* ನಾವು ಮಾದರಿಯಾಗೋಣ"

 " ನಾವು ಮಾದರಿಯಾಗೋಣ"



ಪಾಪ, ಏನೂ ಅರಿಯದ ಮುಗ್ಧ ಮಗುವೊಂದು ತನ್ನ ತಂದೆ-ತಾಯಿಯರು ಜಗಳವಾಡುವುದನ್ನು ನೋಡುತ್ತಾ ಅಸಹಾಯಕ ಸ್ಥಿತಿಯಲ್ಲಿ ನಿಂತಿರುತ್ತದೆ. ಅಪ್ಪನ ಪ್ರೀತಿ, ಅಮ್ಮನ ಕಾಳಜಿ ಎಲ್ಲವೂ ಮರೆಯಾದ ಈ ಸಂದರ್ಭದಲ್ಲಿ ಮಗುವಿಗೆ ಉಳಿದಿದ್ದು ಒಂದೆ. ಅದುವೇ ಅಳು. ಹಾಗೂ ಒಂಟಿತನ. ಅಪ್ಪ ಅಮ್ಮನ ಜಗಳದಲ್ಲಿ ನೊಂದ ಮಗು ಅಳುವುದಕ್ಕೆ ಪ್ರಾರಂಭಸಿದಾಗ ಆ ಮಗುವಿನ ಕಡೆ ಅಪ್ಪ ಅಮ್ಮ ಇಬ್ಬರೂ ನೋಡದೆ ತಮ್ಮ ತಮ್ಮ ಮಾತಿಗೆ ಬೆಲೆಕೊಟ್ಟು ಜಗಳ, ರಂಪಾಟ, ಹೊಡೆದಾಟದಲ್ಲಿ ಮಗ್ನರಾಗಿರುತ್ತಾರೆ. ಇದರಿಂದ ಬೇಸತ್ತ ಮಗು ಜೀವನದಲ್ಲಿ ನಕಾರಾತ್ಮಕ ಭಾವನೆಯನ್ನು ಮೂಡಿಸಿಕೊಳ್ಳಲು ಪ್ರಾರಂಭಿಸುತ್ತದೆ. ಜೀವನದಲ್ಲಿ ಸೋಲಿನ ಹಾದಿ ಹಿಡಿಯುತ್ತದೆ. ಇಂತಹ ಘಟನೆಗಳು ಮಗುವಿನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಇದು ಹಾಗೆ ಮುಂದುವರೆದರೆ ಮಗು ಖಂಡಿತ ಹಾದಿ ತಪ್ಪುತ್ತದೆ. ಇದಕ್ಕೆ ಮಗು ಹೊಣೆಯಲ್ಲ. ಬದಲಿಗೆ ಪೋಷಕರೇ ಹೊಣೆಯಾಗಿರುತ್ತಾರೆ. ಮಗು ತನ್ನ ಪೋಷಕರ ಮೇಲೆ ಇಟ್ಟಿದ್ದ ನಂಬಿಕೆ, ಪ್ರೀತಿ, ವಿಶ್ವಾಸ ಎಲ್ಲವನ್ನೂ ಕಳೆದುಕೊಂಡು ಒಮ್ಮೊಮ್ಮೆ ನಾ ಅನಾಥ ಮಗುವಾಗಿದ್ದರೆ ಚೆನ್ನಾಗಿ ಇರ್ತಿತ್ತು ಅಂತ ಯೋಚಿಸುತ್ತೆ.

ಮಗುವಿನ ಬೆಳವಣಿಗೆಯಲ್ಲಿ‌ ತಂದೆ- ತಾಯಿಯ ಪಾತ್ರವೇನು ಎಂಬುದನ್ನು ಪ್ರತಿಯೊಬ್ಬರೂ  ಅರಿಯಬೇಕು. ಅರಿತು ಬಾಳಿದರೆ ಸ್ವರ್ಗ ಸುಖ ನಮ್ಮ ಮನೆಯಲ್ಲೇ ನೆಲೆನಿಂತಿರುತ್ತದೆ. ನಮ್ಮ ಒತ್ತಡ, ಕೋಪ, ಆವೇಶ ಎಲ್ಲವನ್ನೂ ಮರೆತು ಬಾಳಬೇಕಿದೆ. ಕಛೇರಿಯಲ್ಲಿನ ಆಗುಹೋಗುಗಳಿಗೆ ನಾವೇ ಕಾರಣರು ಅಲ್ವಾ??          

     ಕಛೇರಿಯಲ್ಲಿನ ಒತ್ತಡಗಳನ್ನು ಮನೆಗೆ ಬಂದ ನಂತರ ವಿನಾಕಾರಣ ಗಂಡ ಹೆಂಡತಿ ಜಗಳ ಮಾಡುವುದರಿಂದ ಇದು ಮಗುವಿನ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಬಹುದು. ಮಗು ತನ್ನ ತಂದೆ ತಾಯಿಯರ ಮೇಲೆ ಇಟ್ಟಿರುವ ಪ್ರೀತಿಯನ್ನೂ ಕಳೆದುಕೊಳ್ಳಬಹುದು. ಮಗುವಿಗೆ  ಒಮ್ಮೆ ತನ್ನ ತಂದೆ-ತಾಯಿಯರ ಮೇಲೆ ಕೆಟ್ಟ ಅಭಿಪ್ರಾಯ ಬಂತೆಂದರೆ ಮಗುವಿನ ವ್ಯಕ್ತಿತ್ವವೇ ಬದಲಾಗಬಹುದು. ಮಗು ಮಾನಸಿಕ ಒತ್ತಡಗಳಿಗೂ ಒಳಗಾಗಬಹುದು. ಆದ್ದರಿಂದ ಎಲ್ಲಾ ಪೋಷಕರಲ್ಲಿ ನನ್ನ ಕಳಕಳಿಯ ಮನವಿಯೆಂದರೆ ಅರಳುವ ಹೂವನ್ನು ನೋಡಿ ಸಂತೋಷಿಸಬೇಕೇ ವಿನಃ ಅದನ್ನು ಎಳೆಯದರಲ್ಲೇ ಚಿವುಟಬಾರದು. ನಾವು ನಮ್ಮ ಮಕ್ಕಳನ್ನು ಉತ್ತಮರನ್ನಾಗಿ ಮಾಡಬೇಕಾದರೆ ಮೊದಲು ನಾವು ನಮ್ಮ ಮಕ್ಕಳಿಗೆ ಮಾದರಿಯಾಗೋಣ. ಯಥಾರಾಜ: ತಥಾ ಪ್ರಜೆ ಎಂಬಂತೆ ಮಗುವಿನ ಬೆಳವಣಿಗೆಯಲ್ಲಿ ತಂದೆ- ತಾಯಿ‌ ಪಾತ್ರ ಮಹತ್ವವಾದದು. ನಮ್ಮ ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿದೆ. ಮೊದಲು ನಾವು ಆದರ್ಶರಾಗೋಣ.


ಡಾ. ಮಾಸ್ತಿ ಬಾಬು

ಉಪನ್ಯಾಸಕರು, ಲೇಖಕರು, ಸಾಹಿತಿ, ಸಂಪನ್ಮೂಲ ವ್ಯಕ್ತಿ

ಬೆಂಗಳೂರು.

Image Description

Post a Comment

0 Comments