ದರ್ಶನ-ದಿಗ್ದರ್ಶನ.!

 "ಇದು ನಮ್ಮ ನಿಮ್ಮದೇ ಬದುಕಿನ ಅನುಭವ ಅನುಭಾವಗಳ ಕವಿತೆ. ಗುಡಿಯ ದೈವದೆದುರು ನಿಂತ ವಿವಿಧ ಜೀವಗಳ ವಿಧ ವಿಧ ಭಾವಗಳ ಸತ್ಯ ಮಿಥ್ಯಗಳ ಕಟುವಾಸ್ತವದ ನಿತ್ಯಗೀತೆ. ಇಲ್ಲಿ ಆರ್ದ್ರ ಹೃದಯಗಳ ನಿವೇದನೆ ಆರಾದನೆಗಳ ಚಿತ್ರಣವೂ ಇದೆ. ಡಾಂಭಿಕ ಮನಸುಗಳ ಆಡಂಬರ ಆಚಾರಗಳ ಅನಾವರಣವೂ ಇದೆ. ಬೆಳಕಿನೆದುರೂ ಬಯಲಾಗದೆ ಬಯಲಾಟವಾಡುವ ಬದುಕುಗಳು ಬದಲಾಗುವುದೂ ಇಲ್ಲ. ಬೆಳಕಾಗುವುದೂ ಇಲ್ಲ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ದರ್ಶನ-ದಿಗ್ದರ್ಶನ.!



ಕಿವುಡನಾದರೂ ದೇಗುಲಕ್ಕೆ ಬರುತ್ತಾನೆ

ದೇವರ ದನಿಯ ಕೇಳಿಸಕೊಳ್ಳಬೇಕೆಂದಲ್ಲ

ತನ್ನ ದನಿಯ ದೇವರ ಭವ್ಯ ಕರ್ಣಗಳಿಗೆ 

ಕೇಳಿಸುತ್ತೇನೆಂಬ ಅಚಲ ಆತ್ಮವಿಶ್ವಾಸದಿಂದ.!

ತನ್ನನ್ನು ಕಿವುಡಾಗಿಸಿದವನ ಕಿವಿಗಳಾದರೂ

ಮೊರೆಯ ಆಲಿಸಬಹುದೆಂಬ ನಂಬಿಕೆಯಿಂದ.!


ಕುರುಡನಾದರೂ ಮಂದಿರಕ್ಕೆ ಬರುತ್ತಾನೆ

ದೇವರ ದರುಶನ ಪಡೆದುಕೊಳ್ಳಲಿಕ್ಕೆಂದಲ್ಲ

ತನ್ನನು ತಪ್ಪದೆ ದೇವರ ದಿವ್ಯ ಕಣ್ಣುಗಳು 

ನೋಡಬಹುದೆಂಬ ಅಗಾಧ ಭರವಸೆಯಿಂದ

ತನ್ನನ್ನು ಕುರುಡಾಗಿಸಿದವನ ಕಂಗಳಿಗಾದರೂ

ತಾನು ಕಾಣಬಹುದೆಂಬ ಅತೀವ ವಿಶ್ವಾಸದಿಂದ.!


ಕೈಗಳಿಲ್ಲದವನೂ ದೇವಸ್ಥಾನಕ್ಕೆ ಬರುತ್ತಾನೆ

ದೇವರೆದುರು ನಿಂತು ನಮಸ್ಕರಿಸಲಿಕ್ಕೆಂದಲ್ಲ

ತನ್ನನು ದಿನವೂ ದೇವರ ಪುಣ್ಯ ಕರಗಳು

ಕಾಯುತ ಆಸರೆಯಾಗಿಹುದೆಂಬ ಕಾರಣದಿಂದ

ತನಗೆ ಕರಗಳಿಲ್ಲವಾಗಿಸಿದವನ ಕೈಗಳಾದರೂ

ತನ್ನನು ಕಾಪಿಡುತಿಹುದೆಂಬ ಆದರದಿಂದ.!


ಹೆಳವನಾದರೂ ಗುಡಿಯೊಳಗೆ ಬರುತ್ತಾನೆ..

ದೇವರೆದುರು ಕುಳಿತು ದೂಷಿಸಲಿಕ್ಕೆಂದಲ್ಲ

ತೆವಳುತ ನಡೆಸುತಿಹ ನಿತ್ಯ ದೇವಾನುಗ್ರಹ

ತನ್ನೆಡೆಗೆ ಚಿರವಾಗಿರಲೆಂಬ ಹಂಬಲದಿಂದ

ತನಗೆ ಕಾಲ್ಗಳಿಲ್ಲವಾಗಿಸಿದವನ ಪಾದವಾದರೂ

ತನ್ನ ಬಾಳಿಗೆ ಆಧಾರವಾಗಲೆಂಬ ಭಕುತಿಯಿಂದ.!


ಕಿವುಡ ಕುರುಡ ಹೆಳವರೆಲ್ಲರೂ ಬರುತ್ತಾರೆ

ದೈವ ಋಣದ ಭಾವ ಭಾಗ್ಯ ಭಾಷ್ಯ ತಿಳಿಸಲಿಕ್ಕೆ

ಸಕಲಾಂಗ ಬಲಿಷ್ಟ ನಾವμÉ್ಟ ಹೋಗುತ್ತೇವೆ

ದೈವದೆದುರು ದರ್ಪ ಧಿಮಾಕುಗಳ ತೋರಲಿಕ್ಕೆ

ಋಣ ತೀರಿಸಲಿಕ್ಕೆ ಮಣ ಹೊರಿಸಿ ಮೆರೆಯಲಿಕ್ಕೆ

ಅಹಮ್ಮು ಆಡಂಬರದಿ ದೇವರಿಗಿಂತ ದೊಡ್ಡವರಾಗಲಿಕ್ಕೆ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments