* ಒಲವಿನ ತುಡಿತಗಳ ಅನಾವರಣದ ಸುಂದರ ಕವಿತೆ. ಅನುರಾಗದ ಮಿಡಿತದ ರಿಂಗಣಗಳ ಮಧುರ ಭಾವಗೀತೆ*

 "ಇದು ಒಲವಿನ ತುಡಿತಗಳ ಅನಾವರಣದ ಸುಂದರ ಕವಿತೆ. ಅನುರಾಗದ ಮಿಡಿತದ ರಿಂಗಣಗಳ ಮಧುರ ಭಾವಗೀತೆ.


ಇಲ್ಲಿ ಕಾಯುವ ಹೃದಯಗಳ ತುಮುಲ ತಲ್ಲಣಗಳ ನಿವೇದನೆಗಳಿವೆ. ಕಾಡಿಸುವ ಮನಸುಗಳ ಕೀಟಲೆ ಬಿಗುಮಾನಗಳ ಸಂವೇದನೆಗಳಿವೆ. ಈ ಇಳೆಯಲ್ಲಿ ಜೀವ-ಜೀವನಗಳಿಗೆ ಒಲವೆಂದರೆ ಸದಾ ಅತಿಶಯ. ಯುಗ ಯುಗದಿಂದಲೂ ಜಗದ ಚಿರ ವಿಸ್ಮಯ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ನಾನು ಮತ್ತು ನೀನು.!


ಕಾಯುತ್ತಾ ನಿಂತ ನನಗಷ್ಟೇ

ಕಾಲದ ಪರಿಧಿಯ ಅರಿವು.!

ಕಾಯಿಸುವ ಓ ನನ್ನೊಲವೇ

ನಿನಗೆಲ್ಲಿದೆ ಕಾಲದ ಪರಿವು?


ಬೇಯುತ್ತಾ ನಿಂತ ನನಗಷ್ಟೇ

ಚಿಂತೆ ಚಡಪಡಿಕೆ ಹರವು

ಕಾಡಿಸುವ ಓ ನನ್ನೊಲವೇ

ನಿನಗೆಲ್ಲಿದೆ ಚಿಂತೆಯ ಕುರುಹು?


ನೆನೆಯುತ್ತಾ ನಿಂತ ನನಗಷ್ಟೇ

ನೆನಪುಗಳ ನಿರಂತರ ಹರಿವು.!

ಸತಾಯಿಸುವ ಓ ನನ್ನೊಲವೇ

ನಿನಗೆಲ್ಲಿದೆ ನೆನಪಿನ ಜ್ವರವು?


ನುಡಿಯುತಾ ನಿಂತ ನನಗಷ್ಟೇ

ಮುಗಿಯದ ಮಾತಿನ ನೆರವು.!

ಬಿಗುಮಾನಿಸುವ ಓ ನನ್ನೊಲವೇ

ನಿನಗೆಲ್ಲಿದೆ ನುಡಿಯುವ ಸ್ತರವು?


ಪ್ರೇಮಿಸುತಾ ನಿಂತ ನನಗಷ್ಟೇ

ಪ್ರೇಮಕೆ ಇಲ್ಲ ಕಾಲದ ಗಡುವು.!

ಪರದಾಡಿಸುವ ಓ ನನ್ನೊಲವೇ

ನಿನಗೆಲ್ಲಿದೆ ಪ್ರೀತಿಸಲು ಬಿಡುವು?


ಆರಾಧಿಸುತ ನಿಂತ ನನಗಷ್ಟೇ

ಓಲೈಸುವ ಒಲವಿನ ಕರವು.!

ಅನುಮಾನಿಸುವ ಓ ನನ್ನೊಲವೇ

ನಿನಗೆಲ್ಲಿದೆ ಅನುರಾಗದ ಸ್ವರವು?


ಬಿಡಲಾಗದೆ ನಿಂತ ನನಗಷ್ಟೇ

ಬೆರೆಯುವ ಬೆಸೆಯುವ ಚಟವು.!

ಬಿಂಕದಿ ಸಿಡಿವ ಓ ನನ್ನೊಲವೇ

ನಿನಗೆಲ್ಲಿದೆ ಬೆಸುಗೆಯ ಹಠವು?


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments