ ಊರಿನಲ್ಲಿ ಒಬ್ಬ ಹೊಸ ಟೇಲರ್ ಕಾಣಿಸಿಕೊಂಡ. ಅವನಿಗಿನ್ನೂ ಹದಿಹರೆಯದ ವಯಸ್ಸು. ಆದರೂ ಅವನು ಬಟ್ಟೆ ಹೊಲಿಯುವುದರಲ್ಲಿ ಹೆಸರು ಮಾಡಿದ್ದ.
ಒಂದು ದಿನ ಇಬ್ಬರೂ ದರ್ಜಿಗಳು ಒಬ್ಬ ಶ್ರೀಮಂತನ ಮನೆಗೆ ಬರುತ್ತಾರೆ. ಅವರು ಬಂದ ಕೂಡಲೆ ಯುವ ದರ್ಜಿಯನ್ನು ಅವನು ಡಿಮಾಂಡ್ ಮಾಡಿದಂತೆ ಬೇಗನೇ ಒಳಗೆ ಕರಿಸಿಕೊಂಡು ಅವನಿಗೆ ಅಳತೆಕೊಟ್ಟು ಅರ್ಧಗಂಟೆಯಲ್ಲಿ ಅವನನ್ನು ಕಳಿಸಿಕೊಡಲಾಗುತ್ತದೆ.
ಅವನು ಕೇಳಿದ ಬೆಲೆಯನ್ನು ಅವನಿಗೆ ಕೊಡಲಾಗುತ್ತದೆ. ಯುವ ದರ್ಜಿ ಒಂದು ಕಪ್ ಚಹಾಕ್ಕಾಗಿ ರಿಕ್ವೆಸ್ಟ್ ಮಾಡಿದಾಗ, ಅವನಿಗೆ ಚಹಾ ಕೊಟ್ಟು ಸತ್ಕರಿಸಲಾಗುತ್ತದೆ. ಆ ಯುವ ಟೇಲರ್ ತನ್ನ ಕೌಶಲ್ಯಕ್ಕನುಗುಣವಾಗಿ ತನಗೆ ಬೇಕಾದುದ್ದನ್ನ ಡಿಮಾಂಡ್ ಮಾಡಿದ ಮತ್ತು ಅದು ಅವನಿಗೆ ಸಿಕ್ಕಿತು ಕೂಡ.
ಆದರೆ ವಯಸ್ಸಾದ ದರ್ಜಿ ಇನ್ನೂ ತನ್ನ ಸಮಯಕ್ಕಾಗಿ ಕಾಯುತ್ತಲೇ ಕುಳಿತಿದ್ದಾನೆ. ತನ್ನ ಕಣ್ಣ ಮುಂದೆ ನಡೆದಿದ್ದನ್ನು ನೋಡಿದಾಗ ಆ ದರ್ಜಿಗೆ ತನ್ನ ತಪ್ಪು ಅರಿವಾಗುತ್ತದೆ.
ಕೌಶಲ್ಯ, ಒಳ್ಳೆಯತನ, ವಿನಯವಂತಿಕೆಗಾಗಿ ಜನ ನಮ್ಮನ್ನು ಗೌರವಿಸುತ್ತಾರೆ ಎಂದು ನಮಗೆ ಅನಿಸುತ್ತದೆ. ಆದರೆ ಇದು ಪೂರಾ ನಿಜ ಅಲ್ಲ. ಯಾರು ತಮ್ಮ ಮೌಲ್ಯವನ್ನು ತಾವು ಗೌರವಿಸಿಕೊಳ್ಳುತ್ತಾರೋ ಅವರನ್ನು ಜಗತ್ತು ಮೊದಲು ಗೌರವಿಸುತ್ತದೆ.
~ ಕಾಫೀ ಹೌಸ್ ಕಥೆಗಳು / ಅರಳಿ ಮರದಿಂದ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments