*ನಿರಾಭರಣ ಸುಂದರಿ.!

 "ಸಹಜ ಚೆಲುವಿನ ಅನಾವರಣದ ಒಲುಮೆಯ ಸುಂದರ ಕವಿತೆ. ಆಡಂಬರಗಳಿಲ್ಲದ ಸತ್ಯ ಸೌಂದರ್ಯದ ರಿಂಗಣಗಳ ಮಧುರ ಭಾವಗೀತೆ. ಕವಿತೆಗೊಪ್ಪುವ ರೂಪದರ್ಶಿ ಬಾಲೆ. ರೂಪದರ್ಶಿಗೊಪ್ಪುವ ಹೃದಯಸ್ಪರ್ಶಿ ಪದಗಳ ಮಾಲೆ. ಇವಳೆ ನಿರಾಭರಣ ಸುಂದರಿ. ಅಕ್ಷರಬಂಧುಗಳ ಅಕ್ಕರೆಯ ಕಾವ್ಯಕಿನ್ನರಿ. ಆರಾಧಿಪ ಆಂತರ್ಯಗಳ ದಿವ್ಯಮಂಜರಿ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ನಿರಾಭರಣ ಸುಂದರಿ.!



ಸ್ವಯಂಪ್ರಕಾಶದಿ ಬೀಗಿರುವಾಗ

ನಿನ್ನಯ ಬೆಳದಿಂಗಳ ಮೊಗದಿ

ಸತ್ಯ ಸಹಜ ಚೆಲುವಿನ ಒಡವೆ

ನಿನಗೆ ಮತ್ತೇಕೆ ಬೇಕು ಚೆಲುವೆ

ಕೃತಕ ಆಭರಣಗಳ ಗೊಡವೆ?!


ಸುಳಿಗಾಳಿ ಸ್ಪರ್ಷಕೆ ಬಳುಕುವ

ಮುಂಗುರುಳ ಲಾಸ್ಯದೊಂದಿಗೆ

ಹೊಳೆದಿದೆ ಕಡುಗಪ್ಪು ರೇಷಿಮೆ

ಎಳೆಗಳಂತಹ ಆಕರ್ಷಕ ಹೆರಳು.!


ಆ ನೀಲ ಕೇಶರಾಶಿಯಡಿಯಲಿ

ಹೊನ್ನಕಾಂತಿಯ ಸ್ಫುರಿಸುತಿಹ

ನೊಸಲ ನಡುವೆ ಮಿನುಗುತಿದೆ

ಕೆಂಪು ಹವಳದಂತೆ ಸಿಂಧೂರ.!


ಕೋಟಿ ಕೋಲ್ಮಿಂಚ ಬೆಳಕನು

ಚೆಲ್ಲುತಿಹ ಕಂಗಳ ಅಂಚಿನಲಿ

ಸೆಳೆದು ಮೆಲ್ಲನೆ ಹೊಳೆಯುತಿದೆ 

ಕೊಹಿನೂರು ವಜ್ರದ ಹೊಳಪು.!


ಆಗಾಗ ಲಜ್ಜೆಯಲಿ ಮೆಲ್ಲ ಬಿರಿವ

ಆ ಮೃದುಲ ಅಧರ ಮಧ್ಯದಿಂದ

ಸುರಿದಿದೆ ಅಪೂರ್ವ ನವಕಾಂತಿಯ

ರಾಶಿ ರಾಶಿ ಮುತ್ತಿನ ನಗೆಮುಗುಳು.!


ಸಮಸ್ತ ಆಭರಣಗಳೆಲ್ಲ ಸೊಬಗು

ಸಕಲ ಮಿನುಗು, ಮೆರುಗು, ಬೆರಗು

ಆವರಿಸಿದೆ ನಿನ್ನ ವದನದುದ್ದಗಲಕು

ಮುಜುಗರವಾಗಿದೆ ಮುತ್ತಿನ ಸಾಗರಕು

ನಾಚಿಕೆಯಾಗಿದೆ ರಜತ, ಕನಕಗಳಿಗು.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments