* ವರ್ಷಧಾರೆ *

 "ಅಬ್ಬಾ.. ಅದೇನು ಮಳೆ, ಮಳೆ, ಮಳೆ. ನೀವೊಮ್ಮೆ ನಮ್ಮೀ ಕರಾವಳಿ ತೀರದ, ಪಶ್ಚಿಮ ಘಟ್ಟದಲ್ಲಿ ಬಂದು ನೋಡಬೇಕು. ಎಲ್ಲೆಲ್ಲೂ ನೀರು. ದಶಕಗಳಿಂದ ಇಂತಹ ವರ್ಷಧಾರೆ ನೋಡಿರಲಿಲ್ಲ. ಈ ಬಾರಿ ನಮ್ಮಲ್ಲಿ ಅಂದಾಜು 5 ಮೀಟರಿಗಿಂತಲೂ ಹೆಚ್ಚು ಮಳೆಯಾಗಿದೆ. ಇನ್ನೂ ಮಳೆ ಸುರಿಯುತ್ತಲೇ ಇದೆ. ಈ ಸಲದ ವರ್ಷಧಾರೆ ರುದ್ರ ರಮಣೀಯ. ಸಾವಿರಾರು ಬದುಕುಗಳನ್ನು ಬರಡಾಗಿಸಿದ ರೌದ್ರತೆ. ಇನ್ನಿಲ್ಲದಂತೆ ಕಂಗಳ ಸೆಳೆಯುವ ರಮಣೀಯತೆ. ಈ ಕವಿತೆ ಮಳೆಯಿಂದ, ಮಳೆಗಾಗಿ, ಮಳೆಗೋಸ್ಕರ. ಸರ್ವೇ ಜನಾನ ಸುಖಿನೋಭವಂತು" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.


ವರ್ಷಧಾರೆ


..!


ಹಗಲಿರುಳು ಅಂಬರದಿ

ಮೇಘಗಳ ಆಲಿಂಘನ.!

ಗುಡುಗು, ಸಿಡಿಲುಗಳ

ರುದ್ರ-ರಮ್ಯ ಕೀರ್ತನ.!


ಕಂಗಳ ಕೋರೈಸುವ 

ಮಿಂಚಿನೋಲೆ ದರ್ಶನ.!

ಜಿಟಿಜಟಿ ಮಳೆಹನಿಗಳ

ಮಧುರ ಮಂಜುಳಗಾನ.!


ಎತ್ತ ಕಣ್ಣು ಹಾಯಿಸಿದರೂ..

ನೀರು.. ನೀರು.. ನೀರು..

ಹಿಗ್ಗಿ ಮೈದುಂಬಿ ಸಾಗುತಿದೆ

ಜಲದೇವತೆಯ ತೇರು.!


ಆಗಸಕೆ ತೂತು ಬಿದ್ದಂತೆ

ಸುರಿಯುತಿದೆ ವರ್ಷಧಾರೆ.!

ಎಲ್ಲೆಡೆ ತುಂಬಿ ಹರಿಯುತಿದೆ

ನದಿನಾಲೆ ಹಳ್ಳಕೊಳ್ಳ ಕೆರೆ.!


ನಿರಂತರ ಸುರಿದ ಧಾರೆಗೆ,

ತಣಿದಿಹಳು, ನಲಿದಿಹಳು

ಕಾದು ಕನಲಿದ್ದ ವಸುಂಧರೆ.!

ಉಕ್ಕಿ ಹರಿದಿದೆ ಮಡಿಲ ತೊರೆ.!


ಮೈದೊಳೆದು ಶುಭ್ರವಾದ

ಮರಗಿಡ ಎಲೆಯೆಲೆಯಲಿ

ಧನ್ಯತೆಯ ಮುಗುಳುನಗೆ.!

ಉಕ್ಕಿ ಒಸರುತಿದೆ ಎಲ್ಲೆಲ್ಲು

ಹೊಸ ಜೀವಕಳೆಯ ಒಸಗೆ.!


ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments