*ನಮ್ಮ ಮನೆಯ ತುಂಟನೀಗ ಏಳರ ಭಂಟ”

 “ನಮ್ಮ ಮನೆಯ ತುಂಟನೀಗ ಏಳರ ಭಂಟ”



ಇದು ಇಂದು ಏಳನೇ ವರ್ಷಕ್ಕೆ ಅಡಿಯಿಡುತ್ತಿರುವ ಮುದ್ದು ಅಳಿಯ ರಾಘವ ಸಮರ್ಥನ ಪರಾಕ್ರಮಗಳ ಅನಾವರಣದ ಕವಿತೆ. ನಮ್ಮ ಮನೆಯ ತುಂಟನ ಏಳನೇ ಹುಟ್ಟು ಹಬ್ಬದ ಸಂಭ್ರಮದ ರಿಂಗಣಗಳ ಭಾವಗೀತೆ. ಇನ್ನೂ ನಮ್ಮ ಕಂಗಳಲಿ ಅವರ ಹಾಲ್ಗಲ್ಲದ ಮುದ್ದು ಮೊಗ ಮಾಸಿರುವುದಿಲ್ಲ.. ಅಷ್ಟರಲ್ಲಾಗಲೇ ಎದೆಯೆತ್ತರಕ್ಕೆ ನಿಂತು ಬಿಟ್ಟಿರುತ್ತಾರೆ ಮಕ್ಕಳು. ಪ್ರತಿ ಹುಟ್ಟುಹಬ್ಬವೂ ಅವರ ಹಿಂದಿನ ದಿನಗಳ ಆಟೋಟ, ನಗೆ ಮಾಟ, ನೆನಪಿನೋಕುಳಿಯ ಚಿತ್ತಾರ ಬಿಡಿಸುತ್ತವೆ. ಜನ್ಮದಿನದ ಸೊಬಗನ್ನು ಇಮ್ಮಡಿಯಾಗಿಸುತ್ತವೆ. ಏನಂತೀರಾ..?. ಇಂದಿನ ರಾಘವ ಸಮರ್ಥನ ಹುಟ್ಟುಹಬ್ಬದ ಕಾವ್ಯವಿದು. ನಿಮ್ಮದೊಂದು ಹಾರೈಕೆಯಿರಲಿ..” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ



ತುಂಟರ ಭಂಟ.!


ಮೊನ್ನೆ ಮೊನ್ನೆಯಷ್ಟೆ ಪಿಳಿ ಪಿಳಿ ಕಣ್ಬಿಡುತ

ತೊಟ್ಟಿಲಲ್ಲಾಡುತ್ತಿದ್ದ ನಮ್ಮನೆ ರಾಜ್ಕುಮಾರ

ಇಂದಿಗೆ ಆರು ಸಂವತ್ಸರಗಳನು ಮುಗಿಸುತ

ಏಳನೆ ವರ್ಷಕೆ ಕಾಲಿಡುತಿಹ ತೀಟೆ ಪೋರ.!


ಓದು ಬರಹ ಪೂಜೆ ಪ್ರವಚನ ಎಲ್ಲಕು ಸೈ

ಹಾಡು ನೃತ್ಯ ಮೃದಂಗ ಎಲ್ಲಕು ಒಂದು ಕೈ

ಗೆಳೆಯರ ಜೊತೆಯಲಿ ಬೀದಿಯಲಿ ಥೈ ಥೈ

ನಮ್ಮನೆ ರಾಜಕುಮಾರನಿಗೆ ಎಲ್ಲರು ಜೈ ಜೈ.! 


ಏಳನೇ ವಯಸಿಗೆ ಲಕ್ಷ ತಂಟೆ ತಕರಾರು

ಮಾತಿಗೆ ಸಾವಿರ ಶರತ್ತು ಪ್ರಶ್ನೆಗಳ ಕರಾರು

ತರಲೆ ಕೀಟಲೆ ಆಟ ಕೋಟಲೆ ನೂರಾರು

ಬೀದಿಗೆಲ್ಲ ಕೇಳಿಸುವಷ್ಟು ಆರ್ಭಟ ಜೋರು.!


ಬೆಳಗು ರಾತ್ರಿ ಇವನದೆ ನಿತ್ಯವು ಕಾರುಬಾರು

ಮನೆ ಒಳಗು ಹೊರಗು ಇವನದೆ ದರಬಾರು

ಇವನ ತುಂಟಾಟಕೆ ಎಲ್ಲರ ವೇಳೆ ಏರುಪೇರು

ಇವನೆ ಮನೆ-ಮನದ ಬೆಳದಿಂಗಳ ಬೆಳ್ಳಿತೇರು.!


ಕಿಲಕಿಲ ನಗೆ ಗಾರುಡಿಗ ರಾಘವ ಸಮರ್ಥ

ಚೇಷ್ಟೆ ಆಟ ಓಟಗಳಿಗಿವನ ಹೆಸರೇ ಅನ್ವರ್ಥ

ಬಾಲ ಬಾಲೆಯರ ಪಟಾಲಮ್ಮಿನ ಸರದಾರ

ತೀಟೆ ಗದ್ದಲ ಸಂತಸ ಸಂಭ್ರಮಗಳ ಹರಿಕಾರ.!


ನಗುತಿರು ನಗಿಸುತಿರು ಹೀಗೆ ಮುದ್ದು ಅಳಿಯ

ನಲಿವಿನ ಜನುಮದಿನಕೆ ಹಾರ್ದಿಕ ಶುಭಾಶಯ

ಏಳರ ಹುಟ್ಟುಹಬ್ಬ ಮುಟ್ಟಲಿ ಶತಕದ ನೂರು

ನೀನು ಕಾಲಿಟ್ಟಲ್ಲೆಲ್ಲ ಬೆಳೆಯಲಿ ಪ್ರೀತಿಯ ಪೈರು.!


ಅನುಕ್ಷಣ ಗೆಲುವಿರಲಿ ನಲಿವಿರಲಿ ನಿನ್ನಡಿಗಡಿಗೆ

ಸಕಲ ದೈವಗಳ ಶ್ರೀರಕ್ಷೆಯಿರಲಿ ನಿನ್ನ ಮುಡಿಗೆ

ಪ್ರೀತಿ ಜೀವನಾದರ್ಶಗಳ ಪ್ರತೀಕವಾಗು ಮಗು

ಚಿರ ಚಿರಂತನವಾಗಿರಿಲಿ ಮೊಗದ ಮುಗ್ಧನಗು.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments