ಆಧುನಿಕ ಚಿತ್ರಕಲೆಯ ದಾರಿಯಲ್ಲಿ ಒಂದು ನೋಟ;
ವಸ್ತುವನ್ನು ಇದ್ದಂತೆಯೇ ಚಿತ್ರಿಸದೆ ಆ ವಸ್ತುವಿನಿಂದ ಚಿತ್ರಕಾರನ ಮನಸ್ಸಿನ ಮೇಲಾದ ಪರಿಣಾಮವನ್ನು ಪರ್ಯಾಯವಾಗಿ ಸೂಚಿಸುವುದು ಆಧುನಿಕ ಚಿತ್ರಕಲೆಯ ಲಕ್ಷಣ. ಆಧುನಿಕ ಚಿತ್ರಕಲೆಯ ಆರಂಭ ಯಾವಾಗ, ಎಲ್ಲಿಂದ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಈ ಶತಮಾನದ ಚಿತ್ರಕಲೆ ಹಿಂದಿನ ಶತಮಾನದ ಚಿತ್ರಕಲೆಯಿಂದ ಪ್ರೇರಿತ. ಹೀಗೆ ಅರಸುತ್ತ ಗವಿಮಾನವ ಬಂಡೆಗಳ ಚಿತ್ರ ಬಿಡಿಸಿದ್ದವರೆಗೂ ಹಿಂದಕ್ಕೆ ಹೋಗಬಹುದು. ವಸ್ತು ಇದ್ದಂತೆಯೇ ಚಿತ್ರ ಬರೆಯುತ್ತಿದ್ದ ಕಾಲವೊಂದಿತ್ತು. ಮುಂದೆ ಕ್ಯಾಮೆರಾಗಳು ಬಂದವು. ಕಲಾವಿದರು ಮಾಡುತ್ತಿದ್ದ ಕೆಲಸವನ್ನು ಅವು ಮಾಡಿದವು. ಕಲಾವಿದರು ತಮ್ಮ ಪ್ರತಿಭೆಯನ್ನು ತೋರಿಸಲು ಹೊಸ ಮಾರ್ಗಗಳನ್ನು ಹುಡುಕಬೇಕಾಯಿತು. 20ನೆಯ ಶತಮಾನದ ಆರಂಭದಲ್ಲಿ, ಇಂಥ ಕಾಲದ್ದು ಅಥವಾ ನಾಗರೀಕತೆಯದು ಎಂದು ನೋಡದೆ, ಎಲ್ಲಾ ಕಲಾಕೃತಿಗಳನ್ನು ಚಿತ್ರಕಾರರು ಅಭ್ಯಾಸ ಮಾಡತೊಡಗಿದರು. ಹೊಸ ಭಾವನೆಗಳನ್ನು ಸಮರ್ಥವಾಗಿ ವ್ಯಕ್ತಪಡಿಸಬಲ್ಲ ಮಾಧ್ಯಮವನ್ನು ಹುಡುಕಿದರು.
ವಸ್ತುನಿಷ್ಠವಾದ ಆಧುನಿಕ ಚಿತ್ರಕಲೆ ಹಲವಾರು ಪಂಥಗಳಿಗೆ ದಾರಿ ಮಾಡಿಕೊಟ್ಟಿದೆ. ಫ್ರಾನ್ಸಿನ ಕ್ಲಾಡ್ ಮೊನೆ (1840 ರಿಂದ 1926) ಸೂರ್ಯೋದಯದ ಚಿತ್ರವೊಂದನ್ನು ರಚಿಸಿದ. ಅದೊಂದು ಬಗೆಯ ಅಣಕ ಚಿತ್ರ. 'ಸಮಷ್ಟಿ ಪರಿಣಾಮ;ಸೂರ್ಯೋದಯ' ಎಂದು ಶೀರ್ಷಿಕೆ ಕೊಟ್ಟಿದ್ದ. ಆ ಚಿತ್ರದ ಜೊತೆ ಪ್ರದರ್ಶನಕ್ಕೆ ಇಟ್ಟಿದ್ದ ಎಲ್ಲಾ ಚಿತ್ರಗಳನ್ನು 'ಸಮಷ್ಟಿ ಪರಿಣಾಮವಾದಿ ಚಿತ್ರಗಳು' ಎಂದು ಒಬ್ಬ ವಿಮರ್ಶಕ ಹೆಸರಿಸಿದ. ಆ ಹೆಸರೇ ಉಳಿದು ಹೋಯಿತು. ಅಂಥ ಚಿತ್ರಕಾರರ ದೃಷ್ಟಿಯಲ್ಲಿ ವಸ್ತು ಗೌಣ. ಚಿತ್ರದ ಮೇಲೆ ಬೀಳುವ ಬೆಳಕು, ನೆರಳಿನಲ್ಲಿ ಉದುಗಿರುವ ಬಣ್ಣಗಳನ್ನು ಕಂಡುಕೊಳ್ಳುವುದು ಈ ಕಲಾವಿದರು ಆರಿಸಿಕೊಂಡ ವಿಧಾನಗಳು. ಬಣ್ಣಗಳ ಬಗೆಗೆ ಅವರು ವೈಜ್ಞಾನಿಕ ಅಧ್ಯಯನ ಮಾಡಿ ಆ ಜ್ಞಾನವನ್ನು ಚಿತ್ರಕಲೆಯಲ್ಲಿ ಬಳಸಿಕೊಂಡರು.
ಫಾವಿಸಂ ಪಂಥೀಯರಿಗೆ ಬಣ್ಣಗಳು, ಗೆರೆಗಳೆ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಸುಲಭದ ದಾರಿ. ಫಾವಿಸಂ ಪದದ ಮೂಲ, ಕಾಡು ಮೃಗಗಳು ಎಂಬರ್ಥ ಕೊಡುವ ಫ್ರೆಂಚ್ ಪದ. ಹೆನ್ರಿ ಮಾಟಿಸ್, ದಗಾ ಫಾವಿಸಂನ ಪ್ರಮುಖ ಕಲಾವಿದರು. ಪೂರಕ ಬಣ್ಣಗಳನ್ನು ಒಂದರ ಪಕ್ಕದಲ್ಲಿ ಒಂದರಂತೆ ಹಾಕಿ ಚಿತ್ರ ಸ್ಪಂದಿಸುತ್ತಿದೆಯೇನೋ ಎನಿಸುವಂತೆ ಅವರು ಮಾಡಿದರು. ಈ ಜಗತ್ತನ್ನು ವಸ್ತುನಿಷ್ಠ ದೃಷ್ಟಿಯಿಂದ ನೋಡಬೇಕು ಎಂದು ಫ್ರೆಂಚ್ ಚಿತ್ರಕಾರ ಸೇಜಾನ್ ಮಾಡಿದ ದೃಢ ನಿರ್ಧಾರದಿಂದ ಮೂಡಿತು "ಆಧುನಿಕ ಕಲೆ" ಎಂದು ಕರೆಯಲ್ಪಡುವ ಕಲಾಪ್ರಕಾರ. 'ಆಧುನಿಕ ಕಲೆಯ ಜನಕ' ಎಂದು ಸೇಜಾನ್ ಪರಿಗಣಿಸಲ್ಪಟ್ಟಿದ್ದಾನೆ.
ಆಫ್ರಿಕನ್ ಶಿಲ್ಪಗಳಿಂದ ಪ್ರಭಾವಿತರಾದ ಪಾಬ್ಲೋ ಪಿಕಾಸೋ ಹಾಗೂ ಜಾರ್ಜ್ ಬ್ರಾಕ್ ಘನಾಕೃತಿ ಕಲೆಯ ಪ್ರವರ್ತಕರಾದರು. ಪ್ರಕೃತಿಯನ್ನು ಸ್ತಂಭಾಕೃತಿ, ಗೋಳ ಮತ್ತು ಶಂಖಾಕಾರಗಳಿಂದ ನಿರೂಪಿಸಬೇಕು ಎಂಬ ಸೇಜಾನನ ವಾಕ್ಯ ಅವರ ದಾರಿದೀಪ. ಜಾಮಿತೀಯ ಆಕೃತಿಗಳಲ್ಲಿ ಅವರು ಪ್ರಕೃತಿಯ ಸೌಂದರ್ಯವನ್ನು ಸೆರೆಹಿಡಿದಿದ್ದಾರೆ. ಈ ಪಂಥದ ಕಲಾವಿದ ಒಂದು ವಸ್ತುವಿನ ಎದುರಿಗೆ ಕಾಣುವ ಪಾರ್ಶ್ವವಷ್ಟೇ ಅಲ್ಲ ಅಗೋಚರ ಪಾರ್ಶ್ವಗಳು ಕಾಣುತ್ತಿವೆ ಎಂಬ ಭಾವನೆ ಮೂಡಿಸಲು ಯತ್ನಿಸುತ್ತಾನೆ. ಸ್ವೇಚ್ಛಾಸಂಕೇತ ಕಲೆ ಇಟಲಿಯಲ್ಲಿ ಬೆಳಕು ಕಂಡ ಪಂಥ. ಇದರ ಪ್ರಭಾವ ಬಹಳ ಕಾಲ ಇರಲಿಲ್ಲ. ಆದರೂ ಇದೊಂದು ಪ್ರಮುಖ ಪಂಥ. ತಮ್ಮ ಕಾಲದ ಕ್ರೌರ್ಯ, ಆವೇಶ ವೇಗಗಳನ್ನು ತಮ್ಮ ಚಿತ್ರದಲ್ಲಿ ಸೆರೆ ಹಿಡಿಯಲು ಈ ವರ್ಗದ ಚಿತ್ರಕಾರರು ಯತ್ನಿಸಿದರು. ಬೆಳಕು ಸದಾ ಚಲನಶೀಲ.ಅದರಿಂದಾಗಿ ಆ ಬೆಳಕಿಗೆ ಒಳಗಾದ ವಸ್ತುವಿನಲ್ಲಿಯೂ ಚಲನೆ ಏರ್ಪಡುತ್ತದೆ ಎಂಬುದು ಅವರ ಅಭಿಪ್ರಾಯ. ಆ ಅಭಿಪ್ರಾಯಕ್ಕೆ ಚಿತ್ರ ರೂಪವನ್ನು ಕೊಡಲು ಅವರು ಒಂದೇ ಆಕಾರದ ಗೆರೆಗಳನ್ನು ಒಂದರ ಪಕ್ಕದಲ್ಲಿ ಒಂದರಂತೆ ಎಳೆಯುತ್ತಿದ್ದರು. ಸಂಪ್ರದಾಯ ವಿರೋಧಿಗಳಾಗಿದ್ದ ಇವರು ಹಳೆಯ ಜಾಡನ್ನು ಬಿಟ್ಟು ಹೊಸ ಜಾಡಿನಲ್ಲಿ ನಡೆದರು.
ಜರ್ಮನಿಯಲ್ಲಿ ಜನ್ಮ ತಳೆಯಿತು ಅಭಿವ್ಯಕ್ತಿ ವಾದ. ಈ ಪಂಥದ ಚಿತ್ರಕಾರರು ವಾನ್ ಗೋ (1853 ರಿಂದ 1890) ನಿಂದ ಪ್ರಭಾವಿತರಾದವರು. ಈ ಪಂಥದ ರೇನ್ವಾ ಎಂಬ ಕಲಾವಿದ ಮಧ್ಯಯುಗದ ಬಣ್ಣದ ಗಾಜಿನ ಕಿಟಕಿಗಳ ರಚನಾ ಶೈಲಿಯನ್ನು ಅನುಸರಿಸಿದ. ಬಲವಾದ ಕಪ್ಪುಗೆರೆಗಳನ್ನು ಎದ್ದು ಕಾಣುವ ಬಣ್ಣದ ವ್ಯತ್ಯಾಸಗಳನ್ನು ತನ್ನ ಚಿತ್ರಗಳಲ್ಲಿ ಬಳಕೆಗೆ ತಂದ. ತಾವು ಉಪಯೋಗಿಸುವ ಬಣ್ಣಗಳು, ಹೊಳಪು ದಟ್ಟಣೆಗಳು ತಮ್ಮ ಭಾವನೆಗಳನ್ನು ಎತ್ತಿ ತೋರಿಸಲು ಸಮರ್ಥವಾಗಿವೆ ಎಂಬುದು ಈ ಪಂಥಿಯರ ನಂಬುಗೆ. ಪಿಕಾಸೋವನ್ನು ಭೇಟಿ ಮಾಡಿ ಘನಾಕೃತಿಯ ಕಲೆಯ ಬಗ್ಗೆ ಅಭಿಮಾನ ತಾಳಿದವನು ರಷ್ಯಾದ ಕಾಜಿಮಿರ್ ಮೇಲ್ ವಿಚ್. ಘನಾಕೃತಿ ಕಲೆಯ ಕಲಾವಿದರು ವಸ್ತುವನ್ನು ಬಿಡಿಬಿಡಿಯಾಗಿ ಒಡೆದುಕೊಂಡು ಜಾಮಿತೀಯ ಆಕೃತಿಗಳಲ್ಲಿ ಮೂಡಿಸಿದರೆ, ಈತ ಬರೇ ಜಮಿತಿಗೇ ಅಂಟಿಕೊಂಡ. ಅವನ ಅನುಯಾಯಿಗಳು ಅದನ್ನು ಕನ್ಸ್ ಟ್ರಕ್ಟಿವಿಸಂ- ಸಂರಚನಾವಾದ-ಎಂದರು.
ಅಮೂರ್ತ ಅಭಿವ್ಯಕ್ತಿ ವಾದ. ಬಣ್ಣಗಳನ್ನು ಕ್ಯಾನ್ವಾಸಿನ ಮೇಲೆ ಎರಚಿ ತೇಪೆ ತೇಪೆಯಾದ ಚಿತ್ರ ರಚಿಸುವ ಪಂಥ. ತೇಪೆಗಳು ಯಾವ ಯಾವ ದಿಕ್ಕುಗಳಲ್ಲಿಯೋ ಚಲಿಸುತ್ತಿರುವಂತೆ ಭಾಸವಾಗುತ್ತದೆ. ಲಂಬ ಹಾಗು ಅಡ್ಡಗೆರೆಗಳನ್ನು ಬಳಸಿ ಸಮತೋಲ ಹಾಗೂ ಪ್ರಸನ್ನತೆಯ ಭಾವನೆಯನ್ನು ಮೂಡಿಸುವ ಪ್ರಯತ್ನ ಇದರಲ್ಲಿ ಕಾಣುತ್ತದೆ. ಅಮೇರಿಕಾದ ಜಾಕ್ಸನ್ ಪಾಲಕ್ ಈ ಪಂಥದ ಖ್ಯಾತ ಚಿತ್ರಕಾರ. ಕೆಂಪು, ಕಿತ್ತಳೆ, ಹಳದಿ ಬಣ್ಣಗಳು ತೀಕ್ಷ್ಣತೆಯನ್ನು ಸೂಚಿಸುತ್ತವೆ.
ಯುದ್ಧ ಮತ್ತು ವ್ಯವಸ್ಥಿತ ಸಂಸ್ಥೆಗಳ ವಿರುದ್ಧವಾಗಿ ಕೆಲವು ಕವಿಗಳು, ಕಲಾವಿದರು 1916ರಲ್ಲಿ "ದಾದಾ" ಎಂಬ ಘೋಷಣೆ ಇಟ್ಟುಕೊಂಡು ಒಂದು ಚಳುವಳಿಯನ್ನು ಆರಂಭಿಸಿದರು. ಇವರು ರೂಪಿಸಿದ ಕಲಾಪಂಥ "ದಾದಾಯಿಸಂ". ಯಾವುದೇ ತಾರ್ಕಿಕ, ನೈತಿಕ, ಕಲಾತ್ಮಕ ಮೌಲ್ಯಗಳನ್ನು ಒಪ್ಪಿಕೊಂಡು ನಡೆಯುವುದರ ಬುಡಕ್ಕೆ ಕೊಡಲಿ ಹಾಕಿ, ಆ ಮನೋಭಾವವನ್ನು ನಾಶ ಮಾಡಬೇಕೆಂಬ ಉದ್ದೇಶದ ಚಳುವಳಿ ಇದು. ಹ್ಯಾನ್ಸ್ ಆರ್ಪ್ ಮತ್ತು ಮ್ಯಾನ್ ರೇ ದಾದಾಯಿಸಂ ಆರಂಭಿಸಿದವರು. ಇವರು ಕಲಾತ್ಮಕತಾ ವಿರೋಧಿ ಕೃತಿಗಳ ಸೃಷ್ಟಿಕರ್ತರು. ವಿಚಿತ್ರ ಕಲ್ಪನೆ ಮತ್ತು ಆಜಾಗೃತ ಪ್ರಜ್ಞೆಯಿಂದ ಪ್ರಚೋದಿತವಾದ ಸ್ವಚ್ಛಂದರೂಪಗಳನ್ನು ಇವರು ನಂಬಿದ್ದರು. ಇವು ಮೇಲ್ನೋಟಕ್ಕೆ ಅರ್ಥಹೀನ. ಆದರೆ ವಿಡಂಬನೆಯ ಭಾವ ತುಂಬಿರುತ್ತಿತ್ತು. ಇದು ಸರ್ರೀಯಲಿಮಿಗೆ ದಾರಿ ಮಾಡಿಕೊಟ್ಟಿತು. ಫ್ರಾಯ್ಡನ ಮನೋವಿಜ್ಞಾನದ ಪ್ರಭಾವಕೊಳಗಾದವರ ಪಂಥ ಸರ್ರೀಯಲಿಸಂ. ಭ್ರಾಂತಿ, ಕನಸು, ಆವೇಶಗಳು ಇವರ ಚಿತ್ರಗಳ ಪ್ರಧಾನ ವಸ್ತುಗಳು. ಈ ಪಂಥದಲ್ಲಿ ಚಿರಿಕೊ ಮತ್ತು ಡಾಲಿ ಪ್ರಮುಖರು.
ಮಾಂಡ್ರಿಯನ್, ಕಾಂಡಿನ್ ಸ್ಕಿ ಅಮೂರ್ತ ಕಲಾ ಪಂಥದವರು. ವಸ್ತುವನ್ನು ಗೆರೆಗಳಲ್ಲಿ, ಕೆಲವೇ ಬಣ್ಣಗಳಲ್ಲಿ, ಸೂಚಿಸುವ ಯತ್ನ ಇವರದು. ಈಗ ಯಾವುದೇ ಸಮಸ್ಯೆ ಒಂದು ದೇಶಕಷ್ಟೇ ಸೀಮಿತವಾಗುವುದಿಲ್ಲ. ಹಾಗೆಯೇ ಕಲೆಯ ವ್ಯಾಪ್ತಿಯೂ ವಿಶಾಲ; ಅದು ಅಂತರಾಷ್ಟ್ರೀಯ. ಹಿಂದಿನ ಎಲ್ಲಾ ಪದ್ದತಿಗಳು ಎಲ್ಲಾ ರಾಷ್ಟ್ರೀಯ ವೈಶಿಷ್ಟ್ಯಗಳೂ ಇಂದಿನ ಕಲಾವಿದನ ಮೇಲೆ ಪ್ರಭಾವ ಬೀರುತ್ತವೆ.
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -560056
ಮೊಬೈಲ್ ನಂ: 9739758558
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments