* *ಕಬ್ಬಿನ ತೂಕದಲ್ಲಿ ಮೋಸವಾಗಿದ್ದು ದೃಢಪಟ್ಟರೆ ರಾಜೀನಾಮೆ: ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಸವಾಲ್ !

 ಕಬ್ಬಿನ ತೂಕದಲ್ಲಿ ಮೋಸವಾಗಿದ್ದು ದೃಢಪಟ್ಟರೆ ರಾಜೀನಾಮೆ: 

ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಸವಾಲ್ !



ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುವ ಕಬ್ಬಿನ ತೂಕದಲ್ಲಿ  1 ಕೆ.ಜಿ. ಯಷ್ಟಾದರೂ ಮೋಸ ಆಗಿದೆ ಎಂದು ರೈತನೋರ್ವ ದೃಢಪಡಿಸಿದ ಮರುಕ್ಷಣವೇ ನಾನು ನನ್ನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡುತ್ತೇನೆ ಎಂದು ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು. ಅವರು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ 23ನೇ ಕಬ್ಬು ನುರಿಸುವ ಹಂಗಾಮಿಗೆ ಅ. 18ರಂದು ಚಾಲನೆ ನೀಡಿ ಮಾತನಾಡಿದರು.

ಪ್ರತಿ ಹಂಗಾಮಿನಲ್ಲಿಯೂ ನಮ್ಮ ಸುತ್ತಮುತ್ತಲಿನ ಅನೇಕ ಸಕ್ಕರೆ ಕಾರ್ಖಾನೆಗಳ ವಿರುದ್ಧ ತೂಕದಲ್ಲಿ ಮೋಸ ಆಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಆದರೆ, ಒಂದು ಬಾರಿಯೂ ನಮ್ಮ ಕಾರ್ಖಾನೆ ವಿರುದ್ಧ ಆರೋಪಗಳು ಕೇಳಿ ಬಂದಿಲ್ಲ ಎಂದ ಅವರು, ರೈತರ ಕಾರ್ಖಾನೆಯಾಗಿದ್ದರಿಂದ ಯಾವ ರೀತಿಯಿಂದಲೂ ರೈತರಿಗೆ ಮೋಸ ಆಗದಂತೆ ನಮ್ಮ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಸಹಕಾರಿ ತತ್ವದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಉತ್ತಮ ಗುಣಮಟ್ಟದ ಕಬ್ಬನ್ನು ಪೂರೈಕೆ ಮಾಡುವ ಮೂಲಕ ಕಾರಖಾನೆಯನ್ನು ಗಟ್ಟಿಗೊಳಿಸಬೇಕು ಎಂದ ಅವರು, ಅಥಣಿ ತಾಲೂಕಿನಲ್ಲಿಯೇ 5 ಖಾಸಗಿ ಮತ್ತು ತಾಲೂಕಿನ ಸುತ್ತಮುತ್ತ ಅನೇಕ ಖಾಸಗಿ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಪೈಪೋಟಿ ಅಥವಾ ಆಮಿಷಗಳಿಗೆ ಒಳಗಾಗದೇ ಸಹಕಾರಿ ಕಾರಖಾನೆಗೆ ಕಬ್ಬು ಪೂರೈಸಿ ಎಂದು ಮನವಿ ಮಾಡಿದರು.

ಕಳೆದ 20 ವರ್ಷಗಳಿಂದ ನಮ್ಮ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 350 ಕಾರ್ಮಿಕರನ್ನು ಖಾಯಂಗೊಳಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅನೇಕ ಕಾನೂನು ತೊಡಕುಗಳು ಇದ್ದರೂ ಕೂಡ ಅವುಗಳನ್ನು ಸರಿಪಡಿಸಿ ಖಾಯಂಗೊಳಿಸಿದ್ದೇವೆ ಎಂದ ಅವರು, ನಮ್ಮಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಕಾರ್ಮಿಕರು ಕಾರಖಾನೆಗೆ ಕಬ್ಬು ಪೂರೈಕೆ ಮಾಡುವ ರೈತರ ಮಕ್ಕಳಾಗಿದ್ದರಿಂದ ಅವರನ್ನು ಖಾಯಂಗೊಳಿಸುವುದು ನಮ್ಮ ಜವಾಬ್ದಾರಿಯಾಗಿತ್ತು ಎಂದು ಹೇಳಿದರು.

8 ಲಕ್ಷ ಟನ್ ಕಬ್ಬು ನುರಿಸುವ ಗುರಿ:

ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್. ಪಾಟೀಲ ಮಾತನಾಡಿ,  ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ 8 ಲಕ್ಷ ಟನ್‌ ಕಬ್ಬು ನುರಿಸುವ ಗುರಿ ಇಟ್ಟುಕೊಂಡಿದ್ದು, ರೈತರು ತಮ್ಮ ಉತ್ತಮ ಗುಣಮಟ್ಟದ ಕಬ್ಬನ್ನು ಪೂರೈಕೆ ಮಾಡುವ ಮೂಲಕ ಕಾರಖಾನೆಯ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದ‌ ಅವರು, ಅಧ್ಯಕ್ಷರ ಮಾರ್ಗದರ್ಶನದಲ್ಲಿ ಕಾರಖಾನೆಯಲ್ಲಿ  2015ರ ವರೆಗೆ ಕಾರ್ಯನಿರ್ವಹಿಸುತ್ತಿದ್ದ 350 ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಲ್ಯಾಳ ವೀರಕ್ತ ಮಠದ ಶ್ರೀ  ಗುರುಸಿದ್ಧ ಸ್ವಾಮೀಜಿ, ಹಣಮಾಪುರದ ಶ್ರೀ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು, ಅಥಣಿ ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ, ಬಾಡಗಿಯ ಶ್ರೀ ವನಸಿದ್ಧ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.  ಕಾರ್ಮಿಕ ಸಂಘದ ಅಧ್ಯಕ್ಷ ಎಮ್.ಟಿ. ಬೊರಗಾಂವಿ ಮಾತನಾಡಿ, ಕಾರ್ಮಿಕರ ಖಾಯಂ ಮಾಡಲು ಸಹಕರಿಸಿದ ಕಾರಖಾನೆ ಅಧ್ಯಕ್ಷ  ಪರಪ್ಪ ಸವದಿ, ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್. ಪಾಟೀಲ ಮತ್ತು ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 5 ಜನ ಕಾರ್ಮಿಕರಿಗೆ ಖಾಯಂಗೊಳಿಸಿದ ದಾಖಲಾತಿಯನ್ನು ನೀಡಲಾಯಿತು. ಕಾರ್ಖಾನೆ ನಿರ್ದೇಶಕ ಘೂಳಪ್ಪ ಜತ್ತಿ ಸ್ವಾಗತಿಸಿದರು. ಕಚೇರಿ ಅಧಿಕ್ಷಕ ಸುರೇಶ ಠಕ್ಕಣ್ಣವರ ನಿರೂಪಿಸಿದರು. 

ಕಾರ್ಯಕ್ರಮದಲ್ಲಿ ಕಾರಖಾನೆಯ ಆಡಳಿತ ಮಂಡಳಿ ಸದಸ್ಯರು, ಕಬ್ಬು ಬೆಳೆಗಾರರು, ಸಿಬ್ಬಂದಿ ಮತ್ತು ಕಾರ್ಮಿಕ ವರ್ಗದ ಸದಸ್ಯರು ಉಪಸ್ಥಿತರಿದ್ದರು.


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments