*ಕೆಂಪಿ(ಸದ್ದಿಲ್ಲದೆ ಗೆದ್ದವಳು)*
ಬಾಲ್ಯದಲ್ಲಿಯೇ
ಬಾಸಿಂಗು ಇವಳ
ಹಣೆಯನ್ನೇರಿತ್ತು,
ಹರೆಯ ಹರದಾರಿ
ದೂರದೊಳಗಿತ್ತು,
ತಾಳಿಯ ಕುಣಿಕೆ
ಕೊರಳಿಗೇರಿತ್ತು,
ದಿಕ್ಕು ತೋಚದೇ
ದಾರಿ ತಿಳಿಯದೇ
ಇದ್ದ ಗಳಿಗೆಯಲ್ಲಿ
ಜವಾಬು ಇಲ್ಲದೇ
ಜವಾಬ್ದಾರಿಯಂತು
ಹೆಗಲ ಮೇಲಿತ್ತು,
ಎಲ್ಲವೂ ಮುಗಿದೇ
ಹೋಗಿತ್ತು...ಕೆಂಪಿ
ಕಥೆಯು ಹೀಗಿತ್ತು
ಗಂಡ ಹೆಂಡತಿಗಿಂತ
ಮೊದಲು ಹೆಂಡದ
ಕೈಯ ಹಿಡಿದಾಗಿತ್ತು,
ಇದ್ದ ಬಿಡಿಗಾಸೆಲ್ಲವು
ಮದ್ಯದ ಅಮಲಿನ
ಖಜಾನೆಯ ಸೇರಿತ್ತು,
ಯಾರ ಬುದ್ಧಿಮಾತು
ಕಿವಿಗೆ ಕೇಳದಾಗಿತ್ತು,
ನಶೆಯಿಂದ ನಸೀಬು
ತುಂಬ ಖರಾಬಾಗಿತ್ತು,
ತಿದ್ದಲು ತೀಡಲಾಗದೆ
ಕೆಂಪಿ ದೂರವಾದಳು,
ಈ ಪರಿಯ ಪರಿಸ್ಥಿತಿಗೆ
ಯಾರ ದೂರದಾದಳು
ಕೆಂಪಿಯ ಈ ಬದುಕಿಗೆ
ತಿರುವೊಂದು ಬೇಕಿತ್ತು,
ಕುಡುಕ ಗಂಡನಿಂದ
ವಿಚ್ಛೇದನ ಪಡೆದಳು,
ಸ್ವಾವಲಂಬಿಯಾಗಿ ತಾ
ಗುರಿಯತ್ತ ನಡೆದಳು,
ಸ್ವತಃ ಸುಟ್ಟುಕೊಂಡು
ಬೆಳಕ ಬಯಸಿದವಳು,
ಬೆಂಕಿಯಲ್ಲೇ ಬಿದ್ದವಳು
ಕೆಂಡವನ್ನೇ ಹೊದ್ದವಳು,
ನನ್ನ ಕವಿತೆಯಲ್ಲಿದ್ದವಳು
ಕೆಂಪಿ ಸದ್ದಿಲ್ಲದೆ ಗೆದ್ದವಳು.
*ಎಮ್ಮಾರ್ಕೆ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments