ಕರುಣಾಳು ಬಾ ಬೆಳಕೆ.!

 “ಇದು ಆ ಕರುಣಾಳು ಬೆಳಕಿಗೆ ಸಲ್ಲಿಸಿದ ಆರ್ದ್ರ ನಿವೇದನೆಯ ಕವಿತೆ. ಬೆಳಕಿನೆದುರು ಬಾಗಿ ಬೇಡುತ ಮಾಡಿದ ಆರಾಧನೆಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಪ್ರಾಂಜಲ ಪ್ರಜ್ಞೆಯ ರಿಂಗಣಗಳಿವೆ. ಅನುಭಾವಿಸಿದಷ್ಟೂ ಅನಂತ ಭಕ್ತಿಯ ಅನಾವರಣವಿದೆ. ಜೀವ ಬಿಂಕ ಬಿಗುಮಾನ ಬಿಟ್ಟು ಜ್ಯೋತಿಯೆದುರು ಬೇಡಿದಾಗಲೇ ಬದುಕಿನ ಸಾಕ್ಷಾತ್ಕಾರ. ಅಹಮಿಕೆ ಅನುಮಾನ ಬಿಟ್ಟು ಪೂರ್ಣ ಶರಣಾದಾಗಲೇ ಬೆಳಕಿನ ಸಾಕಾರ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ಕರುಣಾಳು ಬಾ ಬೆಳಕೆ.!



ಓ ಬೆಳಕೆ ಸ್ಥಾಪಿಸಿಬಿಡು

ನನ್ನಯ ಡಿಂಬದಲೊಂದು

ಅರಿವಿನಾ ಜ್ಯೋತಿಸ್ತಂಭ


ಓ ಬೆಳಕೆ ಇಳಿಸಿಬಿಡು

ನನ್ನಯ ಎದೆಯಲೊಂದು

ಹೊಳೆವ ಕಾಂತಿಬಿಂಬ.!


ಓ ಬೆಳಕೆ ತೊಳೆದುಬಿಡು

ಮೋಹ ವ್ಯಾಮೋಹಗಳ

ಕವಿದÀ ಕಡು ಅಂಧಕಾರ.!

ಓ ಬೆಳಕೆ ಕಳೆದುಬಿಡು

ಸ್ವಾರ್ಥ ರಾಗದ್ವೇಷಗಳ

ತಮದ ಬಹು ವಿಕಾರ.!


ಜ್ವಲಿಸುತ ಪ್ರಜ್ವಲಿಸುತಿರಲಿ

ಪ್ರೀತಿ ಮಮತೆ ನೀತಿಯ

ದಿವ್ಯ ಕಾರುಣ್ಯ ಜ್ಯೋತಿ.!


ಬೆಳಗುತ ಪಸರಿಸುತಿರಲಿ

ಶಾಂತಿ ದಯೆ ಸಂಪ್ರೀತಿಯ

ಭವ್ಯ ಚೈತನ್ಯ ಕಾಂತಿ.!


ಒಳ ಹೊರಗ ಬೆಳಕಾಗಿಸುತಲಿ

ನಿತ್ಯ ನಿರಂತರ ಹೊಳೆಯಲಿ

ಸತ್ಯ ಅಂತಃಕರಣ ದೀಪ್ತಿ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments