ಪ್ರಾಮಾಣಿಕ ದುಡಿಮೆಯಿಂದ ಕೈಗಾರಿಕೆ, ತಾಂತ್ರಿಕತೆಗೆ ಅಡಿಪಾಯ ಹಾಕಿದ "ಜೆಮ್ ಸೇಟ್ ಜೀ ಟಾಟಾ"
ನವಸಾರಿ ಎಂಬುದು ಒಂದು ಹಳ್ಳಿ. ಮುಂಬಯಿಯ ಉತ್ತರಕ್ಕೆ 238 ಕಿಲೋಮೀಟರ್ ದೂರದಲ್ಲಿದೆ. ಭಾರತದ ಲಕ್ಷಾಂತರ ಹಳ್ಳಿಗಳಲ್ಲಿ ಇದು ಒಂದು ಆಗಬಹುದಿತ್ತು. ಆದರೆ ಪಾರ್ಸಿಗಳು 1142ನೇ ಇಸವಿಯಲ್ಲಿ ಅಲ್ಲಿಗೆ ಬಂದು ನೆಲೆಸಿದ್ದರಿಂದ ಅದಕ್ಕೆ ಮಹತ್ವ ಪ್ರಾಪ್ತವಾಯಿತು. ಪಾರ್ಸಿಗಳು ಉದಾರಿಗಳು, ಸಾಹಸಿಗಳು, ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ ಉಳ್ಳವರು, ರಾಷ್ಟ್ರ ನಿರ್ಮಾಣದಲ್ಲಿ ಮುಂದಾಳುಗಳು ಆದ್ದರಿಂದ ನವಸಾರಿಗೂ ಮಹತ್ವ ಬಂದಿತ್ತು. ಅದರಲ್ಲೂ ಟಾಟಾ ಮನೆತನದ ಮೂಲವೇ ನವಸಾರಿಯಾದರಿಂದ ಅದೊಂದು ಐತಿಹಾಸಿಕ ಮಹತ್ವದ ಸ್ಥಳವಾಗಿದೆ.
ಟಾಟಾ ಮನೆತನದವರು ಪಾರ್ಸಿ ಧರ್ಮದಲ್ಲಿ ಪುರೋಹಿತ ವರ್ಗಕ್ಕೆ ಸೇರಿದವರು. ಆದರೆ ಜೆಮ್ ಸೇಟ್ ಜೀ ಟಾಟಾ ಅವರ ತಂದೆ ನಸರ್ ವಾನ್ ಜೀ ಪರಂಪರಾನುಗತವಾಗಿ ಬಂದ ಪೌರೋಹಿತ್ಯವನ್ನು ತೊರೆದು ದೊಡ್ಡ ಪ್ರಮಾಣದ ಉದ್ಯಮಿಯಲ್ಲಿ ಕೈ ಹಾಕಿದರು. ಪ್ರಾರಂಭದಲ್ಲಿ ಔದ್ಯೋಗಿಕ ಅನುಭವವನ್ನು ನವಸಾರಿಯಲ್ಲಿಯೇ ಒಬ್ಬ ಬ್ಯಾಂಕರ್ ನಿಂದ ಪಡೆದರು. ನವಸಾರಿಯನ್ನು ಬಿಟ್ಟು ಮುಂಬೈಗೆ ಬಂದ ಮೇಲೆ ವಾಣಿಜ್ಯ ಕ್ಷೇತ್ರದಲ್ಲಿ ಅನುಭವ ಹಾಗೂ ಅರ್ಥ ಸಂಚಯವನ್ನು ಮಾಡಿದರು. ಇದರ ಪರಿಣಾಮವಾಗಿಯೇ ಅವರ ಸ್ವಂತ ಉದ್ದಿಮೆ ಅಸ್ತಿತ್ವಕ್ಕೆ ಬಂತು. ಜೆಮ್ ಸೇಟ್ ಜೀ ತಮ್ಮ 13ನೆಯ ವಯಸ್ಸಿಗೆ ನವಸಾರಿಯನ್ನು ಬಿಟ್ಟು ಮುಂಬೈಗೆ ಬಂದರು. ತಂದೆಯ ಜೊತೆಯಲ್ಲಿರುತ್ತಾ ಗುಜರಾತಿ ಶಾಲೆಯೊಂದರಲ್ಲಿ ಅಧ್ಯಯನ ನಡೆಸುತ್ತಿದ್ದರು. 1856ರಲ್ಲಿ ಎಲ್ಫಿನ್ ಸ್ಟನ್ ಕಾಲೇಜನ್ನು ಸೇರಿ ಏಕಾಗ್ರಚಿತ್ತದಿಂದ ಅಧ್ಯಯನ ಮಾಡಿ ಬುದ್ಧಿವಂತ ಎನಿಸಿಕೊಂಡಿದ್ದರಿಂದ ಇವರಿಗೆ ಶುಲ್ಕದಲ್ಲಿ ಪೂರ್ಣ ವಿನಾಯಿತಿಯನ್ನು ತೋರಿಸಲಾಯಿತು. ಏಕಾಗ್ರತೆ ಹೇಗಿತ್ತು ಅಂದರೆ ಪಕ್ಕದಲ್ಲಿ ಎಂಥ ಸದ್ದು ಗದ್ದಲವಾದರೂ ಅವರ ಏಕಾಗ್ರತೆ ಕದಲುತ್ತಿರಲಿಲ್ಲ. ಒಂದು ಸಾರಿ ಬಲವಾದ ಬಿರುಗಾಳಿ ಬೀಸಿದಾಗ ಅಕ್ಕಪಕ್ಕದ ಮನೆಯ ಚಪ್ಪರಗಳು ಹಾರಿ ಹೋದಾಗ ಓದುತ್ತ ಕುಳಿತಿದ್ದ ಜೆಮ್ ಸೇಟ್ ಜೀ ಅವರಿಗೆ ತಮ್ಮ ಮಹಡಿಯ ಮೇಲಿನ ಕೊಠಡಿ ಅಲುಗಾಡುತ್ತಿದ್ದು ಅರಿವಿಗೆ ಬಂದಿರಲಿಲ್ಲ. ತಂದೆ ನಸರ್ ವಾನ್ ಜೀ ಯವರು ಬಂದು ಮೇಲೆ ಓಡಿಹೋಗಿ ಜೆಮ್ ಸೇಟ್ ಜೀ ಅವರನ್ನು ಮನೆಯ ಹೊರಗೆ ಕರೆತರುತ್ತಿದ್ದಂತೆಯೇ ಆ ಕೊಠಡಿ ನೆಲಸಮವಾಯಿತು.
ಮದುವೆಯಾದ ಮೇಲೆ ಜೆಮ್ ಸೇಟ್ ಜೀ ವಕೀಲನಾಗುವ ಹವ್ಯಾಸ ತೊರೆದು ವಾಣಿಜ್ಯ ವೃತ್ತಿಯನ್ನು ಆಯ್ದುಕೊಂಡರು. ತಂದೆಯವರು ತಮ್ಮ ಸಮಸ್ತ ಅನುಭವವನ್ನು ಅವರಿಗೆ ಧಾರೆ ಎರೆದರು. ಜೆಮ್ ಸೇಟ್ ಜೀ ಮುಂದೆ ಹಾಂಗ್ ಕಾಂಗ್ ಗೆ ಹೋಗಿ ಚೀನಾದೊಂದಿಗೆ ವ್ಯಾಪಾರ ಬೆಳೆಸಲು ಪ್ರಯತ್ನಿಸಿದರು. ಪ್ರಾಮಾಣಿಕತೆಯ ತಳಹದಿಯ ಮೇಲಿನ ಅವರ ವ್ಯಾಪಾರ ಬೇಗನೇ ಬೆಳೆಯಿತು. 21ನೆಯ ವಯಸ್ಸಿನಲ್ಲಿ ಅವರು ಶಾಂಘೈಗೆ ಹೋಗಿ ಎರಡನೆಯ ವಾಣಿಜ್ಯ ಶಾಖೆಯನ್ನು ಆರಂಭಿಸಿದರು. ವ್ಯಾಪಾರ ಕ್ರಮೇಣ ಬೆಳೆಯುತ್ತಲೇ ಇತ್ತು. ಅದರಲ್ಲೂ ಅಮೆರಿಕದ ಅಂತರ್ ಯುದ್ಧ ನಡೆದಾಗ ಲಂಕಾಸೈರ್ ಗೆ ಹತ್ತಿಯನ್ನು ರಫ್ತು ಮಾಡಿ ಬಹಳ ಧನಸಂಪಾದನೆ ಮಾಡಿದರು. ಅಂತಃಕಲಹ ನಿಂತ ಮೇಲೆ ಅಮೆರಿಕದ ಹತ್ತಿ ಲಂಕಾಸೈರ್ ಗೆ ಬರಲು ಪ್ರಾರಂಭವಾದ್ದರಿಂದ ಬಹಳಷ್ಟು ಆರ್ಥಿಕ ಹಾನಿಯನ್ನು ಅನುಭವಿಸಬೇಕಾಯಿತು. ಸಾಲ ತೀರಿಸಲು ದೊಡ್ಡ ಮನೆಯನ್ನು ಮಾರಬೇಕಾಯಿತು. ಈ ಬಗೆಯ ಪ್ರಾಮಾಣಿಕತೆ ಜೆಮ್ ಸೇಟ್ ಜೀ ಯವರ ಮೇಲೆ ವಿಶೇಷ ಪರಿಣಾಮ ಉಂಟು ಮಾಡಿತು. ಶ್ರಮ ಗೌರವ ಕಷ್ಟ ಸಹಿಷ್ಣುತೆ ಪ್ರಾಮಾಣಿಕತೆ ಮೊದಲಾದವು ಅವರ ಜೀವನದಲ್ಲಿ ದಾರಿದೀಪಗಳಾಗಿ ಉಳಿದುವು.
ತಂದೆಯ ಆದೇಶದ ಮೇರೆಗೆ ಜೆಮ್ ಸೇಟ್ ಜೀ ಮುಂಬೈಯಲ್ಲಿ ಮೊದಲ ಹತ್ತಿಗಿರಣಿ ಮತ್ತು ಹತ್ತಿ ಪ್ರದೇಶದ ಕೇಂದ್ರವಾದ ನಾಗಪುರದಲ್ಲಿ ನೂಲಿನ ಗಿರಣಿಯನ್ನು ಸ್ಥಾಪಿಸಿದರು. ಇದುವರೆಗೂ ಭಾರತದಲ್ಲಿ ಬೆಳೆಯುತ್ತಿದ್ದ ಹತ್ತಿ ಇಂಗ್ಲೆಂಡಿಗೆ ಹೋಗಿ ಅಲ್ಲಿ ಬಟ್ಟೆಯಾಗಿ ಬರುತ್ತಿತ್ತು. ಜೆಮ್ ಸೇಟ್ ಜೀ ಯವರಿಗೆ ಇದು ಸರಿ ಬರಲಿಲ್ಲ ಆದ್ದರಿಂದ ಮುಂಬೈಯಲ್ಲಿಯೇ ಮಿತ್ರರ ಆರ್ಥಿಕ ಸಹಕಾರದಿಂದ ಅಲೆಗ್ಸಾಂಡ್ರಾ ಗಿರಣಿಯನ್ನು ಸ್ಥಾಪಿಸಿ ಈ ದಿಸೆಯಲ್ಲಿ ಹೆಜ್ಜೆ ಇಟ್ಟವರಲ್ಲಿ ಮೊದಲಿಗರಾದರು. ಮುಂದೆ ಅಲ್ಲಿಯ ಮಗ್ಗಗಳು ಹೆಚ್ಚು ಆಧುನಿಕತೆಗೆ ಗುರಿಯಾದ್ದರಿಂದ ಉತ್ಪಾದನೆ ಹೆಚ್ಚಾಗಿ ಸಂಪತ್ತು ಹೇರಳವಾಗಿ ಕೈ ಸೇರಿತು.ಯಂತ್ರಗಳ ಬದಲಾವಣೆಯಿಂದ ಉತ್ಪಾದನೆ ಹೆಚ್ಚಿ ಪಾಲುದಾರರಿಗೆ ಶೇಕಡ 16 ರೂಪಾಯಿ ಡಿವಿಡೆಂಡ್ ಕೊಟ್ಟಿದ್ದರಿಂದ ಜೆಮ್ ಸೇಟ್ ಜೀ ಯವರಲ್ಲಿ ಮಿತ್ರರ ನಂಬಿಕೆ, ವಿಶ್ವಾಸ ಹೆಚ್ಚಾಯಿತು. ಜೆಮ್ ಸೇಟ್ ಜೀ ಯುವರು ಯೋಜನಾಬದ್ದ ವಿಚಾರಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದರು. ಮುಂದೆ ಸ್ವದೇಶಿ ಮಿಲ್ಸ್ ಗಿರಣಿ ಆದಮೇಲೆ ತಮ್ಮ ನಾಲ್ಕನೆಯ ಗಿರಣಿಯನ್ನು ಅಹಮ್ಮದಾಬಾದಿನಲ್ಲಿ ತೆರೆದರು. 1927ರಲ್ಲಿ ನೆಹರೂರವರು ಯುರೋಪ್, ರಷ್ಯಾ ಪ್ರವಾಸ ಮಾಡಿ ಬಂದ ಮೇಲೆ ರಾಜಕೀಯ ಸ್ವಾತಂತ್ರ್ಯದ ಅರ್ಥವಾಗಬೇಕಾದರೆ ಆರ್ಥಿಕ ಸ್ವಾತಂತ್ರ್ಯ ಬೇಕೇ ಬೇಕೆಂದು ಒತ್ತಿ ಹೇಳಿದರು. ಆ ಮಾತನ್ನೇ ಜೆಮ್ ಸೇಟ್ ಜೀ ಯವರು 40 ವರ್ಷ ಮೊದಲೇ ಹೇಳಿದ್ದರು.
ಜೆಮ್ ಸೇಟ್ ಜೀ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಪಾದಾರ್ಪಣೆ ಮಾಡಿ ಅದ್ಭುತ ಕಾರ್ಯಗಳನ್ನು ಸಾಧಿಸಿ ತೋರಿಸಿದ್ದಾರೆ. ಇವರು ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಲು ಪ್ರಯತ್ನಿಸಿದಾಗ ಬ್ರಿಟಿಷ್ ಅಧಿಕಾರಿಗಳು ಇದು ಅಸಾಧ್ಯ ಎಂದು ಹೇಳಿದರು. ನೀವು ಉಕ್ಕನ್ನು ಉತ್ಪಾದಿಸುವುದಾದರೆ ಅದರ ಪ್ರತಿ ಪೌಂಡು ರೈಲು ಕಂಬಿಯನ್ನು ನಾನು ತಿಂದುಬಿಡುತ್ತೇನೆ ಎಂದು ಭಾರತೀಯ ಶಕ್ತಿ ಸಾಮರ್ಥ್ಯದ ಬಗ್ಗೆ ಅವಹೇಳನ ಮಾಡಿದ್ದನು. ಆದರೆ 1915ರ ವೇಳೆಗೆ ಜೆಮ್ ಸೇಟ್ ಜೀ ಅವರು ಆ ಅಧಿಕಾರಿ ಜೀರ್ಣಿಸಿಕೊಳ್ಳಲಾಗದ 20,000 ಟನ್ ಉಕ್ಕನ್ನು ಉತ್ಪಾದಿಸಲು ಆರಂಭಿಸಿದ್ದರು. ಇಂದಿಗೂ ಅವರು ಸ್ಥಾಪಿಸಿದ ಜೆಮ್ ಸೇಟ್ ಪುರದಲ್ಲಿನ ಉಕ್ಕಿನ ಕಾರ್ಖಾನೆ ಅತ್ಯಂತ ಲಾಭದಾಯಕ ಉದ್ದಿಮೆ ಯಾಗಿದೆ, ಅಲ್ಲದೆ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದೆ. ಜಪಾನಿಗೆ ಹೋಗಿ ಬಂದಮೇಲೆ ರೇಷ್ಮೆ ಉದ್ಯಮವನ್ನು ಪ್ರಾರಂಭಿಸಿದರು. ಹೀಗೆ ಬೆಂಗಳೂರಿನಲ್ಲಿ ಅಸ್ತಿತ್ವ ಪಡೆಯಿತು ಟಾಟಾ ಸಿಲ್ಕ್ ಫಾರ್ಮ್. ಜಪಾನಿನ ಸಹಾಯವನ್ನು ಪಡೆದು ಹಡಗುಗಳ ಮೂಲಕ ಸರಕು ಸಾಗಾಣಿಕೆ ಕಾರ್ಯವನ್ನು ಆರಂಭಿಸಿ ಯಶಸ್ವಿಯಾದರು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಗಮನ ಸಿಗದ ಆ ಕಾಲದಲ್ಲೂ ಪರದೇಶದಿಂದ ಬರುವ ಪ್ರವಾಸಿಗರಿಗೆ ಉಳಿಯಲು ತಕ್ಕ ವಸತಿ ಸೌಕರ್ಯ ಸುಚಿ ರುಚಿಯಾದ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಮುಂಬೈಯಲ್ಲಿ ತಾಜ್ ಮಹಲ್ ಹೋಟೆಲನ್ನು ಸ್ಥಾಪಿಸಿದರು. ಇಷ್ಟೇ ಅಲ್ಲದೆ ಮುಂಬೈಯಲ್ಲಿ ಜಲವಿದ್ಯುತ್ತಿನ ಉತ್ಪಾದನೆಯಿಂದಲೂ ಜೆಮ್ ಸೇಟ್ ಜೀ ಅವರ ಹೆಸರು ಅಮರವಾಗಿ ಉಳಿದಿದೆ.
ಜೆಮ್ ಸೇಟ್ ಜೀ ಯವರಿಗೆ ಯೋಜನೆಯಲ್ಲಿ ಅಪಾರ ನಂಬಿಕೆ ಇದ್ದುದರಿಂದ ಅದನ್ನು ಕಾರ್ಯಗತಗೊಳಿಸುವಲ್ಲಿ ತಾಂತ್ರಿಕ ಪರಿಣಿತರ ಮಹತ್ವವನ್ನು ಅರಿತಿದ್ದರು. ತಮ್ಮ ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣಕ್ಕೆ ಉಚ್ಚ ಶಿಕ್ಷಣ, ಸಂಶೋಧನೆಯಲ್ಲಿ ಸೂಕ್ತ ತರಬೇತಿ ನೀಡಿ ನಿಷ್ಣಾತರನ್ನು ತಯಾರಿಸಬೇಕೆಂದು ಉದ್ದೇಶಿಸಿದರು. ಬೆಂಗಳೂರಿನಲ್ಲಿ ವಿಜ್ಞಾನ ಮಂದಿರವೊಂದನ್ನು ಸ್ಥಾಪಿಸಬೇಕೆಂದು ನಿರ್ಣಯಿಸಿದಾಗ ಮೈಸೂರು ಮಹಾರಾಜರು 372 ಎಕರೆ ಜಮೀನನ್ನು ದಾನವಾಗಿ ಕೊಟ್ಟು ಪ್ರಗತಿಗೆ ದಾರಿ ಮಾಡಿದರು. ಸ್ವತಃ ಜೆಮ್ ಸೇಟ್ ಜೀ ಅವರು ಆಗಿನ ಕಾಲಕ್ಕೆ ಮೂರು ದಶಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಬಾಳುತ್ತಿದ್ದ ಆಸ್ತಿಯನ್ನು ಈ ಸಂಶೋಧನಾ ಸಂಸ್ಥೆ ಭಾರತೀಯ ವಿಜ್ಞಾನ ಮಂದಿರಕ್ಕೆ ಬಿಟ್ಟು ಕೊಟ್ಟರು. 1909ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯನ್ನು ನೋಡುವ ಭಾಗ್ಯ ಜೆಮ್ ಸೇಟ್ ಜೀ ಯವರಿಗೆ ಇರಲಿಲ್ಲ. ಆ ವೇಳೆಗೆ ಅವರು ನಿಧನ ಹೊಂದಿ ಐದು ವರ್ಷಗಳಾಗಿದ್ದವು.
ಉದಂತ ಶಿವಕುಮಾರ್
ಲೇಖಕ ಬೆಂಗಳೂರು -560056
ಮೊಬೈಲ್ ನಂ:9739758558
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments