"ಇದು ಅನುದಿನ ಮೂಡುವ ಮೂಡಣದ ಬೆಳಕಿನ ಕವಿತೆ. ಬುವಿ ಬೆಳಗಲು ಬರುವ ಮುಂಜಾನಿನ ಭಾಸ್ಕರನ ನಿತ್ಯ ಸತ್ಯ ಬದುಕಿನ ಭಾವಗೀತೆ. ಪ್ರತಿ ಮುಂಜಾವು ಒಂದು ವಿಸ್ಮಯ. ಹೊರ ಅಕ್ಷಿಗಳಿಂದ ನೋಡಿದರೆ ಇದು ನಯನ ಮನೋಹರವಾದ ನೈಸರ್ಗಿಕ ಕ್ರಿಯೆ. ವೈಜ್ಞಾನಿಕವಾಗಿ ದೈನಂದಿನ ಪ್ರಕ್ರಿಯೆ. ಅದೇ ಅಂತಃಚಕ್ಷುಗಳಿಂದ ಈಕ್ಷಿಸಿದರೆ ಅನೂಹ್ಯ ಸೃಷ್ಥಿಧರ್ಮದ ಮಾಟ. ಅಪಾರ ಅಭೇದ್ಯಗಳ ಕಾಲ ಮರ್ಮದ ಅಪೂರ್ವ ನೆಳಲು ಬೆಳಕಿನಾಟ. ಏನಂತೀರಾ.?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಮೂಡಣದ ಬೆಳಕು.!
ಮೂಡುತಿರುವ ಆ ಮೂಡಣದ ಬೆಳಕು
ಬೆಳಗಲಿದೆ ಜಗದ ಚರಾಚರಗಳ ಬದುಕು
ಬುವಿಯ ಒಡಲಿಂದೆದ್ದು ಬರುವ ಭಾಸ್ಕರ
ಲೋಕಕ್ರಿಯೆಗಳಿಗೆ ಬರೆಯುತಿಹ ಓಂಕಾರ.!
ಮೆಲ್ಲ ಮೆಲ್ಲನೆ ಬೆಳಕಾದಂತೆಲ್ಲ ಆ ಅಂಬರ
ಮೈಮುರಿದು ಮೇಲೇಳುತಿಹಳು ವಸುಂಧರ
ಹೆಚ್ಚಾದಂತೆಲ್ಲ ರವಿಮೊಗದ ತೇಜಸ್ಸಿನ ಕಳೆ
ನವಚೈತನ್ಯ ತುಂಬಿ ಪುಳಕಿಸುತಿಹುದು ಇಳೆ.!
ಹಕ್ಕಿಗಳು ರೆಕ್ಕೆಬಿಚ್ಚಿ ಪ್ರಾರಂಭಿಸಿವೆ ಪಯಣ
ಬಾನ ಅಂಗಳದಲ್ಲೆಲ್ಲ ಕಲರವಗಳ ರಿಂಗಣ
ಹರಡಿದಂತೆಲ್ಲ ಮುಂಜಾವಿನ ಬಿಸಿಲ ಝಳ
ಹೊಳೆದಿವೆ ಇಬ್ಬನಿ ಮುತ್ತುಗಳು ಫಳ ಫಳ.!
ಹಿಮಹೊದ್ದು ಮಲಗಿದ ಗಿಡಮರಕೆ ಪುಳಕ
ಸುಳಿವ ತಂಗಾಳಿಗು ನವಿರು ಬಿಸಿಯ ಝಳಕ
ನೇಸರನೆದುರು ನಾಚುತಿಹ ಸುಮಗಳ ವದನ
ಕಿರಣಗಳ ಕಚಗುಳಿಗೆ ಧರಣಿ ರೋಮಾಂಚನ.!
ಎದ್ದು ಕೂರುತಿದೆ ಸಮಸ್ತ ಪುರ ಪಟ್ಟಣ ನಗರ
ಸದ್ದು ಮಾಡುತಿದೆ ಸಕಲ ಬೀದಿ ಗÀಲ್ಲಿ ವಠಾರ
ಗುಡಿ ಗೋಪುರದಿ ಮೊಳಗುತಿದೆ ಗಂಟಾನಾದ
ಮನೆಮನೆಗಳಲ್ಲೂ ಆರಂಭ ನಡೆನುಡಿ ನಿನಾದ.!
ರಾತ್ರಿ ಸತ್ತು ಮಲಗಿದ ಜಗಕೀಗ ಮತ್ತೆ ಚೈತನ್ಯ
ಮರು ಹುಟ್ಟು ನೀಡಿ ಮೆಲ್ಲನೆಬ್ಬಿಸುತಿಹ ಆದಿತ್ಯ
ಕತ್ತಲಲಿ ನಿಂದು ನೊಂದ ಧರೆಗೆ ಬೆಳಕಿನ ಕಾರುಣ್ಯ
ಜೀವ ತಳೆದು ಅನುರಣಿಸುತಿದೆ ಬದುಕಿನ ಲಾಲಿತ್ಯ.!
ಮತ್ತೆ ಬೆಳಗಾಗುತಿದೆ ತೆರೆಯುತಿದೆ ಜಗದ ಸಂತೆ
ಅಣಿಯಾಗುತಿದೆ ಲೋಕ ಮರೆತು ನೆನ್ನೆಯ ಚಿಂತೆ
ಹಗಲಿರುಳಿನ ಈಚಕ್ರದಿ ಏನೆಲ್ಲ ಸೃಷ್ಟಿ ಧರ್ಮವೊ?
ನೆಳಲುಬೆಳಕಿನಾಟದಿ ಎಷ್ಟೆಲ್ಲ ಕಾಲ ಮರ್ಮವೋ?
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments