ಪ್ರೇಮಪೂಜಾರಿ

 “ಇದು ಅನುರಾಗದ ನಿವೇದನೆಯ ರಿಂಗಣಗಳ ಕವಿತೆ. ಒಲವಿನ ಆರಾಧನೆಯ ಅನುರಣನದ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಪ್ರೀತಿ ಸಂವೇದನೆಗಳ ವಿಸ್ತಾರವಿದೆ. ಆಸ್ವಾಧಿಸಿದಷ್ಟೂ ಪ್ರೇಮಾನುಭೂತಿಯ ಸಾರವಿದೆ. ಒಲವಿನ ಸ್ವೀಟ್ ಸ್ವೀಟ್ ಸಂವೇದನೆಗಳ, ಕ್ಯೂಟ್ ಕ್ಯೂಟ್ ಭಾವಾನುಭಾವಗಳೇ ಹೀಗೆ, ಎಂದಿಗೂ ನಿತ್ಯನೂತನ. ಎಂದೆಂದಿಗೂ ನವ ನವೀನ. ಚಿರ ಪುಳಕದ ರೋಮಾಂಚನ. ಸಕಲ ಕಾಲಕೂ ನವಿರು ಸಂಚಲನ. ಸದಾ ಮಧುರ ಸಂಕೀರ್ತನ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ಪ್ರೇಮಪೂಜಾರಿ


.!


ಬೇಕಿಲ್ಲವೇ ಗೆಳತಿ ಎನಗೆ....

ಎಲ್ಲರಿಗೂ ಸಿಗುವ ಗಡಿಬಿಡಿ

ಸಾರ್ವಜನಿಕ ಧರ್ಮದರ್ಶನ.!

ನನ್ನದೇನಿದ್ದರೂ ಬಿಡುವಾದ

ಕೋರಿಕೆಯ ವಿಶೇಷದರ್ಶನ.!


ನಾನಲ್ಲ ಬರಿದೆ ದರ್ಶನಕೆಂದು 

ಸರತಿ ಸಾಲಿನಲಿ ನಿಂತ ದರ್ಶಕ

ನಿತ್ಯ ಹಗಲಿರುಳು ದಿನವೆಲ್ಲವೂ

ಅನವರತ ಕುಂತಲ್ಲಿ ನಿಂತಲ್ಲಿ..

ನಿನ್ನನೇ ಜಪಿಸುವ ಆರಾಧಕ.!


ಬೇಕಿಲ್ಲವೇ ಗೆಳತಿ ಎನಗೆ....

ಮುಂಜಾನೆ ಮುಸ್ಸಂಜೆಗಿಷ್ಟೆಂಬ

ವೇಳಾಪಟ್ಟಿಯ ಪೂಜಾ ಸಮಯ

ನನ್ನದೇನಿದ್ದರೂ ಅನುಕ್ಷಣವೂ

ಆರಾಧಿಸುವ ಪ್ರೀತಿ ಪರಿಣಯ.!


ನಾನ¯್ಲ ಬರಿದೆ ಪೂಜಾರ್ಚನೆ

ಮಾಡಲೆಂದು ಬರುವ ಅರ್ಚಕ

ಕ್ಷಣ ಕ್ಷಣವೂ ನಿನ್ನನೇ ಸ್ಮರಿಸಿ

ಸದಾ ಕನವರಿಸಿ ತಪಿಸಿ ಪರಿತಪಿಸಿ

ಅವಿರತ ಅರ್ಚಿಸುವ ಆರಾಧಕ.!


ನಾನಲ್ಲ ಬರಿದೆ ಫಲಪುಷ್ಪವಿಟ್ಟು

ನೋಡಿ ಹೋಗುವ ನೇತ್ರಧಾರಿ

ನಾನಲ್ಲ ಆರತಿ ನೈವೇದ್ಯಗಳನಿಟ್ಟು

ಪೂಜಾ ಕೈಂಕರ್ಯಗಳ ಕಾಯಕ

ಮಾಡಿ ಹೋಗುವ ಪಾತ್ರಧಾರಿ.!


ನಾನೆಂದರೆ ಎದೆಯ ಅಂಗಳದಿ

ನಿತ್ಯ ಒಲವ ರಂಗೋಲೆಯಿಟ್ಟು

ನಿನ್ನನೇ ಎನ್ನ ಹೃದ್ಯಪೀಠದಲಿಟ್ಟು

ಜೀವ-ಭಾವಗಳನೆಲ್ಲ ಅರ್ಪಿಸುತ

ಬಾಳೆಲ್ಲ ಆರಾಧಿಪ ಪ್ರೇಮಪೂಜಾರಿ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments