"ಇದು ಒಗಟಿನ ಹನಿಗಳ, ಹನಿ ಹನಿ ಪ್ರೇಮ್ ಕಹಾನಿ. ಒಲವಿನ ಹೃದಯಗಳಲಿ ಸದಾ ಅನುರಣಿಸುವ ಇನಿ ಇನಿ ಮಾರ್ದನಿ. ಇದು ಎಲ್ಲರ ಬದುಕಿನ ಪ್ರೇಮವಸಂತ ಕಾಲದ ಎದೆಯ ಚಿರ ಚಿರಂತನ ಇಬ್ಬನಿ. ಇದು ತಾರುಣ್ಯದ ನವಿರು ಪುಳಕ ರೋಮಾಂಚನಗಳ ಭಾವವಷ್ಟೇ ಅಲ್ಲ. ಅನುರಾಗದ ಆರಾಧನೆಯ ಆಂತರ್ಯಗಳಲಿ ಎಂದೆಂದೂ ಮಾಸದ ಮಸುಕಾಗದ ನವ ನವೀನ ಅನುಭಾವ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಒಗಟಿನ ಹನಿಗಳ ಪ್ರೇಮ್ ಕಹಾನಿ
.!
1. ರಸ್ತೆಯುದ್ದಕ್ಕೂ
ತಲೆಬಾಗಿಸಿ ನಡೆದು
ರಸ್ತೆಯಂಚಲ್ಲಿ ಬಾಗಿ
ತಿರುಗಿ ನೋಡುವುದೇಕೆ?
***
2. ಸರ ಸರನೆ ಸಾಗಿ
ಮರೆಯಾಗುವುದೇಕೆ?
ಹಾದಿ ತಿರುವಿನಲಿ
ಮರಳಿ ಮರಳಿ
ಹೊರಳಿ ನೋಡುವುದೇಕೆ.?
***
3. ಕಣ್ಣು ಸೆಳೆಯಲೆಂದೆ
ಬೇಕೆಂದೆ ಬಿದ್ದು ಬಿದ್ದು
ಸದ್ದು ಮಾಡಿ ನಗುವುದೇಕೆ?
ನೋಡಿದರು ನೋಡದಂತೆ
ಕಂಗಳ ಅರಳಿಸುವುದೇಕೆ?
***
4. ಮುದ್ದು ಮುದ್ದಾಗಿ
ಮೆಲುವಾಗಿ ನುಡಿವುದೇಕೆ?
ಕದ್ದು ಕದ್ದು ನೋಡುವುದೇಕೆ?
ಏನೇನೂ ಅರಿಯದಂತೆ
ಕಣ್ತಪ್ಪಿಸುತ ನಟಿಸುವುದೇಕೆ?
***
5. ಸನಿಹದಿ ಎದುರಿದ್ದಾಗ
ಮರೆತಂತೆ ನಟಿಸುವುದೇಕೆ?
ಮರೆಯಾದೊಡನೆ ಅತ್ತಿತ್ತ
ಕಣ್ಣರಳಿಸಿ ಹುಡುಕುವುದೇಕೆ?
***
7. ಮನಸಿನ ಕದಮುಚ್ಚಿ
ಕನಸಿನ ಕಿಟಕಿ ತೆರೆದು
ನಿಂತು ಕಾಯುವುದೇಕೆ?
***
8. ಎದೆಯ ಬಾಗಿಲು
ಹಾಕಿಕೊಂಡು ಮೆಲ್ಲನೆ
ಕಣ್ಣಂಚಿನ ಕಿಟಕಿಯಲಿ
ಬಗ್ಗಿ ನೋಡುವುದೇಕೆ?
***
9. ಒಲವಿದ್ದರೂ ಒಲಿಯದ
ನಲಿಯದ ಬಿಂಕವೇಕೆ.?
ಪ್ರೇಮ ಪ್ರಕಟಣೆಗೂ
ಈ ಪರಿಯ ಸುಂಕವೇಕೆ?
ಅನುರಾಗದ ಆಭಿವ್ಯಕ್ತಿಗೂ
ಅನುಕ್ಷಣ ಆತಂಕವೇಕೆ.?
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments