* ದಲಿತ ಆತ್ಮಕಥೆಗಳು ಅಸಮಾನತೆಯಿಂದ ಸಮಾನತೆ ಕಡೆಗೆ ಮಿಡಿಯುತ್ತವೆ : ಡಾ.ಹೊಂಬಯ್ಯ ಹೊನ್ನಲಗೆರೆ *


 ದಲಿತ ಆತ್ಮಕಥೆಗಳು ಅಸಮಾನತೆಯಿಂದ ಸಮಾನತೆ ಕಡೆಗೆ ಮಿಡಿಯುತ್ತವೆ : ಡಾ.ಹೊಂಬಯ್ಯ  ಹೊನ್ನಲಗೆರೆ


ಚಿಕ್ಕೋಡಿ: ಕನ್ನಡ ಸಾಹಿತ್ಯ ಆಧುನಿಕ ಪ್ರಕಾರದಲ್ಲಿ ದಲಿತ ಸಾಹಿತ್ಯ ಒಂದು. ದಲಿತ ಸಾಹಿತ್ಯದಲ್ಲಿ ದಲಿತ ಆತ್ಮಕಥನಗಳು ಅಸಮಾನತೆಯ ಸಮಾಜವನ್ನು ಸಮಾನತೆಯಡಿಗೆ ಕರೆದೊಯ್ಯುವುದೇ ಇವುಗಳ ಆಶಯವಾಗಿದೆ. ಹಾಗಾಗಿ ದಲಿತ ಆತ್ಮಕಥೆಗಳು ಒಬ್ಬನ ಅನುಭವ ವಾಗಿರದೆ ಅದು ದಲಿತ ಜಗತ್ತಿನ ಅನುಭವದ ಕಥನವಾಗಿರುತ್ತದೆ ಎಂದು ಚಿಕ್ಕೋಡಿ ಬೇಡಕಿಹಾಳದ ಕೆಎಂಎಸಿ  ಮಹಾವಿದ್ಯಾಲಯದ ಕನ್ನಡದ ಸಹಾಯಕ ಪ್ರಾಧ್ಯಾಪಕ ಮತ್ತು ಲೇಖಕರಾದ ಡಾ.ಹೊಂಬಯ್ಯ ಅವರು ಅಭಿಪ್ರಾಯಪಟ್ಟರು.


ಚಿಕ್ಕಮಂಗಳೂರಿನ ಅಂಬೇಡ್ಕರ್ ಸ್ಟಡಿ ಸರ್ಕಲ್ ವತಿಯಿಂದ ಪ್ರತಿವಾರ ಆಯೋಜಿಸುವ ಕಾರ್ಯಕ್ರಮದಲ್ಲಿ 173 ನೆಯ ಆನ್ಲೈನ್ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ "ಕನ್ನಡ ದಲಿತ ಆತ್ಮಕಥೆಗಳು: ಸಾಂಸ್ಕೃತಿಕ 

ಮುಖಾಮುಖಿ" ಎಂಬ ವಿಷಯವನ್ನು ಕುರಿತು ಮಾತನಾಡಿದರು. 


ದಲಿತ ಆತ್ಮಕಥನವು ಕಾಲದಿಂದ ಕಾಲಘಟ್ಟಕ್ಕೆ, ದೇಶದಿಂದ ದೇಶಕ್ಕೆ, ಸಂಸ್ಕೃತಿಯಿಂದ ಸಂಸ್ಕೃತಿಗೆ, ಭಾಷೆಯಿಂದ ಭಾಷೆಗೆ, ಭಿನ್ನ ಸ್ವರೂಪದಲ್ಲಿ ಸಾಂಸ್ಕೃತಿಕ ಸಂಚಲವನ್ನುಂಟು ಮಾಡುತ್ತವೆ ಎಂದು ತಿಳಿಸುತ್ತಾ, ದಲಿತ ಆತ್ಮಕಥೆಗಳು ಕಾಲದ ಚರಿತ್ರೆ, ರಾಜಕೀಯ, ಆರ್ಥಿಕ,  ಸಾಮಾಜಿಕ ಚಿತ್ರಣಗಳನ್ನು ನೀಡುವುದರ ಮೂಲಕ ದಲಿತ ಬದುಕಿನ ವಾಸ್ತವ ಜಗತ್ತನ್ನು ತೆರೆದು ತೋರಿಸುತ್ತವೆ ಎಂದು ತಿಳಿಸಿದರು. 


ದಲಿತ ಆತ್ಮಕಥೆಗಳು ಹುಟ್ಟುವ ಮುನ್ನ, ಪ್ರಾರಂಭದಲ್ಲಿ ದಲಿತ ಕಾವ್ಯದ ಮೂಲಕ ತನ್ನ ಅನುಭವವನ್ನು 

ಸಿಟ್ಟು, ಅಬ್ಬರ,  ಆಕ್ರೋಶ,, ನೋವು ಸಂಕಟ, ಜಾತೀಯ ಅವಮಾನಗಳನ್ನು ಅಭಿವ್ಯಕ್ತಿಸಲು ಕಾವ್ಯವನ್ನು ಮೊದಲು ಅಭಿವ್ಯಕ್ತಿ ಮಾರ್ಗವಾಗಿ ಮಾಡಿಕೊಂಡರು, ಈ ಹಿನ್ನೆಲೆಯಲ್ಲಿ ದಲಿತ ಕಾವ್ಯಗಳೇ ದಲಿತರ ಬಯೋಗ್ರಾಫಿಕ್ ಆಗಿವೆ ಎಂದು ತಿಳಿಸಿದರು. 


ಕನ್ನಡದ ಬಹುತೇಕ ದಲಿತ ಆತ್ಮ ಕಥೆಗಳಾದ ಅರವಿಂದಮಾಲಗತ್ತಿಯವರ ಗೌರ್ನಮೆಂಟ್ ಬ್ರಾಹ್ಮಣ, ಸಿದ್ದಲಿಂಗಯ್ಯ ಅವರ ಊರುಕೇರಿ, ತುಂಬಾಡಿ ರಾಮಯ್ಯ ಅವರ ಮಳೆಗಾರ, ಗೋವಿಂದರಾಜ್ ಅವರ ಮನವಿಲ್ಲದವರ ಮಧ್ಯೆ, ಹನುಮಂತ ರಾವ್ ಬಿ ದೊಡ್ಮನಿ ಅವರ ಪಂಚಮ, ದು. ಸರಸ್ವತಿಯವರ ಈಗೇನ್ ಮಾಡಿರಿ, ಸಂಜೀವರಾಯ ಅವರ ಹೊರಬೀಡು,  ಮೂಡ್ನಾಕೂಡು ಚಿನ್ನಸ್ವಾಮಿಯವರ ನೆನಪಿನ ಹಕ್ಕಿಯ ಹಾರಲು ಬಿಟ್ಟು, ಎಲ್  ಹನುಮಂತಯ್ಯ ಅವರ ಒಂಟಿ ಕಾಲಿನ ನಡಿಗೆ, ಮುನಿ ವೆಂಕಟಪ್ಪನವರ ಅಂತ್ಯಜನ  ಆತ್ಮಕಥೆ, ಅಂಬೇಡ್ಕರ್ ಅವರ ವೀಸಾದ ನಿರೀಕ್ಷೆಯಲ್ಲಿ ನೆನಪುಗಳು ಎಂಬ ಆತ್ಮ ಕಥೆಗಳು ದಲಿತ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಮೂಲಕ ಸಾಂಸ್ಕೃತಿಕ ಮುಖಾಮುಖಿಯಾಗುತ್ತವೆ ಎಂದು ತಿಳಿಸಿದರು. 


ಅನಕ್ಷರ ಲೋಕದಿಂದ ಅಕ್ಷರ ಲೋಕದೆಡೆಗೆ,  ಜಾತಿ ಅಸ್ಪೃಶ್ಯತೆಯಿಂದ ಜಾತ್ಯತೀತದ ಮೌಲ್ಯದ ಕಡೆಗೆ,  ಅಜ್ಞಾನ ಅಂಧಕಾರದಿಂದ ಪ್ರಜ್ಞಾವಂತ ವಿವೇಕದ ಕಡೆಗೆ,  ಶೋಷಣೆಯಿಂದ ಸಾಮಾಜಿಕ ಪರಿವರ್ತನೆಯ ಹೋರಾಟದ ಕಡೆಗೆ, ದಬ್ಬಾಳಿಕೆ ದೌರ್ಜನ್ಯ,  ಒಪ್ಪಿತ ಮೌನದಿಂದ ಪ್ರಶ್ನೆಯ ಮಾತುಗಳಿಂದ ಪ್ರತಿಭಟನೆಯ ಕಡೆಗೆ, ಕೀಳರಿಮೆಯಿಂದ ಸ್ವಾಭಿಮಾನದ ಕಡೆಗೆ, ಅಸಮಾನತೆಯಿಂದ ಸಮಾನತೆ ಎಡೆಗೆ, ದಲಿತ ಆತ್ಮಕಥೆಗಳು ಮಿಡಿಯುತ್ತವೆ ಮತ್ತು ದುಡಿಯುತ್ತವೆ ಎಂದು ಮಾರ್ಮಿಕವಾಗಿ ತಿಳಿಸಿದರು.


 ನಮ್ಮ ಕರುಳಿನ ಕಥೆಗಾರ ನೀ ಎಲ್ಲಿ ಹೋದೆ ದೂರ ಎಂಬ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನೇಹಾ ಚಂದ್ರಪ್ಪ ಸ್ವಾಗತಿಸಿ, ನಿರೂಪಿಸಿದರು. ಡಾ.ಅಭಿಲಾಷ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟರು, ಉಪನ್ಯಾಸದ ನಂತರ ಕೆಲವು ಪ್ರಶ್ನೆಗಳಿಗೆ ಸಂವಾದ ನಡೆಯಿತು.‌ ನೂರಕ್ಕೂ ಹೆಚ್ಚು ಸಭಿಕರು ಭಾಗವಹಿಸಿದ್ದರು.


ವರದಿ :ಡಾ. ವಿಲಾಸ್ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments