* ಸಣ್ಣಾವ್ರ ಸಂಕ್ರಾಂತಿ*

 *ಸಣ್ಣಾವ್ರ ಸಂಕ್ರಾಂತಿ*



ಯಲ್ಲ ಬಾರೋ ಎಳ್ಳು ತಾರೋ

ಬಸವ ಬಾರೋ ಬೆಲ್ಲ ತಾರೋ

ಎಲ್ಲರಿಗೆಳ್ಳು-ಬೆಲ್ಲವ ಬೀರುವಾ

ಸಂಕ್ರಾಂತಿ ಶುಭವ ಕೋರುವಾ


ಕಲ್ಲ ಬಾರೋ ಕಡಲೆ ತಾರೋ

ಕೆಂಚ ಬಾರೋ ಕಬ್ಬು ತಾರೋ

ಸವಿದು ಕುಣಿದು ತಣಿಯುವಾ

ನೇಸರಗೆ ಹಣೆ ಮಣಿಯುವಾ


ರಂಗ ಬಾರೋ ರೊಟ್ಟಿ ತಾರೋ

ಜಗ್ಗ ಬಾರೋ ಜುನಕ ತಾರೋ

ಪಲ್ಯ,ಚಟ್ನಿ ತರ ತರ ತಿನ್ನುವಾ

ಸಂಡಿಗೆ,ಹೋಳಿಗೆ ಉಣ್ಣುವಾ


ಪ್ರೀತು ಬಾರೋ ಪಟವ ತಾರೋ

ದೀಪು ಬಾರೋ ದಾರವ ತಾರೋ

ಗಾಳಿಪಟವ ಆಗಸಕ್ಕೆ ಕಳಿಸುವಾ

ಕಂಡೆಲ್ಲ ಕುಣಿದು ಕುಪ್ಪಳಿಸುವಾ


ಮಂಜ ಬಾರೋ ಮರವ ಏರೋ

ಮಲ್ಲ ಬಾರೋ ಮುಟ್ಟಿ ತೋರೋ

ಮರ ಕೋತಿಯಾಟವ ಆಡುವಾ

ಗಿಡ-ಮರಗಳ ಹಾಡು ಹಾಡುವಾ


ಕೆಂಪ ಬಾರೋ ಕರ್ಪೂರ ತಾರೋ

ತಿಪ್ಪ ಬಾರೋ ತೆಂಗೊಂದ ತಾರೋ

ಕರ್ಪೂರ ಬೆಳಗಿ ಕಾಯೊಡೆಯುವಾ

ದೇವರಾಶೀರ್ವಾದವ ಪಡೆಯುವಾ


*ಎಮ್ಮಾರ್ಕೆ*

Image Description

Post a Comment

0 Comments