"ಇಂದು ಭೀಮನವಾಸ್ಯೆ. ನಮ್ಮ ಕಡೆಯಲ್ಲಿ ಗಂಡನಪೂಜೆ ಹಬ್ಬವೆಂದೇ ಜನಜನಿತ. ಪತಿಪೂಜೆಯ ಈ ದಿನಕ್ಕೊಂದು ಹಾಸ್ಯಗವಿತೆ. ಕೇವಲ ನಿಮ್ಮ ನಗುವಿಗಾಗಿ.. ಒಪ್ಪಿಸಿಕೊಳ್ಳಿ.. ಇಲ್ಲಿ ಸಂಸಾರದ ನಿತ್ಯ ಸರಿಗಮಗಳ ಸ್ವರವಿದೆ. ಸರಸ ವಿರಸಗಳ ಸಾರವಿದೆ. ಹಾಸ್ಯವಿದೆ, ಲಾಸ್ಯವಿದೆ, ವಿನೋದವಿದೆ, ವಿಡಂಬನೆಯಿದೆ. ಜೊತೆಗೆ ಸ್ವಲ್ಪ ವಾಸ್ತವವೂ ಇದೆ. ಏನಂತೀರಾ.." - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಗಂಡನ ಪೂಜೆ..!
ಖಡಕ್ ಕಮಲಿ ಕಣ್ಣಗಲಿಸಿ
ಕೇಳಿದಳು ಪತಿರಾಯನಿಗೆ..
" ಇಂದು ಭೀಮನಮಾವಾಸೆ
ಹೇಳಿಬಿಡಿ ನಿಮ್ಮಯ ಆಸೆ...
ತೀರಿಸುವೆ ಈ ಹಬ್ಬದಿನದಂದು
ಪತಿಯೇ ಪರಶಿವನೆಂದು..!"
"ಮುಖಕೆ ಮಂಗಳಾರತಿ ಎತ್ತಲೇ?
ಹೂವಿಟ್ಟು ಅರ್ಚನೆ ಮಾಡಲೇ?
ಕೂಡಿಸಿ ಕುಂಭಾಭಿಷೇಕ ಮಾಡಲೇ?
ಪಾದಗಳ ತೊಳೆದು ಪೂಜಿಸಲೇ?
ಪಾಯಸದ ನೈವೇದ್ಯ ಮಾಡಲೇ"
ಕಮಲಿಯ ಪತಿ ಬದರಿನಾಥ
ಬೆದರುತ್ತಾ.. ಭಿನ್ನವಿಸಿಕೊಂಡ..
"ಮಂಗಳಾರತಿ ಎತ್ತದಿದ್ದರೂ..
ಚಿಂತಿಲ್ಲ ಆದರೆ ಇಂದಾದರೂ
ಮಾತು ಮಾತಿಗೆ ಕುಟಕದಿರು"
"ಹೂವಿನರ್ಚನೆ ಮಾಡದಿದ್ದರೂ
ಬೇಸರವಿಲ್ಲ ಆದರೆ ಇಂದಾದರೂ
ಬೈಗುಳ ಸಹಸ್ರನಾಮ ಮಾಡದಿರು"
"ಕುಂಭಾಭಿಷೇಕ ಆಗದಿದ್ದರೂ
ತೊಂದರೆಯಿಲ್ಲ ಆದರೆ ಇಂದಾದರೂ
ತಪ್ಪುಹುಡುಕಿ ತಲೆಗೆ ಮೊಟಕದಿರು."
"ಪಾದತೊಳೆದು ಪೂಜಿಸದಿದ್ದರೂ
ಪರವಾಗಿಲ್ಲ ಆದರೆ ಇಂದಾದರೂ
ಪಾತ್ರೆಗಳ ಮಾತ್ರ ತೊಳೆಸದಿರು.."
"ಪಾಯಸದ ನೈವೇದ್ಯವಾಗದಿದ್ದರೂ
ಯೋಚನೆಯಿಲ್ಲ.. ಆದರೆ ಇಂದಾದರೂ
ಹೋಟೆಲಿನಿಂದ ಊಟ ತರಿಸದಿರು"
"ಏನಿರದಿದ್ದರೂ ಏನಾಗದಿದ್ದರೂ
ಸಮಸ್ಯೆಯಿಲ್ಲ.. ಕನಿಷ್ಟ ಇಂದಾದರೂ
ಜಗಳವಾಡಿ ಮುಸುಕುಹೊದ್ದು ಮಲಗದಿರು"
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments