ಹುಟ್ಟುವಾಗ ಯಾರೂ ಇದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿ ಬಂದಿಲ್ಲ: ವಾಲ್ಮೀಕಿ ಜಯಂತಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಏನ್ ಹೇಳಿದ್ರು ?
ಅಥಣಿ: ಹುಟ್ಟುವಾಗ ಯಾರೂ ಇದೇ ಜಾತಿಯಲ್ಲಿ ನಾವು ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿ ಬಂದಿಲ್ಲ. ಹುಟ್ಟು ಸ್ವಾಭಾವಿಕ. ಆದ್ದರಿಂದ ಎಲ್ಲರಿಗೂ ಅವರ ಅವರ ಜಾತಿ ಧರ್ಮಗಳ ಬಗ್ಗೆ ಹೆಮ್ಮೆ, ಗೌರವ ಇರಲಿ. ಬೇರೆ ಜಾತಿವರ ಬಗ್ಗೆಯೂ ಅದೇ ಮನಸ್ಥಿತಿ ನಿಮ್ಮದಾಗಿರಲಿ. ಆದರೆ, ನಮ್ಮ ದೇಶದಲ್ಲಿ ಆಗಿ ಹೋದ ಮಹಾಪುರುಷರು, ಮಹಾತ್ಮರು, ಸಮಾಜ ಸುಧಾರಕರು, ಜನರ ಉದ್ಧಾರಕ್ಕಾಗಿ, ನಾಡಿನ ಏಳ್ಗೆಗಾಗಿ ಕೊಡುಗೆ ನೀಡಿದವರ ಸ್ಮರಣೆ, ಉತ್ಸವ, ಜಯಂತಿಗಳನ್ನು ಮಾತ್ರ ಆಯಾ ಜಾತಿಗೆ ಸೀಮಿತಗೊಳಿಸುತ್ತಿರುವುದೇಕೆ? ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಪ್ರಶ್ನಿಸಿದರು.
ಅಥಣಿ ತಾಲೂಕಾಡಳಿತ, ತಾ.ಪಂ., ಪುರಸಭೆ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಥಣಿ ಪಟ್ಟಣದ ತಾ.ಪಂ. ಸಭಾಭವನದಲ್ಲಿ ಅ. 17ರಂದು ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರ ತತ್ವ ಸಂದೇಶಗಳನ್ನು, ಅವರ ವಿಚಾರಧಾರೆಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲ ಜಾತಿ ಜನಾಂಗದಲ್ಲಿಯೂ ಬಡವರು, ಹಿಂದುಳಿದವರು ಬದುಕಿಗಾಗಿ ನಿತ್ಯವೂ ಹಗಲಿರುಳು ಕಷ್ಟಪಡುತ್ತಿರುವವರು ಇನ್ನೂ ಇದ್ದಾರೆ. ನಿಜವಾಗಿ ಅಂಥವರಿಗೆ ಸರ್ಕಾರದ ಮೀಸಲಾತಿ ಹಾಗೂ ಜನ ಕಲ್ಯಾಣಕ್ಕಾಗಿ ಸರ್ಕಾರಗಳು ರೂಪಿಸಿರುವ ಇನ್ನಿತರ ಸರ್ಕಾರಿ ಸೌಲಭ್ಯಗಳು ಸಿಗಬೇಕು. ಅಂದಾಗ ಮೀಸಲಾತಿಗೆ ಒಂದು ನಿಜವಾದ ಅರ್ಥ ಬರುತ್ತದೆ. ಮೀಸಲಾತಿಯ ಹೆಸರಲ್ಲಿ ಈಗಾಗಲೇ ಆರ್ಥಿಕವಾಗಿ ಸಶಕ್ತರಿರುವವರು ಮತ್ತೆ ಇದರ ಲಾಭ ಪಡೆಯುತ್ತಾ ಸಾಗಿದರೆ ಹಿಂದುಳಿದವರು ಹಿಂದುಳಿಯುತ್ತಲೇ ಇರುತ್ತಾರೆ. ನಾವು ಸ್ವಾಭಿಮಾನದಿಂದ ದುಡಿದು ನಮ್ಮ ಸ್ವಂತ ಶ್ರಮ, ಪ್ರಯತ್ನದ ಫಲದಿಂದ ಸಮಾಜದಲ್ಲಿ ಮುಂದೆ ಬರಬೇಕೆ ಹೊರತು, ನಾವು ಈಗಿರುವ ನಮ್ಮ ಪರಿಸ್ಥಿತಿಗೆ ಕಾರಣ ಕೇವಲ ಬೇರೆ ಇನ್ಯಾರೋ ವ್ಯಕ್ತಿಗಳು, ಜಾತಿ ಜನಾಂಗದವರು ಎಂದು ಭಾವಿಸಿ ದೂಷಿಸುತ್ತಾ ಸಾಗಿದರೆ, ಇದರಿಂದ ನಾವು ಇನ್ನಷ್ಟು ಚಿಕ್ಕವರಾಗುತ್ತೇವೆಯೇ ಹೊರತು ಇದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಶಿಕ್ಷಣವೇ ದೊಡ್ಡ ಅಸ್ತ್ರ:
ನೀವು ಎಷ್ಟೇ ಕಷ್ಟದಲ್ಲಿರಲಿ, ನಿಮ್ಮ ಮಕ್ಕಳಿಗೆ ನಿಮಗಿಂತ ಉತ್ತಮ ಮಟ್ಟದ ಜೀವನ ರೂಪಿಸಲು ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು. ಸಮಾಜದಲ್ಲಿ ನಿಮ್ಮ ಮಕ್ಕಳು ಮುಂದೆ ಬರಬೇಕು, ಏನಾದರೂ ಸಾಧನೆ ಮಾಡಬೇಕು ಅಂದರೆ, ಅದಕ್ಕೆ ಶಿಕ್ಷಣವೇ ದೊಡ್ಡ ಅಸ್ತ್ರವಾಗಿದೆ. ಆದ್ದರಿಂದ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಬೇಕು. ಮಹಾತ್ಮರ ಜಯಂತಿ, ಧಾರ್ಮಿಕ ಕಾರ್ಯಕ್ರಮಗಳನ್ನು, ಉತ್ಸವಗಳನ್ನು ಎಲ್ಲ ಧರ್ಮದವರೂ ಒಟ್ಟಾಗಿ ಸೌಹಾರ್ದಯುವಾಗಿ ಆಚರಿಸಬೇಕು. ಇದರಿಂದ ಸಮಾಜದಲ್ಲಿ ಸಾಮಾಜಿಕ ಹೊಸ ಪರಿವರ್ತನೆ ಸಾಧ್ಯವಾಗಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಹಾರೂಗೇರಿಯ ನಿವೃತ್ತ ಉಪನ್ಯಾಸಕಿ ಶ್ರೀಮತಿ ರತ್ನಾ ಬಾಳಪ್ಪನವರ ಉಪನ್ಯಾಸ ನೀಡಿದರು. ಪುರಸಭೆ ಅಧ್ಯಕ್ಷೆ ಶ್ರೀಮತಿ ಶಿವಲೀಲಾ ಸ. ಬುಟಾಳಿ, ಉಪಾಧ್ಯಕ್ಷೆ ಶ್ರೀಮತಿ ಭುವನೇಶ್ವರಿ ಬೀ. ಯಕ್ಕಂಚಿ ಮಾತನಾಡಿದರು. ಪುರಸಭೆ ಸದಸ್ಯರಾದ ರಾಜು ಗುಡೋಡಗಿ, ಮಲ್ಲಿಕಾರ್ಜುನ ಬಿಳ್ಳೂರ, ಪ್ರಮೋದ ಬಿಳ್ಳೂರ, ರಮೇಶ ಪವಾರ, ಬಸವರಾಜ ನಾಯಿಕ, ವಾಲ್ಮೀಕಿ ಸಮಾಜದ ಅಥಣಿ ತಾಲೂಕಾಧ್ಯಕ್ಷ ಬಾಪು ರಾಮು ಹುಲ್ಯಾಳ, ಉಪಾಧ್ಯಕ್ಷ ಮುದಕಾ ಗಸ್ತಿ, ಜಿ.ಪಂ. ಮಾಜಿ ಸದಸ್ಯ ಶ್ರೀಶೈಲ ಗಸ್ತಿ, ಪುರಸಭೆ ಮಾಜಿ ಸದಸ್ಯ ಪ್ರಕಾಶ ಕೋಳಿ, ಲಕ್ಕಪ್ಪಾ ನಾಯಿಕ, ವೀರಪ್ಪಾ ಹಾರೂಗೇರಿ, ಧರ್ಮಣ್ಣ ಗಲಗಲಿ, ನಾಗಪ್ಪ ದಳವಾಯಿ, ಮಲ್ಲಪ್ಪಾ ನಾಯಿಕ, ಸಿದ್ರಾಯ ನಾಯಿಕ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಎ.ಇ.ಇ. ಈರಣ್ಣ ವಾಲಿ, ಟಿ.ಎಚ್.ಒ. ಬಸಗೌಡ ಕಾಗೆ, ನೀರಾವರಿ ಇಲಾಖೆಯ ಅಧಿಕಾರಿ ಪ್ರವೀಣ ಹುಣಸೀಕಟ್ಟಿ, ಗ್ರೇಡ್ 2 ತಹಸೀಲ್ದಾರ್ ಮಹಾದೇವ ಬಿರಾದರ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳಾದ ವೆಂಕಟೇಶ ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆಯ ಚಂದ್ರು ಕಾಂಬಳೆ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ತಹಸೀಲ್ದಾರ್ ಸಿದ್ರಾಯ ಬೋಸಗಿ ಸ್ವಾಗತಿಸಿದರು. ಶಿಕ್ಷಕರಾದ ಸಂಗಮೇಶ ಹಚಡದ ನಿರೂಪಿಸಿರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಸವರಾಜ ಎಸ್. ಯಾದವಾಡ ವಂದಿಸಿದರು.
ವರದಿ :ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments