ಸಲಾಂ ಸಲಾಂ ಸಲಾಂ.!

 "ಇದು ನಮ್ಮ ನಿಮ್ಮದೇ ಸುತ್ತ-ಮುತ್ತಲ ವಿಚಿತ್ರ ಮನುಜರ ಚಿತ್ರಣದ ಕವಿತೆ. ವಿಕ್ಷಿಪ್ತ ಮನಸ್ಥಿತಿಗಳ ಅನಾವರಣದ ನಿತ್ಯ ಸತ್ಯ ಭಾವಗೀತೆ. ಇಂತಹವರನ್ನು ನೀವೂ ಕೂಡ ಅನುದಿನ ನೋಡಿರಬಹುದು. ಅವರಿಗೆ ದೊಡ್ಡದೊಂದು ನಮಸ್ಕಾರ ಹಾಕಿರಲೂಬಹುದು. ಏಕೆಂದರೆ ಇಂತಹ ಅಪೂರ್ವ ಅನನ್ಯ ಅಪ್ರತಿಮ ವ್ಯಕ್ತಿಗಳಿಗೆ ಸಲಾಮು ಹಾಕುವುದು ಬಿಟ್ಟರೆ ಬೇರೇನೂ ಮಾಡಲಾಗದು. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ಸಲಾಂ ಸಲಾಂ ಸಲಾಂ.!



ಒಂದು ಲೋಟ ಹಾಲಿಗಾಗಿ

ಹಸುವನ್ನೇ ತಂದು ಕಟ್ಟಿ

ಹಾಲು ಕರೆಯುತ್ತೇನೆನ್ನುವ 

ಚತುರರಿಗೊಂದು ಸಲಾಮು.!


ಬೆಳೆದ ಉಗುರಿನ ತೊಂದರೆಗಾಗಿ

ಕುಡುಗೋಲು ತಂದು ಮಸೆದು

ಕೈಬೆರಳನ್ನೇ ಕತ್ತರಿಸುತ್ತೇನೆನ್ನುವ

ಮೇಧಾವಿಗಳಿಗೊಂದು ಸಲಾಮು.!


ಊರವರ ಮಾತಿಗೆ ಕುಪಿತರಾಗಿ

ಊರಿನ ಕೆರೆಗೇ ಸವಾಲೆಸೆದು

ಮುಖ ತೊಳೆಯದಿರುವೆನೆನ್ನುವ

ಸ್ವಾಭಿಮಾನಿಗಳಿಗೊಂದು ಸಲಾಮು.!


ಖಾಲಿಯಾಗುವುದೆಂದು ಜಿಪುಣರಾಗಿ

ತಿನ್ನದೇ ಹಂಚದೇ ಮುಚ್ಚಿಡುತ

ಕೊಳೆಸಿ ಕಡೆಗೆ ಕಸದಬುಟ್ಟಿಗೆಸೆವ

ಬುದ್ದಿವಂತರಿಗೊಂದು ಸಲಾಮು.!


ಮುನಿದವರ ಒಂದಾಗಿಸಲು ಹೋಗಿ

ಬಿರುಕು ಹೆಚ್ಚುಮಾಡಿ ಬೆಸುಗೆ ಮುರಿದು

ಅಧಿಕಪ್ರಸಂಗತನದಿ ಕುಲಗೆಡಿಸುವ

ಕುಶಾಗ್ರಮತಿಗಳಿಗೊಂದು ಸಲಾಮು.!


ಎಲ್ಲ ಬಲ್ಲೆನೆಂದು ತೋರುವ ಸಲುವಾಗಿ

ಎಲ್ಲವನು ಹಾಳುಮಾಡಿ ಎಲ್ಲರೆದುರು 

ಬಟಾಬಯಲಲಿ ಬೆತ್ತಲಾಗಿ ನಿಲ್ಲುವ

ಬ್ರಹ್ಮಜ್ಞಾನಿಗಳಿಗೊಂದು ಸಲಾಮು.!


ಇಂತಹ ಸಕಲ ಸಮಸ್ತ ಮಾನ್ಯರಿಗೆಲ್ಲ

ಹೇಳಲೇಬೇಕು ತಕರಾರಿಲ್ಲದೆ ಸಲಾಮು

ಕಾರಣ.. ಸಲಾಮು ಹಾಕುವುದು ಬಿಟ್ಟರೆ..

ಇಲ್ಲವೀ ಖಾಯಿಲೆಗಳಿಗೆ ಬೇರೆ ಮುಲಾಮು.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments