"ಭರತನಾಟ್ಯದ ಬಂಗಾರ ರಾಧಿಕಾ ಪತ್ತಾರ"*

 *"ಭರತನಾಟ್ಯದ ಬಂಗಾರ ರಾಧಿಕಾ ಪತ್ತಾರ"*



ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ.ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ.ಕಲಾದೇವಿಯ ಆರಾಧನೆಯಲ್ಲಿ ತನ್ಮಯಳಾಗಿ ಭರತನಾಟ್ಯದಲ್ಲಿ ಹೆಸರು ಮಾಡಿರುವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿಯ ರಾಧಿಕಾ ಪತ್ತಾರ ಕಲಾಪ್ರಪಂಚದ ಹೊಸ ಬೆಳಕು.ಭರತನಾಟ್ಯದ ಬಂಗಾರ ರಾಧಿಕಾ ಪತ್ತಾರ ಕಲಾ ಭಂಡಾರವಾಗಿರುವುದು ಹೆಮ್ಮೆಯ ಶುಭವಾರ್ತೆ.

   ಈ ನೆಲದ ಕಲಾ ಫಸಲು ಹುಲುಸಾಗಿರುವುದಕ್ಕೆ ಹೆಗ್ಗುರುತಾಗಿರುವ ನಾಟ್ಯದೊಡತಿ ರಾಧಿಕಾ ಪತ್ತಾರ ಬಾಗೆನಾಡಿನ ಕಲಾ ಸರಸ್ವತಿ.ನಾಟ್ಯಸಿರಿ ರಾಧಿಕಾ 15-4-2002 ರಂದು ಗಜಾನನ ˌಯಶೋಧಾರವರ ಉದರದಲ್ಲಿ ಹಾರೂಗೇರಿಯಲ್ಲಿ ಆವಿರ್ಭಾವಿಸಿದರು.ಬಿ.ಎ ಸ್ನಾತಕ ಪದವಿ ಪೂರ್ಣಗೊಳಿಸಿ ನ್ಯಾಯವಾದಿಯಾಗಬೇಕೆಂಬ ಕನಸು ನನಸು ಮಾಡಿಕೊಳ್ಳಲು ಎಲ್.ಎಲ್.ಬಿ ವ್ಯಾಸಂಗ ಮಾಡುತ್ತಿದ್ದಾರೆ.ಕಳೆದ ನಾಲ್ಕು ವರುಷಗಳಿಂದ ಭರತನಾಟ್ಯ ತರಬೇತಿ ನೀಡುವ ಕಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ನಾಟ್ಯ ಮಯೂರಿ ರಾಧಿಕಾ ಪತ್ತಾರರವರು 250 ಕ್ಕೂ ಮಿಗಿಲು ನಾಟ್ಯನವಿಲುಗಳನ್ನು ರೂಪಿಸಿದ ರೂವಾರಿಗಳಾಗಿದ್ದಾರೆ.ಸ್ವಯಂ ಪ್ರೇರಣೆಯಿಂದ ಕಲಾಪ್ರಪಂಚಕ್ಕೆ ಕಾಲಿರಿಸಿದ ಇವರು ಯಕ್ಷಗಾನˌಕುಚುಪುಡಿˌಭರತನಾಟ್ಯˌಜನಪದ ಕಲೆಗಳನ್ನು ಕರತಲಾಮಲಕ ಮಾಡಿಕೊಳ್ಳಲು ಬೆಂಗಳೂರಿನ ಶಶಿಕಲಾದೇವಿಯವರಲ್ಲಿ ಕಲಾನೈಪುಣ್ಯತೆ ಬೆಳೆಸಿಕೊಳ್ಳುತ್ತಿದ್ದಾರೆ.ಕನ್ನಡತಿˌನಾಟ್ಯಮಳೆಯ ಸ್ವಾತಿಮುತ್ತು ರಾಧಿಕಾ ಪತ್ತಾರ ಹಲವಾರು ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶಿಸಿ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  ಬೆಳಗಾವಿ ಜಿಲ್ಲಾ ಮಟ್ಟದ ಭರತನಾಟ್ಯˌಕುಚುಪುಡಿ ನೃತ್ಯ ಸ್ಫರ್ಧೆಯಲ್ಲಿ ನರ್ತನಗಿರಿ ರಾಧಿಕಾ ಪತ್ತಾರ ಅವರು ಪ್ರಥಮ ಸ್ಥಾನ ಗಿಟ್ಟಿಸಿ ಬೆಳಗಾವಿ ಜಿಲ್ಲಾ ನೃತ್ಯ ಸಿಂಹಾಸನದ ವಾರಸುದಾರರಾಗಿದ್ದಾರೆ.2023-24 ನೆಯ ಸಾಲಿನ ರಾಜ್ಯ ಮಟ್ಟದ ಯುವಜನೋತ್ಸವದ  ಜನಪದ ನೃತ್ಯ ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದದ್ದು ಇವರಿಗೆ ಕಲೆ ಕೈವಶವಾಗಿರುವುದಕ್ಕೆ ಜೀವಂತ ಸಾಕ್ಷಿ.ಕಲೆˌಸಾಹಿತ್ಯˌಸಾಂಸ್ಕೃತಿಕ ಸಂಘಟನೆಗಳು ಆಯೋಜಿಸಿದ ಕಲಾಪ್ರದರ್ಶನಗಳಲ್ಲಿ ಅನುಪಮ ಪ್ರತಿಭಾ ಸಂಪನ್ನೆ ರಾಧಿಕಾ ಭಾಗವಹಿಸಿ ಜನಮನ ಸೂರೆಗೊಂಡು ಜನಪ್ರಿಯ ಕಲಾವಿದೆಯಾಗಿ ಮಿಂಚುತ್ತಿದ್ದಾರೆ.

 2022-23 ರಲ್ಲಿ ಝಿ ಕನ್ನಡ ವಾಹಿನಿ ಬಿತ್ತರಿಸುವ ಡಿ.ಕೆ.ಡಿ ರಿಯಾಲಿಟಿ ಶೋ ದಲ್ಲಿ ಸಹ ಕಲಾವಿದೆಯಾಗಿ ಲೀಲಾಜಾಲ ನೃತ್ಯಗೈದು ತೀವ್ರ ಗಮನ ಸೆಳೆದಿದ್ದಾರೆ.

  ರಾಧಿಕಾರವರ ನಿಸ್ವಾರ್ಥ ಕಲಾ ಸೇವೆಯನ್ನು ಗುರುತಿಸಿ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮೂಡಲಗಿˌಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟˌಬೆಳಗಾವಿˌಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘˌಮೂಡಲಗಿಯವರು 'ಜಾನಪದ ಕಲಾಶ್ರೀ' ಪ್ರಶಸ್ತಿ ನೀಡಿ ಆದರಿಸಿದ್ದಾರೆ.ಶ್ರೀ ಇಟ್ಟಪ್ಪ ದೇವರ ಅಭಿವೃದ್ದಿ ಸೇವಾ ಸಮಿತಿ (ರಿ)ಹಳ್ಳೂರರವರು 'ಜಾನಪದ ಕಲಾರತ್ನ' ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ.ಹತ್ತು ಹಲವು ಸನ್ಮಾನ ಗೌರವ ಪುರಸ್ಕಾರಗಳು ಇವರ ಸಿರಿಮುಡಿಗೆ ಸಂದಿವೆ.ನಾಟ್ಯ ಸಿಂಗಾರಿ ರಾಧಿಕಾ ಪತ್ತಾರ ಅವರಲ್ಲಿಯ ಭರತನಾಟ್ಯ ನಿಧಿ ಕಂಡು ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು 17-2-2024 ರಂದು ಹಂದಿಗುಂದದಲ್ಲಿ ಆಯೋಜಿಸಿದ ರಾಯಬಾಗ ತಾಲೂಕು ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಸುವರ್ಣ ಗೌರವ' ಸತ್ಕಾರ ಮಾಡಿದ್ದು ಅವಿಸ್ಮರಣೀಯ ಕಲಾಮೃತ ರಸಘಳಿಗೆ.

 ಕಲೆ ಸದಾ ಉಸಿರಾಡಬೇಕು.ಕಲೆಯ ಉಸಿರು ಇದ್ದಲ್ಲಿ ನೆಲದ ಸಂಸ್ಕೃತಿ ಹಸಿರು ಹಸಿರಾಗಿರುತ್ತದೆ.ಕಲೆಯು ನಾಡಿನ ಸಂಸ್ಕೃತಿ ಸಂಕೇತ.ಈ ಮಣ್ಣಿನ ಅಸ್ಮಿತೆಯನ್ನು ಎತ್ತಿ ಹಿಡಿಯುತ್ತಿರುವ ನಾಟ್ಯವಲ್ಲಭೆ ರಾಧಿಕಾ ಸದಾವಕಾಲ ಅಭಿನಂದನಾರ್ಹರು. ಬಾಗೆನಾಡಿನ ಎಂದೂ ಮರೆಯದ ಕಲಾ ಅಪರಂಜಿ ಪತ್ತಾರ ರಾಧಿಕಾ ಅವರು ಕಲಾಲೋಕದ ಮಹಾನಟಿಯಾಗಿ ಬೆಳೆದು ನಾಡು ಬೆಳಗಲಿ.ನವ ಕಲಾಕಾರರನ್ನು ಹುಟ್ಟುಹಾಕಿ ಬೆಳೆಸಲೆಂದು ಆಶಿಸೋಣ.ರಾಧಿಕಾರವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಿ ಪ್ರೋತ್ಸಾಹಿಸುವವರುˌಅಭಿನಂದಿಸುವವರು    ದೂರವಾಣಿಗೆ (9880411906) ಸಂಪರ್ಕಿಸಬಹುದಾಗಿದೆ.


ಲೇಖಕರು:ರವೀಂದ್ರ ಪಾಟೀಲ

ತಾಲೂಕಾಧ್ಯಕ್ಷರುˌಕನ್ನಡ ಸಾಹಿತ್ಯಪರಿಷತ್ತುˌರಾಯಬಾಗ

Image Description

Post a Comment

0 Comments