* ಭ್ರಾಂತು..!

 “ಇದು ಜಿವದ ಭ್ರಾಂತುಗಳ ಅನಾವರಣದ ಕವಿತೆ. ಜೀವನದ ಭ್ರಮೆಗಳ ರಿಂಗಣಗಳ ಮಾರ್ದನಿಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರ್ಥಗಳ ಹರಿವಿದೆ. ಅರ್ಥೈಸಿದಷ್ಟೂ ಬಾಳ ಅರಿವಿನ ಹರವಿದೆ. ಅದೇಕೋ ಬಹಳಷ್ಟು ಜನರಿಗೆ ವಾಸ್ತವ ನೋಟದ ನೈಜತೆಗಿಂತ, ಭ್ರಮೆಯ ಕನ್ನಡಕದೊಳಗಿನ ಕೃತ್ರಿಮ ನೋಟವೇ ಅಪ್ಯಾಯವೆನಿಸುತ್ತದೆ. ಸತ್ಯದ ಸಖ್ಯಕ್ಕಿಂತ, ಮಾಯಾ ಮಿಥ್ಯೆಯ ಸಾಂಗತ್ಯವೇ ಆತ್ಮೀಯವೆನಿಸುತ್ತದೆ. ಭವದ ಬಂಧನಕಿಂತ, ಭ್ರಾಂತುಗಳ ದಿಗ್ಬಂಧನಗಳಿಂದ ಕಳಚಿಕೊಳ್ಳುವುದು ಬಹಳ ಕಷ್ಟಕರ. ಬಲು ಕ್ಲಿಷ್ಟಕರ. ಏನಂತೀರಾ,,?” - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.  



ಭ್ರಾಂತು..!



ಕಣ್ಣು ಮುಚ್ಚಿಕೊಂಡರೆ

ಕತ್ತಲಾಗಬಹುದೆ ವಿನಾ

ರಾತ್ರಿಯಾಗುವುದಿಲ್ಲ.!


ದೀಪಹಚ್ಚಿ ಕುಳಿತರೆ

ಬೆಳಕಾಗಬಹುದೆ ವಿನಾ

ಬೆಳಗಾಗುವುದಿಲ್ಲ.!


ಸುಳ್ಳುಗಳ ನಂಬಿದರೆ

ನಿರಾಳವಾಗಬಹುದೆ ವಿನಾ

ನಿಜಗಳಾಗುವುದಿಲ್ಲ.! 


ನೆಪಗಳ ನೀಡಿದರೆ

ಜಾರಿಕೊಳ್ಳಬಹುದೆ ವಿನಾ

ಮೇಲೇರಲಾಗುವುದಿಲ್ಲ.!


ಸಮರ್ಥನೆಗಳ ಕೊಟ್ಟರೆ

ತಪ್ಪುಮುಚ್ಚಬಹುದೆ ವಿನಾ

ತಿದ್ದಿಕೊಳ್ಳಲಾಗುವುದಿಲ್ಲ.!


ಮನಸು ಮಲಗಿಕೊಂಡರೆ

ಕನಸುಕಾಣಬಹುದೆ ವಿನಾ

ನನಸು ಮಾಡಲಾಗುವುದಿಲ್ಲ.!


ಮಾತೇ ಮುಖ್ಯವಾದರೆ

ಸುದ್ದಿಯಾಗಬಹುದೆ ವಿನಾ

ಸಾಧನೆಯಾಗುವುದಿಲ್ಲ.!


ಆಶ್ವಾಸನೆ ನೆಚ್ಚಿಕೊಂಡರೆ

ಹರ್ಷವಾಗಬಹುದೇ ವಿನಾ

ಹೊಟ್ಟೆ ತುಂಬುವುದಿಲ್ಲ.!


ನಟಿಸುತ್ತಾ ಬದುಕಿದರೆ

ಭ್ರಾಂತಿಯಾಗಬಹುದೆ ವಿನಾ

ಕ್ರಾಂತಿಯಾಗುವುದಿಲ್ಲ.!


ಭ್ರಮೆಯ ಕಾಮನಬಿಲ್ಲಿನಿಂದ

ಬಣ್ಣಬಳಿಯಬಹುದೆ ವಿನಾ

ಬದುಕು ಬೆಳಕಾಗುವುದಿಲ್ಲ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments