* ಬುವಿಯ ಆಂತರ್ಯದ ಮೂಲಭೂತ ಸತ್ವ ತತ್ವಗಳ ಅನಾವರಣದ ಕವಿತೆ *

 "ಇದು ಬುವಿಯ ಆಂತರ್ಯದ ಮೂಲಭೂತ ಸತ್ವ ತತ್ವಗಳ ಅನಾವರಣದ ಕವಿತೆ. ಬದುಕಿನ ಹಾದಿಗೆ ಬೆಳಕಿನ ಕಿರಣಗಳ ಚೆಲ್ಲುವ ನಿತ್ಯ ಸತ್ಯ ಭಾವಗೀತೆ. ಇಲ್ಲಿನ ಪ್ರತಿಮೆಗಳ ಆದರ್ಶಗಳು, ನಿಸರ್ಗದ ಉಪಮಾನದ ನಿದರ್ಶನಗಳು ನಮ್ಮೊಳಗಿನ ಸಾತ್ವಿಕ ಚೈತನ್ಯವನ್ನು ದೃಢಗೊಳಿಸುತ್ತ


ವೆ. ನಾವು ನಂಬಿದ, ಅನುಸರಿಸುವ ಸತ್ಯ ಸಿದ್ಧಾಂತಗಳನ್ನು ಸದೃಢಗೊಳಿಸುತ್ತವೆ. ಏಕೆಂದರೆ ಎಂತಹ ಪರಿಸ್ಥಿತಿಯಲ್ಲೂ, ಎಂತಹವರ ಸಂಗದಲ್ಲೂ ನಮ್ಮತನ ಕಳೆದುಕೊಳ್ಳದಿರುವುದೇ ಜೀವ-ಜೀವನದ ಹಿರಿಮೆ. ಅದರಿಂದಲೇ ಬದುಕು ಬೆಳಕಿನ ಚಿಲುಮೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ದೃಷ್ಟಾಂತ.!


ಕೊಲೆಗಡುಕ ಆ ಕೆಡುಕ ಬೇಡನೆದುರು

ನಾರದಮುನಿ ಕೃಪಾಸಿಂಧುವಾಗೆ ನಿಂದ

ರಾಮ ನಾಮದ ಮಂತ್ರವ ಅರುಹಿದ

ವ್ಯಾಧನೆದುರು ಋಷಿ ಋಷಿಯೇ ಆದ

ಕಿರಾತನ ವಾಲ್ಮೀಕಿಯಾಗಿಸುತ ಬೆಳಗಿದ.!


ಕಡುಕ್ರೂರಿ ಆ ಅಂಗೂಲಿಮಾಲನೆದುರು

ಬುದ್ದ ಕಾರುಣ್ಯಮೂರ್ತಿಯಾಗೆ ನಿಂದ

ದಯೆ ಕರುಣೆ ಕ್ಷಮೆಯೇ ಬೆಳಕೆಂದ

ಸೈತಾನನೆದುರೂ ಸಂತ ಸಂತನೇ ಆದ

ಸೈತಾನನನ್ನೂ ಸಂತನಾಗಿಸಿ ಹೊಳೆದ.!


ಶಿಲುಬೆಗೇರಿಸಿ ಕಲ್ಲು ಹೊಡೆದವರೆದುರು

ಯೇಸು ದಯಾಮಯನಾಗಿಯೇ ನಿಂದ

ಶಾಂತಿ ಪ್ರೀತಿ ಮಮತೆಯೇ ಬದುಕೆಂದ

ಕಟುಕರೆದುರೂ ಕರುಣಿ ಕರುಣಿಯೇ ಆದ

ಕಟುಕರನ್ನೂ ಕರುಣಿಗಳಾಗಿಸಿ ಮಿನುಗಿದ.!


ಕೊಡಲಿ ಹಿಡಿದು ಕಡಿಯಲು ನಿಂದವರಿಗು

ಮರ ನೀಡುವುದು ಫಲ, ನೆರಳಿನ ನೆರವು 

ಬೆಂಕಿಯಿಟ್ಟು ಸುಡುವವರಿಗೂ ಜೇನ್ನೊಣ

ಸುರಿಸುವುದು ಜೇನಧಾರೆಯ ಸಿಹಿಹೂರಣ

ಇದುವೆ ನಿಸರ್ಗದ ಚರಾಚರದ ತತ್ವ ಗುಣ.!


ಕೊಲ್ಲಲು ಬಂದು ನಿಂತವರಿಗೂ ಗೋವು

ಒಡಲ ಹಾಲಿನ ಹೊಳೆಯನೇ ಹರಿಸುವವು

ತನ್ನನೇ ತೇಯುವ ಕಲ್ಲಿಗೂ ಆ ಚಂದನ

ನೀಡುವುದು ಸೌರಭ ಪರಿಮಳಗಳ ಪಾನ

ವಿಕೃತಿಯೆದುರು ಬದಲಾಗದು ಪ್ರಕೃತಿಗಾನ.!


ಕೆಟ್ಟವರೆದುರು ನಾವೂ ಕೆಟ್ಟವರಾಗಬೇಕಿಲ್ಲ

ಕೆಟ್ಟದಾಗಿಯೇ ನಡೆದುಕೊಳ್ಳಲೂ ಬೇಕಿಲ್ಲ

ನಮ್ಮೊಳೆಯತನಗಳ ತೋರಿದರೆ ಸಾಕಲ್ಲ

ಒಳಿತಪ್ರಭಾವ ಬೀರುತ ಬದಲಿಸಬಹುದಲ್ಲ

ಪುರಾಣ ಚರಿತ್ರೆಗಳಿದನೇ ಸಾಕ್ಷಿಕರಿಸಿದೆಯಲ್ಲ 

ನಿಸರ್ಗವೇ ನಿತ್ಯವು ನಿದರ್ಶನವಾಗಿದೆಯಲ್ಲ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments