ಅಲ್ಲವರಾ

 "ಇದು ನಮ್ಮ ನಿಮ್ಮದೇ ಮನಸ್ಥಿತಿಗಳ ಅನಾವರಣದ ಕವಿತೆ. ಪ್ರಸಕ್ತ ಪರಿಸ್ಥಿತಿಗಳ ಪರಿ ಪರಿ ರಿಂಗಣಗಳ ನಿತ್ಯ ಸತ್ಯ ಭಾವಗೀತೆ. ಪ್ರತಿಯೊಂದಕ್ಕೂ ಎದುರಿನ ವ್ಯಕ್ತಿಗಳನ್ನು, ಸುತ್ತಮುತ್ತಲ ವ್ಯವಸ್ಥೆಯನ್ನು ಹಳಿದುಕೊಂಡೇ ಹಳಹಳಿಸುವ ನಾವು, ನಾವೆಷ್ಟು ಸರಿ.? ಎಂದು ಆತ್ಮಾವಲೋಕನ ಮಾಡಿಕೊಳ್ಳುವುದೇ ಇಲ್ಲ. ಲೋಕವ ದೂಷಿಸುವ ಮೊದಲು ನಮ್ಮ ನಾವು ವಿಶ್ಲೇಷಿಸಿಕೊಳ್ಳುವುದೇ ಇಲ್ಲ. ಜನ ಬದಲಾದರಷ್ಟೇ.. ಜಗತ್ತು ಬದಲಾದೀತು ಅಲ್ಲವರಾ.?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. 



ಅಲ್ಲವರಾ


.?


ಕಾಲ ಕೆಟ್ಟೋಗದೆ ಮನುಸ ಎಕ್ಕುಟ್ಟೋಗವನೆ

ಅಂತ ಹೊಯ್ಕೋತಾರೆ ಮಂದಿ ಸುಖಾಸುಮ್ಮನೆ.!

ಹುಟ್ತಾನೆ ಎಕ್ಕುಟ್ಟೋಗಿದಿವಿ ಯಾಕ್ರಪ್ಪ ರೋದನೆ?

ಕಾಲಾನೆ ಕೈಯ್ಯಾಗ ಕಟ್ಕೊಂಡು ಕೆಡಿಸೀವಿ ತಾನೆ?


ನೀರೊಳಗಿರೋ ಮೀನಿಗೂ ಎರೆಹುಳ ತೋರಿಸಿ

ಗಾಳಕ್ಕೆ ಸಿಗಿಸಿ ಹಿಡಿಯೋ ವಂಶಜರು ನಾವಲ್ವ?

ಬೋನಿನಲ್ಲಿ ಬೋಂಡ ಇಟ್ಟು ಬಿಲದತ್ತಿರ ಇರಿಸಿ

ಇಲಿನೇ ಯಾಮಾರ್ಸಿ ಹಿಡಿಯೋ ಜಾತಿ ನಾವಲ್ವ?


ಕುರಿಗೆ ಹೂಹಾರ ಹಾಕಿ ಮೆರವಣಿಗೆಲಿ ಮೆರೆಸಿ

ಕೊಬ್ಬಿಸಿ ಕಡಿದು ತಿನ್ನೋರ ಕುಲಸ್ಥರು ನಾವಲ್ವಾ?

ಕಾಡಿನ ಆನೆಗೂ ಖೆಡ್ಡಾ ತೋಡಿ ಹಳ್ಳಕೆ ಬೀಳಿಸಿ 

ಮರಾಮೋಸದಿ ಬಂಧಿಸೋ ಪಂಗಡ ನಮದಲ್ವಾ?


ಆ ದೇವರ ನೆಪದಲ್ಲಿ ನಮಗೆ ಬೇಕಾದ್ದು ಬೇಯಿಸಿ

ಪ್ರಸಾದ ಅಂತ ಚಪ್ಪರಿಸೋ ಆಚಾರಸ್ಥರು ನಾವಲ್ವಾ?

ಸತ್ತವರ ಹೆಸರಲ್ಲಿ ಸಾವಿರದ ಭಯ ಭೀತಿ ಹುಟ್ಟಿಸಿ

ಬೇಕಾದ್ದು ಮಾಡ್ಕೊಳೋ ವಿಚಾರಸ್ಥರು ನಾವಲ್ವಾ?


ಬಿಟ್ಟಿ ಬಿಸ್ಕೇಟು ಹಾಕಿ ಬಣ್ಣಬಣ್ಣದ ಕನಸು ಕಾಣಿಸಿ

ಭಂಡಾರನೇ ದೋಚೋ ದಗಲ್ಬಾಜಿಗಳು ನಾವಲ್ವಾ?

ನುಗ್ಗೆಮರ ಹತ್ತಿಸಿ ಹಗಲಲ್ಲೆ ಮುಗಿಲತಾರೆ ಎಣಿಸಿಸಿ

ಮನೆ ಮಠಗಳ ಮುಳುಗಿಸೋ ವಂಚಕರು ನಾವಲ್ವಾ.?


ಸುಮ್ಮನೆ ಯಾಕ ಅವರಿವರನ್ನು ದೂರಿ ದೂಷಿಸ್ತೀರಿ

ಕಾಲ ಕಾಲಕ್ಕೆ ಕಾಲ ಕೆಡಿಸಿದೋರು ನಾವೇ ಅಲ್ವಾ?

ವೃಥಾ ಅವರಿವರ ಕಡೆಗೆ ಯಾಕೆ ಬೆರಳು ಮಾಡ್ತೀರಿ

ಎಕ್ಕುಟ್ಟಿ ಹೋಗೋದು ಎಕ್ಕುಟ್ಟಿಸೋದು ನಾವೆ ಅಲ್ವಾ?


ದುಡಿಯೋನು ಸರಿಯಾದ್ರೆ ಧಣಿನು ಸರಿಯಾಗ್ತಾನಲಾ?

ಆರಿಸೋನು ಸರಿಯಾದ್ರೆ ಆಳೋನು ಸರಿಯಾಗ್ತಾನಲ್ವಾ?

ಬೇರು ಬಿಗಿಯಾದ್ರೆ ಚಿಗುರು ಕೂಡ ಹಚ್ಚಹಸಿರಾಗ್ತದಲ್ವಾ?

ನಾವು ಬದಲಾದ್ರೆ ಕೆಟ್ಟದ್ದು ಎಕ್ಕುಟ್ಟಿದ್ದು ಬದಲಾಗ್ತದಲ್ವಾ?


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments