ಸಾಮಾಜಿಕ ಜವಾಬ್ದಾರಿ ಮರೆತ 'ಕಾಮಿಡಿ ಶೋ'ಗಳು

 ಸಾಮಾಜಿಕ ಜವಾಬ್ದಾರಿ ಮರೆತ 'ಕಾಮಿಡಿ ಶೋ'ಗಳು 




ಒಂದು 'ಪದ' ನೂರಾರು ಅರ್ಥಗಳನ್ನುdy ಒಳಗೊಂಡಿರುವುದು. ಅದು ಸಮಯ ಸಂದರ್ಭಕ್ಕನುಗುಣವಾಗಿ   ತನ್ನ ವಿನ್ಯಾಸವನ್ನು ಪಡೆದುಕೊಳ್ಳುವುದು. 'ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು' ಎಂಬ ಗಾದೆ ಜನಜನಿತ. ಶೃಂಗಾರ, ಹಾಸ್ಯ  ಕರುಣ, ವೀರ, ಭಯಾನಕ, ಬೀಭತ್ಸ ,ಅದ್ಭುತ ಮತ್ತು ಶಾಂತ ಎಂಬ ನವರಸಗಳಿವೆ. ಜನಪದರ ಕಾಲದ ಸೂತ್ರದಾರನಿಂದ ಹಿಡಿದು ಪುರಾಣ, ಸಿನಿಮಾ ಪಾತ್ರಗಳಾದ  ನಾರಾಯಣ, ತೆನಾಲಿ ರಾಮ, ಬೀರಬಲ್ಲ, ನರಸಿಂಹ ರಾಜು, ದ್ವಾರಕೀಶ, ಚಾರ್ಲಿ ಚಾಪ್ಲಿನ್, ಬಾಲಕೃಷ್ಣಾ ಮುಸರಿ ಕೃಷ್ಣ,  ಇತ್ಯಾದಿ ನಟರು ಹಾಸ್ಯದ  ನದಿಯನ್ನೇ ಹರಿಸಿದ ಉದಾರಣೆಗಳು ನಮ್ಮ ಕಣ್ಮುಂದಿವೆ.    ನವ  ರಸಗಳಲ್ಲಿ ಎರಡನೆಯದಾದ ಹಾಸ್ಯ,ಇತ್ತೀಚಿನ ದಿನಮಾನಗಳಲ್ಲಿ ಸಮೂಹ ಮಾಧ್ಯಮಗಳು ರೂಪಿಸುತ್ತಿರುವ 'ಕಾಮಿಡಿ ಶೋ'ಗಳಿಂದ  ದ್ವಂದ್ವಾರ್ಥಗಳ ಗೂಡಾಗಿವೆ. ಇಲ್ಲಿನ ಸಂಭಾಷಣೆ ಗಳು  ನೋಡುಗರಿಗೆ ಕೇಳುಗರಿಗೆ ಮುಜುಗರವನ್ನುಂಟು ಮಾಡುತ್ತಿವೆ. ಕುಟುಂಬ ಸಮೇತರಾಗಿ ಕಾರ್ಯಕ್ರಮ ವೀಕ್ಷಿಸುತ್ತಿರುವಾಗ ಇಲ್ಲ ಸಲ್ಲದ  'ಲೈಂಗಿಕ  ವಾಂಚೆಯ  ದ್ವಂದ್ವಾರ್ಥ' (ಡಬ್ಬಲ್ ಮೀನಿಂಗ್ )ಳು ಆಂಗೀಕ   ಅಭಿನಯ ಮನಸ್ಸನ್ನು  ಘಾಸಿ ಗೊಳಿಸುತ್ತಿವೆ. ಸದಭಿರುಚಿಯ  ಹಾಸ್ಯವಿಂದು  'ಅಸು'ನೀಗಿದೆ  ಎಂದೆನಿಸುತ್ತದೆ. 


ಅನೇಕ ಪ್ರತಿಭೆಗಳಿಗೆ ವೇದಿಕೆಯಾದ ವಾಹಿನಿಗಳು ಈ ಪ್ರತಿಭೆಗಳನ್ನು ಸಾಮಾಜಿಕ  ಜವಾಬ್ದಾರಿಯಿಂದ ನುಣುಚಿಕೊಳ್ಳುವಂತೆ ಮಾಡುತ್ತಿವೆ. ಹಾಸ್ಯ ವಿನೋದವಾಗಿ, ವಿಕಾಸದ ಹಂತ ತಲುಪಬೇಕು. ಅದು 'ವಿಕೋಪ'ವಾಗಬಾರದು. ಹಾಸ್ಯ ಧರ್ಮವನ್ನು ವಾಹಿನಿಗಳು,ನಟರು ಮರೆತಂತೆ ಭಾಸವಾಗುತ್ತಿದೆ. ಖಾಸಗಿ ವಿಷಯಗಳೆಲ್ಲವೂ ಹಾಸ್ಯದ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ.


 ಹಿಂದಿನ ಚಲನಚಿತ್ರಗಳಲ್ಲಿ ಡಾ. ರಾಜಕುಮಾರ್  ಕಾಲಮಾನದ  ಹಾಸ್ಯ ಸಾಮಾಜಿಕ ಜವಾಬ್ದಾರಿಯ ಸಂದೇಶ ನೀಡುತ್ತಿತ್ತು. ಇಂದು ಅದು 'ಕಾಣೆ'ಯಾಗಿದೆ. ಜನರನ್ನು  ಒತ್ತಾಯಪೂರ್ವಕವಾಗಿ ನಗಿಸಬೇಕೆಂದೆ ದೈಹಿಕ ವಾಂಚೆಯ  ಸಂಭಾಷಣೆ, ನಟನೆ  ಸೃಷ್ಟಿಯಾಗುತ್ತಿವೆ. ಆರಂಭದ ದಿನಮಾನಗಳಲ್ಲಿ ಶೋ ಗಳಲ್ಲಿದ್ದ  ಸದಭಿರುಚಿಯ ಹಾಸ್ಯ 'ಬರ ಬರುತ್ತಾ ರಾಯರ ಕುದುರೆ ಕತ್ತೆ  ಆಯಿತೇಂಬೊ ' ಮಾತಿಗೆ ಸಾಕ್ಷಿಯಾಗಿದೆ. ಸಿನಿಮಾಗಳಿಗೆ ಸೆನ್ಸಾರ್ ಮಾಡುವ ಸರ್ಕಾರ ಧಾರಾವಾಹಿಗಳಿಗೆ, ರಿಯಾಲಿಟಿ  ಶೋಗಳಿಗೆ ,ಕಾ'ಮಿಡಿ'ಶೋಗಳಿಗೆ ಹಾಗೂ ಸಾಮಾನ್ಯ ಸುದ್ದಿಯನ್ನು ಭಯ ಹುಟ್ಟಿಸುವಂತೆ ಹೇಳುವ ಸುದ್ದಿ ವಾಹಿನಿಗಳಿಗೆ ಸೆನ್ಸಾರ್  ಅವಶ್ಯಕತೆ ಇಲ್ಲವೇ ? 

 ಸಿನಿಮಾ,, ಧಾರಾವಾಹಿ, ಇತರ ಕಾರ್ಯಕ್ರಮಗಳೆಲ್ಲವೂ ಕೂಡ  ಸಮುದಾಯದ ಭಾಗವಾಗಿ ಜವಾಬ್ದಾರಿಯಾಗಿ ಕಾರ್ಯನಿರ್ವಹಿಸುವ  ಹಂತದಿಂದ ಕೆಳಗಿಳಿಯುತ್ತಿವೆ. ಕಲಾವಿದ ಸಮಾಜದ ಪ್ರತಿಬಿಂಬವಾಗಿ ಬೆಳಗಬೇಕೆ ಹೊರತು ಬೆಂಕಿಯಾಗಬಾರದು, ಕಾಮಿಡಿ ಶೋಗಳಲ್ಲಿನ ಕನ್ನಡ ಭಾಷೆ ದ್ವಂದ್ವಾರ್ಥಗಳಿಂದ ಬಿಡುಗಡೆ ಹೊಂದಬೇಕು.ನಗುವಿನಿಂದ ಆರೋಗ್ಯ ಆಯುಷ್ಯವೃದ್ಧಿ ಆಗುತ್ತದೆ.  ಅನಾರೋಗ್ಯಕರ ಸಂಭಾಷಣೆಯಿಂದ ನಗುವಂತಾದರೆ  ಮನಸ್ಸು,ಬುದ್ದಿಗೂ ಶರೀರಕ್ಕೂ ತಾಳ ತಪ್ಪದೇ ಇರದು.


 ಮಾತು 'ಮನೆ' ಕಟ್ಟಬೇಕು.ಮಾತು, ಮೌನವಾಗಬೇಕು. ಮಾತು 'ಮಮತೆ'ಯಾಗಬೇಕು ಮಾತು 'ಹಾಸ್ಯದ ಮನ್ವಂತರ 'ಸೃಷ್ಟಿಸಬೇಕು.ಡಿವಿಜಿ ಹೇಳುವಂತೆ 'ನಗು ನಗುವ ಕಣ್ಣುಗಳಿಗೆ ಹೊಗೆಯ ನೂದಲು ಬೇಡ 'ಎಂಬ ಮಾತು ನೆನಪಿಸಿಕೊಳ್ಳಬೇಕು. ಹಾಸ್ಯ 'ವಿಕಾಸ' ವಾಗಬೇಕೇ ವಿನಹ ಕಸದ ಬುಟ್ಟಿಯಾಗಬಾರದಲ್ಲವೇ?



 ವಾಹಿನಿಗಳು ಹಾಸ್ಯದ ಹೊನ್ನಲಾಗದೆ ಭ್ರಮಾ  ಲೋಕ ಸೃಷ್ಟಿಸಿ,ಇದೇ ಕಾಮಿಡಿ ಎಂದು ಮುದ್ರೆಯೊತ್ತಲು ಸಿದ್ಧತೆ ನಡೆಸಿವೆ. ನಟರು  ಪಂಚ್ ಡೈಲಾಗ್ ಹೇಳಿದಾಕ್ಷಣ ಜಡ್ಜ್ ಗಳು ಬಝರ್ ಒತ್ತುವುದರ ಮೂಲಕ ಹಾಸ್ಯದ ನಕಲು ರಹಧಾರಿ ನಿರ್ಮಿಸುತ್ತಿರುವುದು  ವಿಷಾದನೀಯ.ಹಾಸ್ಯ ಚಿಂತನ ಮಂಥನ ವಾಗದೆ ಕೋಮಾ ಸ್ಥಿತಿ ತಲುಪಿಸುವ ಎಲ್ಲಾ ಸಿದ್ಧತೆಗಳು ನಡೆದಿವೆ. 


 ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು. 'ಮಾತೆಂಬುದು  ಜ್ಯೋತಿರ್ಲಿಂಗ' ವೆಂಬ ಅಲ್ಲ ಅಲ್ಲಮನ ಮಾತು ಇಂದು ನಾವುಗಳೆಲ್ಲರೂ ಅಲ್ಲಗಳೆಯುತ್ತಿದ್ದೇವೆ ಅಲ್ಲವೇ? 'ನುಡಿದರೆ ಮುತ್ತಿನ ಹಾರದಂತಿರಬೇಕು 'ಎಂಬ  ಬಸವಣ್ಣನ ಮಾತುಗಳು ಕೂಡ ಇಂದು ಕಣ್ಮರೆಯಾಗುತ್ತಿರುವುದು ದುರಂತ.


 'ನಗುವೊಂದು  ರಸಪಾಕವಳುವೊಂದು  ರಸಪಾಕ 

 ನಗುವಾತ್ಮ ಪರಿಮಳವಫಸರಿಸುವ ಕುಸುಮ ' ವಾಗಲಿ ಎಂಬ ಡಿವಿಜಿಯವರ ಸಾಲುಗಳು ಮತ್ತೆ ಮತ್ತೆ ನಮಗೆ ನೆನಪಾಗಬೇಕಾಗಿದೆ.

 


 ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್, 

ಸಂಶೋದಕರು,

 ಶಿಕ್ಷಕರು, ಸರ್ಕಾರಿ ಪ್ರಾಥಮಿಕ ಶಾಲೆ, ಠಾಣಗುಂದಿ 

ಯಾದಗಿರಿ.

Image Description

Post a Comment

0 Comments