* ರೋಗ ಮುಕ್ತ ಜೀವನ ನಡೆಸಲು ಯೋಗ ಸಹಕಾರಿಯಾಗುತ್ತದೆ : ವಿ.ಎಸ್.ಮಾಲಗತ್ತಿ "

 ರೋಗ ಮುಕ್ತ ಜೀವನ ನಡೆಸಲು ಯೋಗ ಸಹಕಾರಿಯಾಗುತ್ತದೆ : ವಿ.ಎಸ್.ಮಾಲಗತ್ತಿ




ಚಿಕ್ಕೋಡಿ: ಭಾರತೀಯ ಪರಂಪರೆಯಲ್ಲಿ ಯೋಗ ಮಹತ್ವದ ಸ್ಥಾನವನ್ನು ಪಡೆದು ಕೊಂಡಿದೆ. ಪ್ರತಿಯೊಬ್ಬ ಮನುಷ್ಯರು ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ರೋಗಗಳಿಂದ ಮುಕ್ತವಾಗಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ನಿವೃತ್ತ ದೈಹಿಕ ನಿರ್ದೇಶಕರಾದ ವಿ.ಎಸ್.ಮಾಲಗತ್ತಿ ತಿಳಿಸಿದರು.


ಚಿಕ್ಕೋಡಿ ತಾಲೂಕಿನ ಬೇಡಿಕಿಹಾಳ ಶಮನೇವಾಡಿ ಲಠ್ಠೆ ಶಿಕ್ಷಣ ಸಂಸ್ಥೆಯ ವಿವಿಧ ಅಂಗಸಂಸ್ಥೆಗಳು ಆಯೋಜಿಸಿದ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗಕ್ಕೆ ಚಾಲನೆ ನೀಡಿ ಮಾತನಾಡಿದರು. 


ಪ್ರತಿಯೊಬ್ಬರು ಪ್ರತಿ ನಿತ್ಯ ಜೀವನದಲ್ಲಿ ಯೋಗಾಭ್ಯಾಸವನ್ನು ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಮನಸ್ಸು ಬಹಳ ಉಲ್ಲಾಸದಿಂದ ಕೂಡಿ ಜ್ಞಾಪಕ ಶಕ್ತಿಯು ಹೆಚ್ಚುತ್ತದೆ. ಇದಲ್ಲದೆ ಮನಸ್ಸಿನ ಮೇಲೆ ಯಾವುದೇ ಒತ್ತಡ ಬೀರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳಾದ ನೀವು ನಿರಂತರವಾಗಿ ಯೋಗಾಭ್ಯಾಸ ಮಾಡಬೇಕೆಂದು ಕಿವಿ ಮಾತು ಹೇಳಿದ್ದರು. 


ಭಾರತ ದೇಶದಲ್ಲಿ ಯೋಗಕ್ಕೆ ವಿದೇಶಗಳಿಗಿಂತಲೂ ಹೆಚ್ಚಿನ ಮಹತ್ವವಿದೆ. ಈ ಕಾರಣಕ್ಕೆ ನಮ್ಮ ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು 2015ರಿಂದ ಜೂನ್ 21ನೇ ದಿನವನ್ನು ಯೋಗ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಕರೆ ಕೊಟ್ಟ ತರುವಾಯ ಯೋಗಾಭ್ಯಾಸಕ್ಕೆ ಮತ್ತಷ್ಟು ಮಹತ್ವ ದೊರಕಿದೆ ಎಂದು ತಿಳಿಸಿದರು. 


ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಯೋಗ ಶಿಕ್ಷಕಿಯಾದ ಮಂಜು ಸಾ ತವಡೆಕರ್ ಅವರು ಮಾತನಾಡುತ್ತಾ ಯೋಗಾಭ್ಯಾಸದಿಂದ ಮಾನಸಿಕವಾಗಿ, ದೈಹಿಕವಾಗಿ, ಶಾರೀರಿಕವಾಗಿ ನಮ್ಮ ದೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಜೊತೆಗೆ ಮಿತವಾದ ಆಹಾರ ಸೇವನೆ ಮತ್ತು ನಿರಂತರವಾಗಿ ಯೋಗ ಅಭ್ಯಾಸ ಮಾಡುವುದರಿಂದ ನಾವು ಮತ್ತು ನಮ್ಮ ಸುತ್ತಲಿನ ಜನರು ಸಂತೋಷದಿಂದ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.


ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕರಾದ ಎಸ್.ಐ.ಕಮತೆ ಅವರು ವಿದ್ಯಾರ್ಥಿಗಳ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು ಆಗ ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಕರೆ ನೀಡಿದರು. 


ಯೋಗಾಭ್ಯಾಸದಲ್ಲಿ ಲಠ್ಠೆ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಗಳಾದ ಬಿ.ಎಸ್.ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಶ್ರೀಮತಿ ಕುಸುಮಾವತಿ ಮಿರ್ಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು. 

ಯೋಗ ತರಬೇತಿ ನೀಡಿದ ಶಿಕ್ಷಕರಾದ   ತವಡೆಕರ್ ಮತ್ತು ಮಾಲಗತ್ತಿ ಅವರಿಗೆ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರಾದ ಟಿ.ಎಸ್.ಚೌಗಲೆ ಸನ್ಮಾನಿಸಿ ಗೌರವಿಸಿದರು.


ಯೋಗ ದಿನಾಚರಣೆಯಲ್ಲಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಕಿರಣ್ ಬಿ.ಚೌಗಲೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್.ಕಟ್ಟಿ ಪ್ರೌಢಶಾಲೆ ವಿಭಾಗದ ಎಸ್.ಐ ಕಮತೆ ಇವರೊಂದಿಗೆ ಎಲ್ಲಾ ಅಂಗ ಸಂಸ್ಥೆಗಳ ಪ್ರಾಧ್ಯಾಪಕರು, ಉಪನ್ಯಾಸಕರು, ಶಿಕ್ಷಕವರ್ಗದವರು,  ಶಿಕ್ಷಕೇತರ ನೌಕರರು ಎರಡು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಯೋಗಾಭ್ಯಾಸಕ್ಕೂ ಮುನ್ನ ವಿದ್ಯಾರ್ಥಿನಿಯರಿಂದ ಯೋಗಾ ಗೀತೆ, ನಾಡಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡಲಾಯಿತು.


ವರದಿ :ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments