* ಡಾ. ದೇವಕನ್ನಿಕಾ ನಗರಕರ್ ಅವರಿಗೆ ಹೃದಯಸ್ಪರ್ಶಿ ಸನ್ಮಾನ *

 *ಡಾ. ದೇವಕನ್ನಿಕಾ ನಗರಕರ್ ಅವರಿಗೆ ಹೃದಯಸ್ಪರ್ಶಿ ಸನ್ಮಾನ*



ಕಾಗವಾಡ :ಸ್ಥಳೀಯ ಶಿವಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ದೇವಕನ್ನಿಕಾ ನಗರಕರ್ ಅವರು ಇದೇ ಜೂನ್ 30 ಕ್ಕೆ ತಮ್ಮ ಸೇವೆಯಿಂದ ನಿವೃತ್ತರಾಗುತ್ತಿರುವ ಪ್ರಯುಕ್ತ ಕನ್ನಡ ವಿಭಾಗದಿಂದ ಅವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಪ್ರೊ. ಬಿ.ಎ ಪಾಟೀಲ ಅವರು ನಗರಕರ್ ಅವರೊಂದಿಗಿನ ಕಳೆದ 30 ವರ್ಷಗಳ ಒಡನಾಟವನ್ನು ಹಂಚಿಕೊಳ್ಳುತ್ತಾ ನಗರಕ್ ಅವರು ಬಹಳ ದಿಟ್ಟ ಮತ್ತು ನೇರ ನುಡಿಯ ಪ್ರಾಧ್ಯಾಪಕರಾಗಿದ್ದರು, ವಿದ್ಯಾರ್ಥಿಗಳೊಂದಿಗಿನ ಅವರ ಪ್ರೀತಿ, ಸ್ನೇಹ ಅಜರಾಮರವಾಗಿರುವಂತಹದ್ದು, ಇಂದು ನಿವೃತ್ತಿಯನ್ನು ಹೊಂದುತ್ತಿದ್ದು ಭವಿಷ್ಯದಲ್ಲಿ ಅವರ ಎಲ್ಲ ಇಷ್ಟಾರ್ಥಗಳು ಈಡೇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಎಸ್ .ಎ. ಕರ್ಕಿ ಕನ್ನಡ ವಿಭಾಗದಲ್ಲಿ ಕಳೆದ 30 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ ನಗರಕರ್ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಅವರ ಮಾತು ಸ್ವಲ್ಪ ಒರಟು ಅನಿಸಿದ್ದರೂ ಹೃದಯ ಬಹಳ ಮೃದುವಾಗಿದೆ. ಎಲ್ಲರೊಂದಿಗೆ ಬೆರೆತು ಹುಮ್ಮಸ್ಸಿನಿಂದ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದರು ಮೇಡಂ ಅವರು ಸಾಹಿತಿಗಳಾಗಿದ್ದು ಹಲವಾರು ಮೌಲ್ಯಯುತ ಕೃತಿಗಳನ್ನು ರಚಿಸಿ ಆ ಮೂಲಕ ನಾಡಿನ ಸಹೃದಯರ ಮನಸ್ಸನ್ನು ಗೆದ್ದಿದ್ದಾರೆ. ಭವಿಷ್ಯದಲ್ಲಿಯೂ ಇನ್ನೂ ಒಳ್ಳೋಳ್ಳೆ ಕೃತಿಗಳು ಅವರಿಂದ ಬರಲಿ ದೇವರು ಅವರಿಗೆ ಎಲ್ಲವನ್ನೂ ಕರುಣಿಸಲಿ ಎಂದು ಹಾರೈಯಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ. ದೇವಕನ್ನಿಕಾ ನಗರಕರ್ ಅವರು ಮಹಾವಿದ್ಯಾಲಯ ನನಗೆ ಎಲ್ಲವನ್ನೂ ನೀಡಿದೆ ನನ್ನ ಎಲ್ಲ ಕಷ್ಟ ಸುಖದ ಸಂದರ್ಭದಲ್ಲಿಯೂ ಇಲ್ಲಿನ ಸಿಬ್ಬಂದಿ ನನಗೆ ಸಹಾಯಕ್ಕೆ ನಿಂತಿದ್ದಾರೆ ಅದಕ್ಕಾಗಿ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು. ಕಾರ್ಯಕ್ರಮ ಇಷ್ಟೊಂದು ವ್ಯವಸ್ಥಿತವಾಗಿ ಆಯೋಜಿಸಿದ ಎಲ್ಲರನ್ನೂ ಶ್ಲಾಘಿಸಿದರು. ನನಗೆ ಒಬ್ಬನೇ ಮಗ ಎನ್ನುವ ಕೊರಗನ್ನು ನನ್ನ ವಿದ್ಯಾರ್ಥಿಗಳು ತುಂಬಿದ್ದಾರೆ ಹೀಗಾಗಿ ಮಹಾವಿದ್ಯಾಲಯದಲ್ಲಿರುವ ಎಲ್ಲ ವಿದ್ಯಾರ್ಥಿಗಳು ನನ್ನ ಮಕ್ಕಳೇ ಆಗಿದ್ದಾರೆ ಎಂದು ಕ್ಷಣ ಕಾಲ ಭಾವುಕರಾದರು.  ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಆನಂದಕುಮಾರ ಎಂ ಜಕ್ಕಣ್ಣವರ ನಗರಕರ್ ಮೇಡಂ ಅವರದು ಮಾತೃ ಹೃದಯ ಮತ್ತು ಕರುಣಾಮಯ ಮನಸ್ಸು ಅವರ ಸಾಂಗತ್ಯದಲ್ಲಿ ಕಳೆದ ಐದು ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದು ಅವರಿಂದ ಸಾಕಷ್ಟು ಕಲಿತಿದ್ದೇನೆ. ಸೇವಾನಿವೃತ್ತಿಯ ಈ ಸಂದರ್ಭದಲ್ಲಿ ಅವರನ್ನು ಕನ್ನಡ ವಿಭಾಗದಿಂದ ಸನ್ಮಾನಿಸುತ್ತಿರುವುದು ಸಂತೋಷವೆನಿಸುತ್ತದೆ. ಏಕೆಂದರೆ ಇದು ಅವರ ತವರು ಮನೆ ಸನ್ಮಾನ. ಇಂತಹ ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ನಗರಕರ್ ಅವರ ಕುರಿತು ನಾಡಿನ ಹಿರಿಯ ವಿದ್ವಾಂಸರಾದ ಡಾ. ಎಸ್.ಓ ಹಲಸಗಿ, ಡಾ. ಬಸುಪಟ್ಟದ, ಡಾ. ಅಶೋಕ ನರೋಡೆ, ಡಾ. ಹರೀಶ್ ಕೋಲಕಾರ, ಡಾ.ಶೋಭಾ ಕೊಕಟನೂರ, ಡಾ, ಕೊಕ್ಕನವರ, ಡಾ, ರಾವಸಾಬ ಬಡಿಗೇರ, ಪ್ರೊ. ನಿಲೇಶ್ ಝಾರೆ ಆನ್ಲೈನ್ ಮೂಲಕ ಅಭಿನಂದನೆಯನ್ನು ಸಲ್ಲಿಸಿದರು, ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.  ಪ್ರಾರಂಭದಲ್ಲಿ ಶಿವಾನಂದ  ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಪ್ರೊ.ಸದಾನಂದ ಮೋರೆ ಸ್ವಾಗತಿಸಿ ಪರಿಚಯಿಸಿದರು, ಪ್ರೊ.ಸೋನಾಲಿ ಪಡತರೆ ನಿರೂಪಿಸಿದರು. ವಿದ್ಯಾರ್ಥಿನಿ ಕು. ಕಾವ್ಯ ಅಸೋದೆ ವಂದಿಸಿದರು. ಕಾಮರ್ಸ ವಿಭಾಗದ ಮುಖ್ಯಸ್ಥರಾದ ಪ್ರೊ.ವಿಶಾಲ ಬುರ್ಲೆ  ತಾಂತ್ರಿಕ ನೆರವು ನೀಡಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವಂತೆ ಸಹಕರಿಸಿದರು.ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ವರದಿ :ಆನಂದ ಜಕ್ಕಣ್ಣವರ 

ಕಾಗವಾಡ

Image Description

Post a Comment

0 Comments