"ಇದು ಇಳೆಯ ಭಾವ-ಬಂಧಗಳ ಅನಾವರಣದ ಸುಂದರ ಕವಿತೆಯಿದು. ಬಾಳಿನ ಜೀವ-ಬೆಸುಗೆಯ ರಿಂಗಣಗಳ ಮಧು ಮಧುರಗೀತೆಯಿದು. ಇಲ್ಲಿ ಆಳಕ್ಕಿಳಿದಷ್ಟೂ ಒಲವಿನ ಚೈತನ್ಯ ಝರಿಯಿದೆ. ಅರ್ಥೈಸಿದಷ್ಟೂ ಅನುರಾಗದ ಅನನ್ಯ ಲಹರಿಯಿದೆ. ಕೆಲವು ಸಂವೇದನೆಗಳೇ ಹಾಗೆ ನಿತ್ಯ ನವನವೀನ. ಸದಾ ಪುಳಕಿಸುವ ಹೃದ್ಯಗಾನ. ಚಿರ ಚಿರಂತನ ಭಾವಯಾನ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಬೆಸುಗೆ..!
ಯಾವುದೋ ಬಿದಿರು
ಯಾರದೋ ಉಸಿರು
ಪಲ್ಲವಿಸೆ ನಾದ.!
ಯಾವುದೋ ವೀಣೆ
ಯಾರದೋ ಕರ
ಸಂಚರಿಸೆ ನಿನಾದ.!
ಯಾವುದೋ ಬತ್ತಿ
ಯಾರದೋ ಜ್ಯೋತಿ
ಮೇಳೈಸೆ ದೀಪ್ತಿ.!
ಯಾವುದೋ ಹೆಜ್ಜೆ
ಯಾರದೋ ಗೆಜ್ಜೆ
ಒಡನಾಡೆ ಸಮ್ಮೇಳ.!
ಯಾವುದೋ ಹೃದಯ
ಯಾರದೋ ಕಂಗಳು
ಸಂಗಮಿಸೆ ಅನುರಾಗ.!
ಯಾವುದೋ ಜೀವ
ಯಾರದೋ ಭಾವ
ಸಂಚಲಿಸೆ ಪ್ರೇಮಗಾನ.!
ಯಾವುದೋ ಮನಸು
ಯಾರದೋ ಕನಸು
ಸಮ್ಮಿಳಿಸೆ ಒಲವಯಾನ.!
ಬುವಿಯ ಸೌಂದರ್ಯವಿದು
ಬದುಕ ಮಾಧುರ್ಯವಿದು
ಬೆಳಕ ಆಂತರ್ಯವಿದು
ಒಲವ ಔದಾರ್ಯವಿದು.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments