"ಇದು ಬೆಸುಗೆ-ಬಂಧಗಳ ಅನಾವರಣದ ಸುಂದರ ಕವಿತೆ. ಮಿಲನ-ಸಮ್ಮಿಲನಗಳ ಸಂವೇದನೆಗಳ ರಿಂಗಣದ ಭಾವಗೀತೆ. ಗಂಧ-ಗಾಳಿಯಂತೆ ಬೇರ್ಪಡಿಸಲಾಗದಂತೆ ಪರಸ್ಪರ ಬೆರೆವ, ಹಾಲು-ಜೇನಿನಂತೆ ಅಗಲಿಸಲಾಗದೆ ಒಂದರಲ್ಲೊಂದು ಕರಗುವ ಒಲಿದ ಜೀವ-ಭಾವಗಳ ಬೆಸುಗೆಯೇ ನಿಜವಾದ ಮಿಲನ. ಬಿಂಕ-ಬಿಗುಮಾನ, ಅಂಕೆ-ಅನುಮಾನಗಳಿಲ್ಲದೆ, ಆರಾಧನೆ-ಅರ್ಪಣೆಗಳೊಂದಿಗೆ ಲೀನ-ವಿಲೀನವಾಗುವುದೇ ಸತ್ಯ ಸಮ್ಮಿಲನ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಸಮ್ಮಿಲನ.
!
ಪದಕೊಂದು ಪದ
ಸೇರಿದರಷ್ಟೆ ಪದ್ಯವಲ್ಲ.!
ಪದಕೊಂದು ಭಾವ
ಭಾವಕೊಂದು ಅರ್ಥ
ಸೇರಿದರಷ್ಟೇ ಪದ್ಯ.!
ಹೆಜ್ಜೆಗೊಂದು ಹೆಜ್ಜೆ
ಬೆರೆತರಷ್ಟೆ ಪಯಣವಲ್ಲ.!
ಹೆಜ್ಜೆಗೊಂದು ದಿಕ್ಕು
ದಿಕ್ಕಿಗೊಂದು ಗಮ್ಯ
ಬೆರೆತರಷ್ಟೇ ಪಯಣ.!
ಸ್ವರಕೊಂದು ಸ್ವರ
ಕೂಡಿದರಷ್ಟೆ ರಾಗವಲ್ಲ.!
ಸ್ವರಕೊಂದು ಶೃತಿ
ಶೃತಿಗೊಂದು ಲಯ
ಕೂಡಿದರಷ್ಟೇ ರಾಗ.!
ಜೀವಕೊಂದು ಜೀವ
ಬೆಸೆದರಷ್ಟೆ ಬಂಧವಲ್ಲ.!
ಜೀವಕೊಂದು ಒಲವು
ಒಲವಿಗೊಂದು ಹರಿವು
ಬೆಸೆದರಷ್ಟೇ ಬಂಧ.!
ಸಕಲ ಕ್ರಿಯೆ-ಪ್ರಕ್ರಿಯೆ
ಯೋಜನೆ ಸಂಯೋಜನೆ
ಜೀವ-ಭಾವ ಭಾಷ್ಯಗಳೆಲ್ಲ
ಲೀನ ವಿಲೀನವಾದರಷ್ಟೇ...
ಐಕ್ಯದಿ ಏಕವಾದರಷ್ಟೇ...
ಬದುಕು-ಭಂದಗಳ ಭಾವೈಕ್ಯ
ಜೀವ-ಜೀವನಗಳ ಚೈತನ್ಯ
ಒಲವು ನಲಿವಿನ ಔದಾರ್ಯ
ರಾಗ ಅನುರಾಗದ ಮಾಧುರ್ಯ
ಆತ್ಮ ಮಿಲನದ ಸೌಂದರ್ಯ.!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments