*ಗಾನಸುಧೆಯ ಒಲವಿನ ಒರತೆ ಅಮೃತಾ ಒಂಟೆ*
ಸಂಗೀತ ˌ ಸಾಹಿತ್ಯ ಸರಸ್ವತಿಯ ಎರಡು ಕಣ್ಣುಗಳು.ಸಂಗೀತ ಮನೋಲ್ಲಾಸವನ್ನುಂಟು ಮಾಡುತ್ತದೆ.ಸಂಗೀತ ಶಾರದೆ ಒಲಿದು ನಿಂತಳೆಂದರೆ ಹೃದಯದುಂಬಿ ನರ ನರಗಳಲ್ಲಿ ಆನಂದದ ಊಟೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿಯ ಅಮೃತ ಕಂಠದ ˌಸಂಗೀತಾಮೃತದ ಊಟೆ ಅಮೃತಾ ಒಂಟೆ ಸಂಗೀತ ಸರಸ್ವತಿಯನ್ನು ಒಲಿಸಿಕೊಂಡ ಅಪರೂಪದ ಸಾಧಕಿ.ಜಂಬು ಒಂಟೆˌಜಯಶ್ರೀ ಒಂಟೆ ಅವರ ಸುಪ್ರಿಯ ಸುಪುತ್ರಿ ಅಮೃತಾ 26-11-2007 ರಂದು ಜನಿಸಿದರು.ಎಸ್.ವಿ.ಈ.ಎಸ್.ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡುತ್ತಿದ್ದಾಳೆ.ಸುಪ್ರಸಿದ್ಧ ಗಾಯಕಿಯಾಗುವುದರ ಜೊತೆಗೆ ಐ.ಎ.ಎಸ್.ಅಧಿಕಾರಿಯಾಗಿ ದೇಶ ಸೇವೆ ಮಾಡಬೇಕೆಂಬ ಆಕಾಂಕ್ಷೆ ಹೊಂದಿರುವರು.ಹಾಡುವುದುˌನೃತ್ಯ ಮಾಡುವುದುˌಬೋಧನೆಗೈಯುವುದುˌಓದುˌಭಾಷಣ ಇವರ ಹವ್ಯಾಸಗಳು.ಹವ್ಯಾಸಗಳು ಹಣೆಬರಹ ಬರೆಯುತ್ತವೆಂದು ಬಲವಾಗಿ ನಂಬಿರುವ ಇವರು ಹವ್ಯಾಸಗಳು ಕನಸಿನ ಬೀಜಗಳನ್ನು ಬಿತ್ತಿ ಬೆಳೆಯುವ ಭೂಮಿಯಾಗಿದೆಯೆನ್ನುತ್ತಾರೆ.
ಅಮೃತಾರವರು ಮೂರನೆಯ ತರಗತಿಯಿಂದಲೇ ಹಾಡಲು ಪ್ರಾರಂಭಿಸಿ ಇಲ್ಲಿಯವರೆಗೆ ನೂರಾರು ಮಹತ್ವದ ಕಾರ್ಯಕ್ರಮಗಳಲ್ಲಿ ಕಂಠದಾನ ಮಾಡಿ ಜೂನಿಯರ್ ಬಿ.ಜಯಶ್ರೀˌ ಜೂನಿಯರ್ ಲತಾ ಮಂಗೇಶ್ಕರ್ ಎಂಬ ಅಭಿದಾನದಿಂದ ಸಂಗೀತಾಭಿಮಾನಿಗಳಿಂದ ಕರೆಯಿಸಿಕೊಳ್ಳುತ್ತಿದ್ದಾರೆ.ಲಘು ಸಂಗೀತˌಜನಪದ ಗೀತೆˌಭಾವಗೀತೆ ಪ್ರತಿಭಾ ಕಾರಂಜಿ ಸ್ಫರ್ಧೆಗಳಲ್ಲಿ ಜಿಲ್ಲಾಮಟ್ಟದಲ್ಲಿ ಜಯಭೇರಿ ಬಾರಿಸಿ ರಾಜ್ಯಮಟ್ಟದಲ್ಲಿ ಗಾನಾಮೃತ ಸುರಿಸಿ ಹಾಡುಗಳ ಮೆರವಣಿಗೆ ಮಾಡಿದ್ದಾರೆ.
ಐಹೊಳೆ ಗಾಯನ ಸ್ಪರ್ಧೆˌಸತೀಶ ಶುಗರ್ ಅವಾರ್ಡ್ಸˌಸರಿಗಮಪ ರಿಯಾಲಿಟಿ ಶೋˌಎದೆ ತುಂಬಿ ಹಾಡುವೆನು ˌಸುವರ್ಣ ಕಂಠಸಿರಿ ಗಾಯನ ಸ್ಪರ್ಧೆˌಉತ್ತರ ಕರ್ನಾಟಕದ ಸಿಂಗಿಂಗ್ ಸ್ಪರ್ಧೆˌಶಾಂಭವಿಶ್ರೀ ಅವಾರ್ಡ್ಸˌವಾಯ್ಸ್ ಆಫ್ ಸವಸುದ್ಧಿˌಧಾರವಾಡ ಸಿಂಗಿಂಗ್ ಸ್ಪರ್ಧೆˌಎಮ್.ಬಿ.ಪಾಟೀಲ ಸಿಂಗಿಂಗ್ ಸ್ಪರ್ಧೆˌಪ್ರತಿಭಾ ಕಾರಂಜಿˌಉತ್ತರ ಕರ್ನಾಟಕ ಆನ್ಲೈನ್ ಸ್ಪರ್ಧೆ ಹೀಗೆ ಹತ್ತು ಹಲವಾರು ಬೆಲೆಯುಳ್ಳ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನಮನ ಸೆಳೆದಿದ್ದಾರೆ.ಹಲವಾರು ಪ್ರಶಸ್ತಿˌಬಹುಮಾನಗಳನ್ನು ಪಡೆದು ನೂರೆಂಟು ಗೌರವ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಅಮೃತ ಕೊರಳಿನ ಅಮೃತಾ ಒಂಟೆಯವರನ್ನು ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ ಸ್ವರ ಸಂಗಮ ಭಾವ ಸಂಭ್ರಮ ಕಾರ್ಯಕ್ರಮದಲ್ಲಿ ಆದರಾತಿಥ್ಯ ನೀಡಿ ಇವರ ಕೊರಳು ಪೂಜಿಸಿ ಗೌರವಿಸಿದ್ದಾರೆ.
ಅಮೃತಾ ಒಂಟೆ ಸಂಗೀತ ಕ್ಷೇತ್ರದಲ್ಲಿ ಒಂಟೆಯಂತೆ ಎತ್ತರೆತ್ತರ ಬೆಳೆದು ನಾಡಿನ ಸ್ಥಿರಾಸ್ತಿˌಚರಾಸ್ತಿಯಾಗಲೆಂದು ಶುಭ ಹರಕೆಗಳು.ಅಮೃತಾ ಅವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಿ ವೇದಿಕೆ ಕಲ್ಪಿಸಿ ಗೌರವಿಸುವವರು ಈ (9916848198)ದೂರವಾಣಿಗೆ ಕರೆ ಮಾಡಬಹುದಾಗಿದೆ.
ಲೇಖಕರು:
ಶ್ರೀ ರವೀಂದ್ರ ಪಾಟೀಲ
ತಾಲೂಕಾಧ್ಯಕ್ಷರುˌಕನ್ನಡ ಸಾಹಿತ್ಯ ಪರಿಷತ್ತುˌರಾಯಬಾಗ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments