ಬೆಳಕಾಗು ಬಾಲಾಜಿ.!

 "ನಿನ್ನೆಯ ದಿನ ವೈಕುಂಠದ ಬಾಗಿಲು ತೆರೆದು ಭಕ್ತರ ಅನುಗ್ರಹಿಸಿದ ಶ್ರೀಹರಿಗೆ ಅರ್ಪಿಸಿದ ಹೃದ್ಯ ನಿವೇದನೆಯ ಕವಿತೆ. ಮನೆ-ಮನಗಳ ಬೆಳಗಿ ಮಂದಸ್ಮಿತನಾಗಿ ನಿಂದ ಮಹಾವಿಷ್ಣುವಿಗೆ ಸಮರ್ಪಿಸಿದ ಅಂತರಂಗದಾರಧನೆಯ ಆರ್ದ್ರ ಭಾವಗೀತೆ. ನಿನ್ನೆಯ ಪವಿತ್ರದಿನದಂದು ಭಕ್ತಿಯಲಿ ಮಿಂದೆದ್ದು ಬೆಳಕಿನೆದುರು ಬಾಗಿ ನಿಂತ ನನ್ನ-ನಿಮ್ಮದೇ ಹೃನ್ಮನಗಳ ಭಾವ ಭಾಷ್ಯವಿದು. ಆತ್ಮ ಸಮರ್ಪಣೆಯ ಭಕ್ತಿಭಾಷ್ಪಗಳಲ್ಲರಳಿದ ಕಾವ್ಯಪುಷ್ಪವಿದು. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ಬೆಳಕಾಗು ಬಾಲಾಜಿ.!



ಸಪ್ತ ಜನುಮ ಜನುಮಗಳ ಕಳೆದು

ಸುಪ್ತ ಮೊನೋವಿಕಾರಗಳ ತೊಳೆದು

ಗುಪ್ತನಾಗಿ ದರ್ಶನ ತೋರು ಶ್ರೀನಿವಾಸ

ನಿನ್ನೆಡೆಗೆ ನಡೆಸೆನ್ನನು ವೈಕುಂಠವಾಸ.!


ತೃಪ್ತಾತೃಪ್ತ ವ್ಯಾಮೋಹಗಳ ಕಳೆದು

ನಿಶ್ಚಿಂತ ನಿರ್ಮಲ ಭಾವಗಳ ಪೊರೆದು

ಆಪ್ತನಾಗಿ ಆಶ್ರಯ ನೀಡು ಗೋವಿಂದ

ನಿನ್ನೊಳಗೆ ಅನುರಕ್ತನಾಗಿಸು ಮುಕುಂದ.!


ಹೊತ್ತ ಬಿತ್ತ ರಾಗ-ದ್ವೇಷಗಳ ಕಳೆದು

ನಿರ್ಲಿಪ್ತ ನಿರ್ವಾಣ ಗಮ್ಯಗಳತ್ತ ನಡೆದು

ಬೆಳಕಿನಬ್ಧಿ ಕಾಣುವಂತೆ ಮಾಡು ಶ್ರೀವಲ್ಲಭ 

ನಿನ್ನಯಾ ಭಕ್ತಿ ಶಕ್ತಿಯಾಗಿಸು ಪದ್ಮನಾಭ.!


ವ್ಯಕ್ತ ದಾಹಮೋಹಗಳ ಮಾಯೆ ಕಳೆದು

ಅವ್ಯಕ್ತ ಆನಂದ ಅನುಭಾವಗಳ ಸ್ಫುರಿದು

ಸರ್ವಶಕ್ತ ಶ್ರೀಸಾನಿಧ್ಯ ಕೊಡು ವೆಂಕಟೇಶ

ನಿನ್ನಯ ಚರಣದಿ ಲೀನವಾಗಿಸು ಸರ್ವೇಶ.!


ಅಶಕ್ತ ಆಸಕ್ತ ಭ್ರಮೆ ಭ್ರಾಂತಿಗಳ ಕಳೆದು

ಸೂಕ್ತ ಅಭಿವ್ಯಕ್ತ ಸುಜ್ಞಾನಗಳ ಬೆಳೆದು

ಭವಸಾಗರ ದಾಟಿಸಿ ಬಿಡು ಗರುಡಾರೂಢ

ನಿನ್ನಲಿ ಐಕ್ಯವಾಗಿಸು ಏಳುಕುಂಡಲವಾಡ.!


ಸುತ್ತ ಮುತ್ತ ಕವಿದ ಕತ್ತಲುಗಳ ಕಳೆದು

ಚಿತ್ತ ಭಿತ್ತಿಯೊಳಗೆ ದೀಪ್ತಿಯಾಗಿ ಹೊಳೆದು

ಮುಕ್ತಿಪಥದ ಸಾಕ್ಷಾತ್ಕಾರ ಬೀರು ಬಾಲಾಜಿ

ಜೀವಭಾವಗಳ ಮೋಕ್ಷ ಕರುಣಿಸು ಪ್ರಭೂಜಿ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments