“ಇದು ನಗೆಯ ಸೌಂದರ್ಯದ ಅನಾವರಣದ ಕವಿತೆ. ನಗುವಿನೊಳಗಿನ ಮಾಧುರ್ಯದ ಮಧುರ ರಿಂಗಣಗಳ ಭಾವಗೀತೆ. ನಗೆಯ ಔದಾರ್ಯವೆಂದರೆ ಅದು ಬೆಂಕಿಯಲ್ಲೂ ಅರಳಬಲ್ಲುದು. ಬಿಸಿಲಿನಲ್ಲೂ ಬೆಳದಿಂಗಳಾಗಬಲ್ಲುದು. ಆಂತರ್ಯದ ಆಕ್ರಂದಗಳಳಿಸಿ ಆಹ್ಲಾದ ಮೀಟುವ ಬೆರಳಾಗಬಲ್ಲುದು. ನಮ್ಮ ನಗುವಿಗೆ ನಾವೇ ಕಾರಣ, ನಾವೇ ಪ್ರೇರಣ. ನಮ್ಮ ನಗುವೇ ನಮಗೆ ಚೈತನ್ಯದ ಹೊಂಗಿರಣ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಬೆಂಕಿಯಲ್ಲರಳುವ ಹೂ.!
ಯಾರೂ ಎಂದೆಂದಿಗೂ
ಕಸಿದುಕೊಳ್ಳಲಾಗದ..
ನನ್ನಯ ಏಕೈಕ ಸಂಪದ
ನನ್ನೀ ನಗೆಯ ಆಮೋದ.!
ನನ್ನಯ ಈ ನಗೆಪ್ರಣತೆಗೆ
ನನ್ನ ಉತ್ಸಹಾವೇ ಬತ್ತಿ
ನನ್ನ ಉಲ್ಲಾಸವೇ ತೈಲ
ನನ್ನದೇ ಜ್ಯೋತಿ ಜಾಲ.!
ನನ್ನೀ ನಗೆಯ ಸತ್ವಕೆ
ನಕ್ಕು ನಲಿಯುವ ತತ್ವಕೆ
ನನ್ನದೇ ಇಲ್ಲಿ ನೇತೃತ್ವ
ನಿತ್ಯ ಉತ್ತರದಾಯಿತ್ವ.!
ಯಾರು ಹಗೆ ಕಕ್ಕಿದರೇನು?
ಕರುಬುತ ಬಿಕ್ಕಿದರೇನು?
ಉರಿದುರಿದು ಉಕ್ಕಿದರೇನು?
ಕಡೆಗಣಿಸುವೆನು ನಸುನಕ್ಕು.!
ಧನಕನಕ ಐಸಿರಿ ಬೇಕಿಲ್ಲ
ಪದವಿ ಅಧಿಕಾರ ಬೇಕಿಲ್ಲ
ಬಾಳ ಮಮಕಾರ ಸಾಕು
ನನ್ನನಗೆಯ ಝೇಂಕಾರಕೆ.!
ಬೇಕಿಲ್ಲ ಭವಿಶ್ಯದ ಹಂಗು
ಇಲ್ಲ ಆಯುಷ್ಯದ ಗುಂಗು
ನನ್ನೊಡಲ ನಗೆಯ ರಂಗಿಗೆ
ಇಲ್ಲ ಯಾವುದೂ ಹಂಗು.!
ಅಳುವವರಿಗೆ ಸದಾ ನೋವು
ಪ್ರತಿಕ್ಷಣವು ಚೈತನ್ಯದ ಸಾವು
ನಗುವವರಿಗಷ್ಟೆ ಮರಣದಲ್ಲೂ
ಬಾಡದು ಮೊಗದ ನಲಿವು.!
ಗೆಳೆಯ ನಗೆಯೆಂದರೆ ನಿಜಕ್ಕೂ..
ಬೆಂಕಿಯಲ್ಲಿ ಅರಳುವ ಹೂವು
ತಣಿಸುವುದು ಮಣಿಸುವುದು
ಜಗದೆಲ್ಲ ಕಿಚ್ಚುಗಳ ಬೇವು.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments