* ಮೌಲ್ಯಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತವೆ : ಡಾ.ಹೊಂಬಯ್ಯ ಹೊನ್ನಲಗೆರೆ *

 ಮೌಲ್ಯಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತವೆ : ಡಾ.ಹೊಂಬಯ್ಯ ಹೊನ್ನಲಗೆರೆ



ರಾಯಬಾಗ : ವಿದ್ಯೆಯ ಜ್ಞಾನಾರ್ಜನೆಯನ್ನು ಬಯಸಿ ಬರುವ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದಲ್ಲಿ ಒಳಗೊಂಡಿರುವ ಜೀವನ ಮೌಲ್ಯಗಳು ವಿದ್ಯಾರ್ಥಿಯ ಬದುಕಿಗೆ ಉತ್ತಮ ಮಾರ್ಗದರ್ಶನವನ್ನು ಮಾಡುತ್ತವೆ ಎಂದು ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಲೇಖಕರಾದ ಡಾ.ಹೊಂಬಯ್ಯ ಹೊನ್ನಲಗೆರೆ ಅವರು ತಿಳಿಸಿದರು. 


ರಾಯಬಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗವು ಆಯೋಜಿಸಿದ 'ಕನ್ನಡ ಸಾಹಿತ್ಯ ಜೀವನ ಮೌಲ್ಯಗಳು' ಎಂಬ ವಿಶೇಷ ಉಪನ್ಯಾಸದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.


ಕನ್ನಡ  ಸಾಹಿತ್ಯವು ಪ್ರಾಚೀನ ಕಾಲದ ಶಾಸನ ಶಾಸ್ತ್ರದಿಂದ ಪ್ರಾರಂಭಗೊಂಡು ಆಧುನಿಕ ಕಾಲದ ಕನ್ನಡ ಸಾಹಿತ್ಯದ ವರೆಗೆ ತನ್ನದೇ ಆದ ಜೀವನ ಮೌಲ್ಯಗಳು ಸಾಹಿತ್ಯ ಕೃತಿಗಳನ್ನು ಕಾಣಲು ಸಾಧ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. 


ಜನಪದ  ಮತ್ತು ಕನ್ನಡ ಸಾಹಿತ್ಯ ಹಳೇ ಬೇರು ಹೊಸ ಚಿಗುರು ಸೇರಿಕೊಂಡು ಉತ್ತಮವಾದ ಸಂದೇಶಗಳನ್ನು ನೀಡುತ್ತಾ ಬಂದಿದೆ. ಶಾಸನದಲ್ಲಿ ಉಲ್ಲೇಖವಾಗಿರುವ ದಾನ ದತ್ತಿ ಶೌರ್ಯ ಪರಾಕ್ರಮಗಳು ಒಬ್ಬ ರಾಜ ಮತ್ತು ಸೈನಿಕನ ಉತ್ತಮ ಮೌಲ್ಯಗಳಾಗಿವೆ. ಜೊತೆಗೆ ವಡ್ಡಾರಾಧನೆ ಕೃತಿಯಲ್ಲಿ ಕಂಡುಬರುವ 19 ಕಥೆಗಳಲ್ಲಿಯೂ ಸಹ ಜೈನ ಧರ್ಮದ ಪಂಚಾಣು ವೃತಗಳು ಪ್ರತಿಯೊಬ್ಬ ವ್ಯಕ್ತಿಯು ಅನುಸರಿಸಿಕೊಂಡು ಇಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಈ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ ಎಂದು ತಿಳಿಸಿದರು.


 ಪಂಪನ ಬನವಾಸಿಯ ದೇಶಪ್ರೇಮ, ಕರ್ಣನ ತ್ಯಾಗ, ಶ್ರೀ ಕೃಷ್ಣನ ಮೈತ್ರಿ, ಧರ್ಮರಾಯನ ತಾಳ್ಮೆ ಮತ್ತು ಸತ್ಯ, ಅರ್ಜುನನ ಛಲ ಮತ್ತು ಪರಾಕ್ರಮ, ಭೀಮನ ಶೌರ್ಯ, ದುರ್ಯೋಧನನ ಅಚಲವಾದ ನಂಬಿಕೆ, ದ್ರೌಪದಿಯ ತಾಳ್ಮೆ ಮತ್ತು ಸಹನೆಯ ಮೌಲ್ಯಗಳು ಪ್ರತಿಯೊಬ್ಬ ಓದುಗರಿಗೂ ಪ್ರಭಾವವನ್ನು ಬೀರುತ್ತದೆ ಎಂದು ವಿದ್ಯಾರ್ಥಿಗಳು ಪ್ರಾಚೀನ ಕನ್ನಡ ಪಠ್ಯಗಳನ್ನು ಓದಬೇಕೆಂದು ಸಲಹೆ ನೀಡಿದರು.

ಬಸವಣ್ಣನವರ ಕಾಯಕ ತತ್ವ ಈ ಸಮಾಜಕ್ಕೆ ಮಾದರಿಯಾಗಿದೆ. ಸತ್ಯ ಹರಿಶ್ಚಂದ್ರನ ಸತ್ಯ ಚಂದ್ರಮತಿಯ ಪ್ರೀತಿ ಮತ್ತು ಪತಿಯ ಮೇಲಿನ ಭಾವ ಮಗನ ಮೇಲಿನ ವ್ಯಾಮೋಹಗಳು ಇವತ್ತಿನ ಕುಟುಂಬಕ್ಕೆ ಮಾದರಿಯಾಗಬೇಕೆಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಅರುಣ್ ಕಾಂಬಳೆ ಮಾತನಾಡುತ್ತಾ, ನಮ್ಮ ಸಮಾಜದಲ್ಲಿ ಉತ್ತಮವಾದ ಜೀವನವನ್ನು ನಡೆಸಬೇಕಾದರೆ ಹಿರಿಯರ ಮಾರ್ಗದರ್ಶನ ಎಷ್ಟು ಮುಖ್ಯವೋ ಹಾಗೆಯೇ ಸಾಹಿತ್ಯ ಕೃತಿಗಳನ್ನು ಓದುವುದರಿಂದ ಉತ್ತಮವಾದ ಜೀವನ ಮೌಲ್ಯಗಳು ಪರಿಚಯಗೊಳ್ಳುತ್ತವೆ. ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ನಮ್ಮ ಜೀವನವು ಸಾರ್ಥಕವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 


ವೇದಿಕೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಅಲ್ಕ ಕುರುಣೆ, ಪ್ರೊ. ಶ್ರೀನಾಥ್ ಕಾಂಬಳೆ, ಉಪಸ್ಥಿತರಿದ್ದರು. ಪ್ರೊ. ಜ್ಞಾನದೇವ ಪಿರಾಜೆ ಸ್ವಾಗತಿಸಿ, ವಂದಿಸಿದರು. ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ವರದಿ :ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments