“ಇದು ಮುಖವಾಡ ತೊಟ್ಟವರ ಮರಾಮೋಸದ ಅನಾವರಣದ ಕವಿತೆ. ಇಬ್ಬಗೆ ನೀತಿಯ ದ್ವಂದ್ವ ಬುದ್ದಿಯ ವಂಚಕರ ವಿರುದ್ದದ ಜಾಗೃತಿ ಗೀತೆ. ‘ವೇದಾಂತ ಹೇಳೋಕೆ, ಬದನೆಕಾಯಿ ತಿನ್ನೋಕೆ’ ಎಂಬ ನಾಣ್ಣುಡಿಯಂತೆ ತಮಗೊಂದು, ಲೋಕಕೊಂದು ಎನ್ನುವ ರೀತಿಯಲ್ಲಿ ಒಳಗೊಂದು, ಹೊರಗೊಂದು ಮಾಡುತ್ತಾ ಮೆರೆಯುವ, ಜನರನ್ನು ದಿಕ್ತಪ್ಪಿಸುತ್ತ ಬದುಕುವ ಊಸರವಳ್ಳಿ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ ಇಂದು . ಅಂತಹವರ ಅನುಭವ ನಿಮಗೂ ಆಗಿರಬಹುದು. ಏಕೆಂದರೆ ಇಂದು ಎಲ್ಲೆಡೆಯೂ ಅಂತಹವರದೇ ಪ್ರಭಾವ. ಅವರಿಂದಲೇ ಜಗತ್ತು ಅಕ್ಷರಶಃ ರೌರವ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಮುಖವಾಡಗಳಿವೆ ಜೋಕೆ.!
ಮನೆಯಲ್ಲಿ ಟಿ.ವಿ.ಚಾನಲ್ಲು ಸಹ
ಬದಲಾಯಿಸುವ ಹಕ್ಕಿಲ್ಲದವರು..
ಬೀದಿಯಲಿ ಬಂದು ಮಾಡುವರು
ಸ್ವಾತಂತ್ರ್ಯ ಹಕ್ಕುಗಳ ಬೋಧನೆ.!
ಮನೆತುಂಬ ದೇವರ ವಿಗ್ರಹವಿಟ್ಟು
ಪ್ರತಿದಿನವು ಬಿಡದೆ ಪೂಜಿಸುವವರು
ಊರಮಂದಿಯೆದುರು ಮಾಡುವರು
ನಾಸ್ತಿಕತೆಯ ಪಕ್ಕಾ ಪ್ರತಿಪಾದನೆ.!
ರಾಹುಕಾಲ, ಯಮಗಂಡ ಕಾಲ
ತಪ್ಪದೆ ಶಕುನ ಅನುಸರಿಸುವವರು
ಜನರೆದುರು ಆರ್ಭಟಿಸಿ ಮಾಡುವರು
ಮೌಢ್ಯಗಳ ವಿರುದ್ದ ಪ್ರತಿಭಟನೆ.!
ಕನಿಷ್ಟ ಬಾಳಸಿದ್ದಾಂತಗಳೂ ಇಲ್ಲದೆ
ಸಮಯಸಾಧಕತನ ಮೆರೆವವರು
ಸಮಾಜದೆದುರು ನಿಂತು ಮಾಡುವರು
ರೀತಿ ನೀತಿ ತತ್ವಗಳ ಸಂಕೀರ್ತನೆ.!
ಎಂಜಲಗೈಲಿ ಕಾಗೆಯನ್ನೂ ಓಡಿಸದೆ
ಜಿಪುಣಾಗ್ರತನದಿ ಬದುಕುವವರು
ನಾಡಿಗೆಲ್ಲ ಆಗ್ರಹಿಸುತ ಮಾಡುವರು
ದಾನಧರ್ಮ ಕೊಡುಗೆಗಳ ನಿವೇದನೆ.!
ಸಕಲ ಅಕ್ರಮ ಹಗರಣಗಳ ಮಾಡಿ
ನಿಷ್ಟೆ ನಿಯ್ಯತ್ತುಗಳನ್ನೇ ಅರಿಯದವರು
ಭ್ರಷ್ಟರೊಡನೆ ಕುಳಿತು ಮಾಡುವರು
ಭ್ರಷ್ಟಾಚಾರ ನಿರ್ಮೂಲನೆ ಸಮಾಲೋಚನೆ.!
ಇಲ್ಲಿನ ಲೋಕವೇ ಹೀಗಾಗಿದೆ ಇಂದು
ಎಲ್ಲರ ಒಳಗೊಂದು ಹೊರಗೊಂದು
ಬರೆಯುವುದೊಂದು, ಬದುಕುವುದೊಂದು
ವಂಚನೆಯೇ ಬಹು ದೊಡ್ಡ ಸಾಧನೆ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments