"ಇಲ್ಲಿವೆ ಶುದ್ಧಾತಿಶುದ್ಧ ಸಪ್ತ ತರಲೆ ಹನಿಗಳು. ನಿಮ್ಮ ಸುಪ್ತ ಮನಸನ್ನೂ, ಗುಪ್ತ ನೋವನ್ನೂ ಕಚಗುಳಿಯಿಟ್ಟು ನಗಿಸಿ ಮೊಗವರಳಿಸುವ ದನಿಗಳು. ಇಲ್ಲಿ ಕೀಟಲೆಯಿದೆ, ತುಂಟತನವಿದೆ, ವಿನೋದವಿದೆ, ವ್ಯಂಗ್ಯವಿದೆ, ವಿಡಂಬನೆಯಿದೆ, ಹಾಸ್ಯವಿದೆ, ಲಾಸ್ಯವಿದೆ.. ಇವೆಲ್ಲದರ ಜೊತೆಗೆ ಕಹಿಸತ್ಯವೂ, ಕಟುವಾಸ್ತವವೂ ಇದೆ.. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಶುದ್ದ ತರಲೆ ಹನಿಗಳು..
1. ಪರಿಣಾಮ.!
ಹೆಂಡತಿ ನಿತ್ಯ ಧಾರವಾಹಿ ನೋಡಿದ್ರೆ
ಅವಳು ಆಗೋಗ್ತಾಳೆ ಭಾರಿ ವಾಚಾಳಿ.!
ನಡುವಿನ ಜಾಹಿರಾತುಗಳ್ನು ನೋಡಿದ್ರೆ
ಅವಳ ಗಂಡನಾಗ್ತಾನೆ ಪಕ್ಕಾ ದಿವಾಳಿ.!
*******************
2. ಗ್ಯಾರಂಟಿ..!
ಎರಡನೇ ಮದುವೆಯೊಂದಿಗೆ
ಮಕ್ಕಳು ಉಚಿತ.!
ಜೊತೆಗೆ ಭರಪೂರ ಬಿಟ್ಟಿ
ಜವಾಬ್ಧಾರಿಗಳು ಖಚಿತ.!
*********************
3. ಮಾನ-ಜೋಪಾನ.!
ಮೇಲ್ಮಹಡಿಯವರು ಬಗ್ಗಿ ನೋಡಿದ್ರೆ ಕಷ್ಟ
ಯಾವುದಕ್ಕೂ ಹೆಣ್ಮಕ್ಮಳು ಮೈಮುಚ್ಕಂಡಿರಿ.!
ಕೆಳಮಹಡಿಯವರು ತಲೆಯೆತ್ತಿ ನೋಡಿದ್ರೆ ನಷ್ಟ
ಯಾವಾಗಲೂ ಗಂಡೈಕಳು ಮಾನ ಮುಚ್ಕೊಂಡಿರಿ.!
********************
4. ಫಲಿತಾಂಶ.!
ನಮ್ಮವ್ವ ಮುಗಿಲು ತೋರ್‍ಸಿ ಉಣ್ಣಿಸಿದ್ದಕ್ಕೆ
ನಾವು ಇಂದು ಚುಕ್ಕಿ-ಚಂದ್ರಮರಾಗಿರೋದು
ನಾವು ಮೊಬೈಲು ತೋರ್‍ಸಿ ಉಣ್ಣಿಸ್ತಿರೋದಕ್ಕೆ
ನಮ್ಮಕ್ಕಳು ಕಾರ್ಟೂನು ಬಫೂನುಗಳಾಗಿರೋದು.!
**********************
5. ಜೋಕೆ.!
ಕಾಲೇಜು ಅಧ್ಯಾಪಕರೆ ವಿಧ್ಯಾರ್ಥಿಗಳಿಗೆ
ಕೊಡಬೇಡಿ ಸಿಕ್ಕಾಪಟ್ಟೆ ಸದರ ಸಲಿಗೆ
ಕಡೆಗೆ ನಿಮ್ಮನ್ನೆ ಎತ್ತಾಕ್ಕೊಂಡು..
ಹೋಗೆ ಬಿಡ್ತಾರೆ ಪಬ್ಬು-ಬಾರಿಗೆ.!
************************
6. ವರನ ಕ್ವಾಲಿಫಿಕೇಶನ್ನು.!
ವಾಟ್ಸಾಪು ಯುನಿವರ್ಸಿಟಿನಾಗೆ ಡಿಗ್ರಿ
ನೂರಾರು ಗ್ರೂಪಿನಾಗೆ ಅಡ್ಮಿನ್ನು ರೀ
ನಿತ್ಯ ಸಾವಿರಾರು ಲೈಕು ಕಾಮೆಂಟ್ರೀ
ರೀಲ್ಸನಲ್ಲಿ ವರಲ್ಡು ಫೇಮಸ್ಸು ರೀ
ನಿಮ್ಕಡೆ ಒಂದು ಕನ್ಯಾ ಇದ್ರೆ ಹೇಳ್ರೀ.!
**********************
7. ಬಾಯಿ ಪಾಡು.!
ಕವಿಭಯಂಕರರ ಕವಿತೆ ಕೊರೆತ ಕೇಳಿ ಕೇಳಿ
ಕವಿಗೋಷ್ಟಿಯಧ್ಯಕ್ಷರ ಕಿವಿ ತೂತು ಬಿದ್ದೋಗ್ತದೆ
ತಮ್ಮ ಭಾಷಣದ ಸರದಿ ಬಂದಾಗ ಅವರಿಗೆ
ಖಾಲಿ ಸಭಾಂಗಣ ನೋಡಿ ಮಾತು ಬಿದ್ದೋಗ್ತದೆ.!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments