ಪರಿಣಯ ಪಯಣ.!

 "ಇದು ವಿವಾಹ ವಾರ್ಷಿಕೋತ್ಸವ ದಿನದ ಜೀವ ಸಂವೇದನೆಗಳ ಕವಿತೆ. ಮದುವೆಯ ದಿನದ ನೆನಪಿನಂಗಳದಿ ರಿಂಗಣಿಸುವ ಭಾವ ಭಾಷ್ಯಗಳ ಹೃದ್ಯಗೀತೆ. ವರ್ಷ ವರ್ಷಗಳ ಪರಿಣಯ ಪಯಣದ ಸ್ವರಗೀತೆ. ಈ ಕವಿತೆಗೆ ನಿಮ್ಮ ಅಕ್ಷರಪ್ರೀತಿಯ ಅನುಗ್ರಹವಿರಲಿ. ಈ ದಿನಕ್ಕೆ ನಿಮ್ಮ ಅಕ್ಕರೆ ಆಂತರ್ಯದ ಹಾರೈಕೆಯಿರಲಿ." - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. 



ಪರಿಣಯ ಪಯಣ.!



ಕಷ್ಟ-ಸಂಕಟದಿ ಏಗುತ್ತಾ

ಸುಖ-ಸಂತಸದಿ ಬೀಗುತ್ತಾ

ದೈವದೆದುದುರು ಬಾಗುತ್ತಾ

ಕಾಲದೊಂದಿಗೆ ಮಾಗುತ್ತಾ


ಜೊತೆಜೊತೆಯಾಗಿ ಸಾಗುತ್ತಾ

ನಡೆದಿದೆ ಸಂಸಾರದ ಬಂಡಿ

ಬೆಸೆದು ಜೋಡಿ ಜೀವಗಳಿಗೆ

ಜನ್ಮಗಳ ಒಲವಿನ ಕೊಂಡಿ.!


ಏರು ಜಾರುಗಳನು ಲೆಕ್ಕಿಸದೆ

ಸಾಗಲಿ ಬದುಕಿನಾ ಪಯಣ

ಅನುರಣಿಸುತ್ತ ಅನುಕ್ಷಣವು

ಪ್ರೇಮ ಅನುರಾಗದ ರಿಂಗಣ.!


ಸವಿನೆನಪುಗಳ ನವೀಕರಿಸುತ್ತ

ಭರವಸೆಗಳನು ಸಮೀಕರಿಸುತ್ತ

ಕಂಡ ಕನಸುಗಳ ಸಾಕಾರಿಸುತ್ತ

ಚಲಿಸಲಿ ಸಂಸಾರ ಸಾರೋಟು.! 


ಬಾಳಲಿ ಬಂದದ್ದೆಲ್ಲ ಬರಲಿ

ಕೇಶವನ ದಯೆಯೊಂದಿರಲಿ

ಬೆಳಗುತ ಅಕ್ಕರೆ ಅಂತಃಕರಣ

ನಡೆಯಲಿ ಬೆಳಕಿನ ಚಾರಣ.!


ಸ್ಫೂರ್ತಿ ಚೈತನ್ಯದಾಯಿಯಾಗಿ

ಬೆಳಕಿಡುತ ಬೆಳಗಲಿ ಬಾಳಪಥ

ಸಾಗುತಿರಲಿ ಜೀವನ್ಮುಖಿಯಾಗಿ 

ನವೋತ್ಸಾಹದಿ ಸಂಸಾರ ರಥ.!


ಹರಸುವ ಮನಗಳಿಗೆ ವಂದಿಸುತ

ಒಲುಮೆ ಜೀವವ ಅಭಿನಂದಿಸುತ

ವಿವಾಹದಿನಕಿದೋ ಕಾವ್ಯನಮನ

ವಾರ್ಷಿಕೋತ್ಸವದ ಶುಭಕಾಮನ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments