"ಇದು ಜೀವದ ಜೀವಗಾನದ ಕವಿತೆ. ಬದುಕಿನ ಬಾಳಯಾನದ ನಿತ್ಯ ಸತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನದ ಸಾರವಿದೆ. ಅರ್ಥೈಸಿದಷ್ಟೂ ಬಾಳಿನ ಆಸ್ವಾಧನೆ, ಆರಾಧನೆ, ಅನುಭಾವಗಳ ವಿಸ್ತಾರವಿದೆ. ಜಗದ ಸಂತೆಯ ಎಲ್ಲ ಜಂಜಡಗಳ ನಡುವೆ, ಭವಿಷ್ಯ ಆಯುಷ್ಯ ಗೊಂದಲಗಳ ನಡುವೆ, ಬಂಧ-ಬಂಧನ ಭಾಷ್ಯಗಳ ನಡುವೆ ನಾವು ನಮಗಾಗಿ ಅದೆಷ್ಟು ಬದುಕಿದೆವು, ಜೀವಿಸಿದ ಕ್ಷಣಗಳನು ಅದೆಷ್ಟು ಮಧುರವಾಗಿಸಿಕೊಂಡೆವು ಎನ್ನುವುದರಲ್ಲಿದೆ ಜೀವದ ಸಾರ್ಥಕತೆ, ಜೀವನ ಸಾಫಲ್ಯತೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಬಾಳಯಾನದ ಭಾವಗಾನ.!
ಬಂದ ಕ್ಷಣಗಳನು ಬರಸೆಳೆದು ಬಿಗಿದಪ್ಪುತ
ಬದುಕಿ ಬಿಡಬೇಕು ಸ್ಮರಣೀಯವಾಗುವಂತೆ
ಉಸಿರಿರುವವರೆಗು ಎದೆಗೂಡು ಹಸಿರಾಗುವಂತೆ
ಬದುಕಿದ ಪ್ರತಿಕ್ಷಣವೂ ಚಿರ ಹೆಸರಾಗುವಂತೆ.!
ಬಾಳಿನುದ್ದಕೂ ಮಧು ಮಧುರ ನೆನಪಾಗುವಂತೆ.!
ಅಚ್ಯುತನಿತ್ತ ಅನುಗ್ರಹವೆಂದು ಆಸ್ವಾಧಿಸುತ
ಬಾಗಿ ಬೊಗಸೆಯೊಡ್ಡಿ ಕರದಿ ಮೊಗೆ ಮೊಗೆದು
ಬಾಯ್ತೆರೆದು ಒಡಲು ತುಂಬಿಸಿಕೊಳ್ಳಬೇಕು
ಹನಿಯೊಂದೂ ಅಂಗೈಯಿಂದ ಕೆಳಗೆ ಜಾರದಂತೆ.!
ಪ್ರತಿ ಬಿಂದುವೂ ಹೃದಯ ಹಸಿಯಾಗಿಸುವಂತೆ.!
ಇಟ್ಟ ಹೆಜ್ಜೆಯ ಪ್ರತಿ ಸಪ್ಪಳ ಇನಿಯಾಗುವಂತೆ
ಆಡಿದ ನುಡಿಯ ಪ್ರತಿ ಸದ್ದೂ ಇಂಚರಿಸುವಂತೆ
ಮಿಡಿದ ಪ್ರತಿ ಭಾವವೂ ಬೆಳದಿಂಗಳಾಗುವಂತೆ
ಜೊತೆಯಿದ್ದ ಜೀವಗಳು ಹಾಡಿ ಝೇಂಕರಿಸುವಂತೆ
ಆನಂದ ಆಸ್ವಾಧನೆಗಳು ನಿತ್ಯ ಅನುರಣಿಸುವಂತೆ.!
ಕಳೆದುಹೋದ ನಿನ್ನೆ ಕಂಡಿರದ ನಾಳೆಗಳ ನಡುವೆ
ಅವನೇ ಕರುಣಿಸಿದ ಕಣ್ಣೆದುರ ಇಂದುಗಳಷ್ಟೆ ಸತ್ಯ
ಮುಂದಿನ ಕ್ಷಣದ ಭ್ರಮೆ ಭ್ರಾಂತಿಗಳೆಲ್ಲವೂ ಮಿಥ್ಯ
ಬದುಕು ಯಾವ ಕ್ಷಣಕೂ ಸೇರಬಹುದು ನೇಪಥ್ಯ
ಜೀವಿಸುವ ಇಂದಿನ ಈ ಸಮಯವಷ್ಟೇ ನಿಜಸತ್ಯ.!
ಬದುಕುವ ಘಳಿಗೆ ಘಳಿಗೆಗೂ ನಮ್ಮದೇ ನಾಯಕತ್ವ
ನಮ್ಮೆಲ್ಲ ಸಂತಸಕೆ ನಾವಷ್ಟೆ ಇಲ್ಲಿ ಉತ್ತರದಾಯಿತ್ವ
ಸಿಕ್ಕಿದ್ದೆಲ್ಲವನು ಜತನದಿ ಕಾಪಿಟ್ಟು ಸಂಭ್ರಮಿಸಬೇಕು
ಕೊಟ್ಟವರ ಕಂಗಳಲಿ ಮೂಡಿಸಬೇಕು ಆನಂದಭಾಷ್ಪ
ಬಾಳಬಣ್ಣಗಳಲಿ ಮಿಂದು ಮಿನುಗಬೇಕು ಜೀವಶಿಲ್ಪ.!
ಪ್ರತಿಕ್ಷಣವೂ ವಿಧಾತನಿತ್ತ ಪಾಲಿನ ಪಂಚಾಮೃತ
ಆರಾಧಿಸುತ ನಮ್ಮದಾಗಿಸಿಕೊಳ್ಳಬೇಕು ಆದ್ಯಂತ
ಅವಿಸ್ಮರಣೀಯವಾಗುವಂತೆ ಬಾಳಿನ ಪರ್ಯಂತ
ಬೆಳಕಾಗುತ ಬೆಳಗಬೇಕು ಹೃನ್ಮನಗಳ ದಿಗ್ಧಿಗಂತ
ಬದುಕಿದ ಕ್ಷಣ ಅಮರವಾದರಷ್ಟೆ ಜೀವಜೀವಂತ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments