“ಇದು ನಮ್ಮ ನಿಮ್ಮದೇ ಮನಸ್ಥಿತಿಗಳ ಬದುಕಿನ ಅನಾವರಣದ ಕವಿತೆ. ಹೃನ್ಮನಗಳ ಬೆಳಗುವ ದಿಟ್ಟ ಸಂವೇದನೆಗಳ ಬೆಳಕಿನ ರಿಂಗಣಗಳ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅಂತಃಶಕ್ತಿಯ ಸತ್ಯ ತತ್ವ ಸಾರುವ ಸಾರವಿದೆ. ಅರ್ಥೈಸಿದಷ್ಟೂ ಆತ್ಮವಿಶ್ವಾಸ ಆತ್ಮಬಲದ ಮಹತ್ವ ಮಾರ್ದನಿಸುವ ಸ್ವರವಿದೆ. ಅನುಕ್ಷಣ ಅಂತರಂಗದಿ ಈ ಧೀಶಕ್ತಿಯ ಅನುರಣನವಿದ್ದರೆ, ಬಾಳಿನ ಹಾದಿಯಲಿ ಭಯವಿಲ್ಲ, ಕೈಗೊಂಡ ಕಾರ್ಯಗಳಲಿ ಅಪಜಯವಿಲ್ಲ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಬಿಂಬ-ಪ್ರತಿಬಿಂಬ.!
ಗುಂಡಿಗೆಯಲಿ ಗುಡುಗಿನ ಸದ್ದಿರೆ
ಎದುರಿನ ತಮಟೆಯ ನಾದಕೆ
ಬೆದರುವ ಹೆದರುವ ಮಾತೆಲ್ಲಿ.?
ಒಡಲಲಿ ಶರಧಿಯ ಮೊರೆತವಿರೆ
ಎದುರಿನ ಕೆರೆ ಕಾಲುವೆ ದಾಟಲು
ಹಿಂಜರೆವ ಹಿಮ್ಮೆಟ್ಟುವ ಮಾತೆಲ್ಲಿ.?
ಎದೆಯಲಿ ಸುಂಟರಗಾಳಿ ಬೀಸಿರೆ
ಎದುರಿನ ಬಿರುಗಾಳಿ ಆವೇಶಕೆ
ಬೆಚ್ಚುವ ಬಸವಳಿವ ಮಾತೆಲ್ಲಿ.?
ಮನದಲಿ ಕಾಳ್ಗಿಚ್ಚಿನ ಬಿಸಿಯಿರೆ
ಎದುರಿನ ಕಿರುಬೆಂಕಿ ಜ್ವಾಲೆಗೆ
ಅಂಜುವ ಅಳುಕುವ ಮಾತೆಲ್ಲಿ.?
ಕಂಗಳಲಿ ದೀಪಾವಳಿ ಬೆಳಕಿರೆ
ಎದುರಿನ ಹಾದಿಯ ಕತ್ತಲೆಗೆ
ಕುಗ್ಗುವ ಕಂಗಾಲಾಗುವ ಮಾತೆಲ್ಲಿ.?
ಅಂತರ್ಯದಿ ಕೇಸರಿ ಗುಡುಗಿರೆ
ಅಡವಿಯ ನಡುವಲು ಕುರಿಯಂತೆ
ಭಯ ಭೀತಿಯಲಿ ಕುಸಿವ ಮಾತೆಲ್ಲಿ.?
ಅಂತರಂಗದಿ ಬೆಳಕಿನ ದೀಪ್ತಿಯಿರೆ
ಎದುರಿನ ಅಂಧಕಾರದ ಅಪ್ಪುಗೆಗೆ
ದಿಗ್ಭ್ರಮೆಯಲಿ ದಿಕ್ತಪ್ಪುವ ಮಾತೆಲ್ಲಿ.?
ಒಳಗೆ ಕೆಚ್ಚೆದೆ ಕಡಲಿನ ಸೆಲೆಯಿರೆ
ಎದುರಿನ ನಮ್ಮದೇ ನೆರಳಲ್ಲೂ
ಸಿಂಹದ ಶೌರ್ಯದ ಘರ್ಜನೆ.!
ನರ-ನರದಿ ಅರಿವಿನ ಜ್ಯೋತಿಯಿರೆ
ಹೊರಗಿನ ನಮ್ಮ ಸ್ವರ-ಸ್ವರದಲ್ಲೂ
ಬೆಳಕು ಬೆಳದಿಂಗಳ ಆಲಾಪನೆ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments