“ಒಲುಮೆಯ ಅಕ್ಷರಬಂಧುಗಳಿಗೆ “ಅಂತರರಾಷ್ಟ್ರೀಯ ಅಮ್ಮಂದಿರ ದಿನಾಚರಣೆಯ ಹಾರ್ದಿಕ ಶುಭಕಾಮನೆಗಳು”. ಇದು ಅಮ್ಮನ ಮೇಲಿನ ಕವಿತೆಯಲ್ಲ.. ನಮ್ಮೊಳಗಿನ ಅಮ್ಮನ ನಿತ್ಯ ಸತ್ಯ ಕಥೆ. ಅಂತರಾಳದಿ ಸದಾ ಅನುರಣಿಸುವ ಅಮ್ಮನ ಭಾವ-ಭಾಷ್ಯಗಳ ಅಮರಗೀತೆ. ಪಾಶ್ಚಿಮಾತ್ಯ ಆಚಾರ-ವಿಚಾರಗಳಲ್ಲಿ ಅಮ್ಮನಿಗೂ ವರ್ಷದಲ್ಲೊಂದು ದಿನಾಚರಣೆ. ಆದರೆ ನಮ್ಮೀ ನೆಲದ ಅನನ್ಯ ಸಂಸ್ಕೃತಿ-ಸಂಸ್ಕಾರಗಳಲ್ಲಿ ಇಡೀ ವರ್ಷವಷ್ಟೇ ಅಲ್ಲ, ಜೀವದ ಜೀವಮಾನದುದ್ದಕ್ಕೂ ಅಮ್ಮನದೇ ಆರಾಧನೆ. ಏಕೆಂದರೆ ಅಮ್ಮ ನಮಗೆ ಆಚರಣೆಯ ವ್ಯಕ್ತಿಯಲ್ಲ. ನಮ್ಮ ಬಾಳಿನ ದೈವಿಕ ಶಕ್ತಿ. ಬದುಕಿನ ದಿವ್ಯದೀಪ್ತಿ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಜೀವ-ಜೀವನದಾಚರಣೆ..!
ಪ್ರತಿ ಮುಂಜಾವು ನೆನಪಾಗಿಸುತ್ತದೆ ಅವಳ
ಈ ಜೀವಕ್ಕೆ ಆ ಬೆಳ್ಳಿ ಭಾಸ್ಕರನ ತೋರಿದ್ದು
ಅರುಣೋದಯವ ಪರಿಚಯಿಸಿ ಹಾಡಿದ್ದು
ಕಚಗುಳಿಯಿಟ್ಟು ಕಿರಣಗಳೆದುರು ಕಣ್ಬಿಡಿಸಿದ್ದು
ಅವಳೆ ಬದುಕಿಗೆ ಬೆಳಗಾಗುವುದ ತಿಳಿಸಿದ್ದು.!
ಪ್ರತಿ ಕೈಯೊಳಗಿನ ತುತ್ತು ನೆನೆಸುತ್ತದೆ ಅವಳ
ಈ ದೇಹಕ್ಕೆ ಹಾಲುಣಿಸಿದ್ದು ನೀರು ಕುಡಿಸಿದ್ದು
ಪ್ರಪ್ರಥಮ ತುತ್ತಿಟ್ಟಿದ್ದು ಮುದ್ದುಮಾಡಿ ತಿನಿಸಿದ್ದು
ಸಿಹಿಕಹಿ ಹುಳಿ-ಉಪ್ಪು ಖಾರ ಪರಿಚಯಿಸಿದ್ದು
ಅವಳೆ ಕೈ-ಬಾಯಿಗೆ ತಿನ್ನುವುದನು ಕಲಿಸಿದ್ದು.!
ಪ್ರತಿ ಅಕ್ಷರ ಪದವು ನೆನಪಾಗಿಸುತ್ತದೆ ಅವಳ
ಈ ಮತಿಗೆ ಓದು ಬರಹದರಿವು ಮೂಡಿಸಿದ್ದು
ಸ್ಲೇಟು ಬಳಪ ಹಿಡಿಸಿ ಮೊದಲಕ್ಷರ ತಿದ್ದಿಸಿದ್ದು
ನುಡಿ ಲಿಪಿ ಪದ ಸಂಖ್ಯೆಗಳನೆಲ್ಲ ಹೇಳಿಕೊಟ್ಟಿದ್ದು
ಅವಳೆ ಮೊದ ಮೊದಲ ಗುರುವಾಗಿ ಬೆಳೆಸಿದ್ದು.!
ಪ್ರತಿ ಹೆಜ್ಜೆಯು ಅಡಿಗಡಿಗೂ ನೆನೆಸುತ್ತದೆ ಅವಳ
ಈ ಕಾಯಕೆ ನಡೆ ನಡಿಗೆಗಳ ತೋರಿಸಿಕೊಟ್ಟಿದ್ದು
ಕೈಹಿಡಿದು ಪಾದಗಳಿಗೆ ಪ್ರಥಮ ಅಡಿ ಇಡಿಸಿದ್ದು
ಎಡವದೆ ನಡೆವುದ, ಬಿದ್ದಾಗ ಏಳುವುದ ಹೇಳಿದ್ದು
ಅವಳೆ ಮಾರ್ಗದರ್ಶಕಳಾಗಿ ನಿಂತು ಮುನ್ನಡೆಸಿದ್ದು.!
ಪ್ರತಿ ಇರುಳ ಕ್ಷಣಕ್ಷಣ ನೆನಪಾಗಿಸುತ್ತದೆ ಅವಳ
ಈ ತನುವಿಗೆ ಆ ಚಂದಾಮಾಮನ ನೋಡಿಸಿದ್ದು
ಆ ಬೆಳದಿಂಗಳಲಿ ತುತ್ತಿಟ್ಟಿದ್ದು ತಟ್ಟುತ ಲಾಲಿಸಿದ್ದು
ನಿದ್ದೆಯಲಿ ಬೆಚ್ಚಿದಾಗ ಬಿಗಿದಪ್ಪಿ ಭಯ ಕಳೆದದ್ದು
ಅವಳೆ ರಾತ್ರಿಗಳಿಗೆ ಹೆದರದಂತೆ ಗಟ್ಟಿಯಾಗಿಸಿದ್ದು.!
ಅನುದಿನ ಅನುಕ್ಷಣವು ಅವಳದೇ ಸಖ್ಯ ಸಾರಥ್ಯ
ಬದುಕಿನ ಭಾವ-ಭಾಷ್ಯ ಎಲ್ಲಕು ಅವಳೇ ವೇದ್ಯ
ವರ್ಷವಲ್ಲ ಇಡೀ ಜೀವನವೆ ಅವಳಾಗಿರುವಾಗ
ಅವಳಿಗಾಗಿ ಸಾಧ್ಯವೇ ಒಂದು ದಿನದ ಆಚರಣೆ.?
ಪ್ರತಿದಿನವು ನನಗೆ ಎಂದೂ ಅಮ್ಮನ ದಿನಾಚರಣೆ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments