ಜಗತ್ತಿನ ಮೊದಲ ಸಿವಿಲ್ ಇಂಜಿನಿಯರ್ "ಜಾನ್ ಸ್ಮಿಟನ್"
ಮಿಲಿಟರಿ ಉದ್ದೇಶಗಳಿಗಾಗಿ ಮಾತ್ರ ಸೀಮಿತವಾಗಿದ್ದ ರಸ್ತೆ, ಸೇತುವೆ ಮತ್ತು ಕಟ್ಟಡ ನಿರ್ಮಾಣಗಳನ್ನು ಜನಪಯೋಗಿ ಉದ್ದೇಶಗಳಿಗಾಗಿ ನಿರ್ಮಾಣ ಮಾಡಿದ ಸ್ಮಿಟನ್ ಜನಮನ್ನಣೆಗೆ ಪಾತ್ರನಾದನು.
ಸ್ಮಿಟನ್ ಯಾರ್ಕ್ ಷಯರ್ ಪ್ರಾಂತದ ಆಸ್ತೋರ್ಪ ಎಂಬಲ್ಲಿ 1724 ಜೂನ್ 8ರಂದು ಜನಿಸಿದರು. ವಕೀಲನಾಗಿದ್ದ ಅವನ ತಂದೆಗೆ ಮಗನನ್ನು ಅದೇ ಉದ್ಯೋಗದಲ್ಲಿ ತರಬೇತಿ ಮಾಡುವ ಬಯಕೆ ಇತ್ತು. ಆದರೆ ಸ್ಮಿಟನ್ ಗೆ ಯಂತ್ರ ಉಪಕರಣಗಳ ಬಗೆಗೆ ಅಪಾರ ಆಸಕ್ತಿ ಇತ್ತು. ಇದನ್ನು ಗಮನಿಸಿದ ತಂದೆ ಉಪಕರಣ ತಯಾರಿಕಾ ಅಂಗಡಿಯೊಂದರಲ್ಲಿ ಮಗನಿಗೆ ಉದ್ಯೋಗ ಕೊಡಿಸಿದರು. 1750 ರಲ್ಲಿ ಜಾನ್ ಸ್ಮಿಟನ್ ಸ್ವಂತ ಅಂಗಡಿಯೊಂದನ್ನು ತೆರೆದನು. ಖಗೋಳ ವಿಜ್ಞಾನಿಗಳಿಗೂ, ನೌಕಚಾಲಕರಿಗೂ ಬೇಕಾದ ಅನೇಕ ಉಪಕರಣಗಳನ್ನು ತಯಾರಿಸುತ್ತಿದ್ದನು.
ಸ್ಮಿಟನ್ ಪ್ರಯೋಗಗಳ ಫಲವಾಗಿ ಸಮುದ್ರದಲ್ಲಿ ಹಡಗಿನ ವೇಗವನ್ನು ಅಳೆಯುವ ಉಪಕರಣವೂ, ಉತ್ಕೃಷ್ಟ ದಿಕ್ಸೂಚಿಗಳು ಲಭ್ಯವಾದವು. ನೀರಿನ ಗಿರಣಿ, ಗಾಳಿಗಿರಣಿ ಇತರ ಯಂತ್ರಗಳ ಬಗೆಗೆ ಬರೆದ ಪ್ರಬಂಧಗಳಿಂದ ರಾಯಲ್ ಸೊಸೈಟಿಯ ಸದಸ್ಯತ್ವವನ್ನು ಗಳಿಸಿದನು. ಕಾಲುವೆ ಮತ್ತು ಗಿರಣಿಗಳ ಅಧ್ಯಯನಕ್ಕಾಗಿ 1755ರಲ್ಲಿ ಕೈಗೊಂಡ ದೇಶ ಪರ್ಯಟನೆ ಅವನ ಜೀವನ ಮಾರ್ಗವನ್ನೇ ಬದಲಿಸಿತು. ಇಲ್ಲಿಂದ ಸ್ಮಿಟನ್ ಸಿವಿಲ್ ಇಂಜಿನಿಯರ್ ಆದನು. 1755 ರಲ್ಲಿ ಬೆಂಕಿ ಅನಾಹುತದಿಂದ ನಾಶವಾದ ಎದೀಸ್ಟೋನ್ ದೀಪ ಸ್ತಂಭದ ಪುನರ್ ನಿರ್ಮಾಣದ ಕೆಲಸಕ್ಕೆ ಸ್ಮಿಟನ್ ನನ್ನು ನೇಮಿಸಲಾಯಿತು. ವಿಶೇಷ ರಚನೆಯ ಈ ದೀಪಸ್ತಂಭದ ಕೆಲಸಕ್ಕೆ ನಾಲ್ಕು ವರ್ಷ ಹಿಡಿಯಿತು. ದೊಡ್ಡ ಗಾತ್ರದ ಕಲ್ಲುಗಳು ಒಂದನ್ನೊಂದು ಸಂದುಗಳಲ್ಲಿ ಕೂಡಿಕೊಳ್ಳುವಂತೆ ರಚಿಸಿದ ದೀಪ ಸ್ತಂಭ ಇದು. ಇದರ ರಚನೆಯ ಸಮಯದಲ್ಲಿ ಉತ್ಕೃಷ್ಟ ಸಿಮೆಂಟ್ ತಯಾರಿಕೆಗಾಗಿ ಸ್ಮಿಟನ್ ಅಧ್ಯಯನ ನಡೆಸಿದ. ಆವೇಮಣ್ಣಿನ ಅಂಶವಿದ್ದ ಸುಣ್ಣದಕಲ್ಲು ಸಿಮೆಂಟ್ ತಯಾರಿಕೆಗೆ ಉತ್ತಮವೆಂದು ತೋರಿಸಿಕೊಟ್ಟನು.
ಸ್ಮಿಟನ್ ನ ಸಂಶೋಧನೆಯಿಂದ ಪೋರ್ಟ್ ಲೆಂಡ್ ಸಿಮೆಂಟ್ ಉತ್ಪಾದನೆಗೆ ದಾರಿ ಮಾಡಿತು. 18ನೇ ಶತಮಾನದ ಕೊನೆಯವರೆಗೂ ಇಂಗ್ಲೆಂಡಿನ ನೈಸರ್ಗಿಕ ಬಂದರುಗಳು ನಿರ್ಲಕ್ಷಿಸಲ್ಪಟ್ಟಿದ್ದವು. ಅನೇಕ ಯೋಜನೆಗಳಿಂದ ಹಳೆಯ ಬಂದರುಗಳು ಹೆಚ್ಚು ಉಪಯುಕ್ತವಾದವು. ರಾಮ್ಸ್ ಗೇಟ್ ಕೃತಕ ಬಂದರು ನಿರ್ಮಾಣಕ್ಕೂ ಸ್ಕಾಟ್ಲೆಂಡಿನಲ್ಲಿ ಹಲವು ಕಮಾನು ಸೇತುವೆಗಳ ನಿರ್ಮಾಣಕ್ಕೂ ಸ್ಮಿಟನ್ ಕಾರಣನಾದನು. ಉಗಿ ಎಂಜಿನಿನ ಬೆಳವಣಿಗೆಯಲ್ಲಿ ಸ್ಮಿಟನ್ ಪಾತ್ರವಿದೆ. ಅವನು ಬಾಯ್ಲರ್ ಒಲೆ ಮತ್ತು ಉಗಿ ಸಾಗಿಸುವ ನಳಿಗೆಗಳನ್ನು ವಿಶೇಷವಾಗಿ ಸುಧಾರಿಸಿದ. ತನ್ನ ಬಿಡುವಿನ ಸಮಯವನ್ನು ಯಂತ್ರ ಸಲಕರಣೆಗಳ ಸಹವಾಸದಲ್ಲಿ ಕಳೆಯುತ್ತಿದ್ದ ಸ್ಮಿಟನ್, ಮನೆಯಲ್ಲೇ ಸುಸಜ್ಜಿತವಾಗಿದ್ದ ವೀಕ್ಷಣಾಲಯದಲ್ಲಿ ಖಗೋಲ ಅಧ್ಯಯನ ಮಾಡುವುದು ಅವನ ಇನ್ನೊಂದು ಹವ್ಯಾಸವಾಗಿತ್ತು. ಜಾನ್ ಸ್ಮಿಟನ್ ತನ್ನ ಜನ್ಮಸ್ಥಳದಲ್ಲಿ 1792ರ ಅಕ್ಟೋಬರ್ 28 ರಂದು ನಿಧನನಾದನು.
ಉದಂತ ಶಿವಕುಮಾರ್
ಲೇಖಕ, ಬೆಂಗಳೂರು-560056
ಮೊಬೈಲ್ ನಂ:9739758558
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments