ನಾಟಕ ನಡೆದು ಬಂದ ದಾರಿಯ ಇಣುಕು ನೋಟ.
"ಕಾವ್ಯೇಷು ನಾಟಕಂ ರಮ್ಯಂ" ಕಾವ್ಯ ಪ್ರಕಾರಗಳಲ್ಲಿ ನಾಟಕವೇ ಅತ್ಯಂತ ರಮ್ಯವಾದದ್ದು; "ನಾಟ್ಯಂ ಭಿನ್ನ ರುಚೇರ್ಜನಸ್ಯ ಬಹುಧಾಪ್ಯೇಕಂ ಸಮಾರಾಧನಂ" ಬೇರೆ ಬೇರೆ ಅಭಿರುಚಿಗಳುಳ್ಳ ಜನರಿಗೆ ನಾಟಕ ಏಕಕಾಲದಲ್ಲಿ ತೃಪ್ತಿಯನ್ನು ಕೊಡುತ್ತದೆ.
ನಾಟಕವು ಸಂಗೀತ, ಸಾಹಿತ್ಯ, ಅಭಿನಯ, ನೃತ್ಯಗಳ ಸಮನ್ವಯದಿಂದ ರೂಪುಗೊಳ್ಳುವ ಸಂಕೀರ್ಣ ಕಲೆ ಇದು ದೃಶ್ಯ ಕಾವ್ಯವೆಂದೂ ಪ್ರಸಿದ್ಧವಾಗಿದೆ. ಸನ್ನಿವೇಶ, ಅಭಿನಯ, ಸಂಭಾಷಣೆ, ಸಂಗೀತ ಇವು ನಾಟಕದ ಪ್ರಧಾನ ಅಂಶಗಳು. ವೇಷಭೂಷಣ ರಂಗ ಸಜ್ಜಿಕೆಗಳು ಇವಕ್ಕೆ ಪೋಷಕಗಳು.
ಜಗತ್ತಿನಲ್ಲಿ ನಾಟಕ ಎಂದು ಹುಟ್ಟಿ ಬೆಳೆಯಿತು ಎಂಬುದು ಖಚಿತವಿಲ್ಲ. ಪ್ರಾಚೀನ ಅನಾಗರಿಕ ಜನಾಂಗಗಳಲ್ಲಿ ಪ್ರಚಲಿತವಾಗಿದ್ದ ಧಾರ್ಮಿಕ ಕ್ರಿಯೆಗಳಿಗೆ ಸಂಬಂಧಿಸಿದ ಕುಣಿತಗಳಲ್ಲಿ ನಾಟಕದ ಮೂಲವನ್ನು ಕಾಣಬಹುದೆಂದು ಒಂದು ಅಭಿಪ್ರಾಯವಿದೆ. ಗೊಂಬೆ ಆಟದಿಂದ ನಾಟಕ ಮೊದಲು ಹುಟ್ಟಿರಬೇಕೆಂದು ಕೆಲವು ತಜ್ಞರು ಊಹಿಸುತ್ತಾರೆ.
ಕ್ರಿಸ್ತಪೂರ್ವ 2000 ವರ್ಷಗಳ ಹಿಂದೆ ಈಜಿಪ್ಟಿನಲ್ಲಿ ಹೊಸ ದೇವತೆಯ ಉತ್ಸಾಹ ಕಾಲದಲ್ಲಿ ನಡೆಸುತ್ತಿದ್ದ ಚಟುವಟಿಕೆಯೇ ನಾಟಕ ಕಲೆಗೆ ಮೂಲ ಎನ್ನುತ್ತಾರೆ. ನಾಟಕಕ್ಕೆ ಸಂಬಂಧಿಸಿದಂತೆ ಅತ್ಯಂತ ಪ್ರಾಚೀನ ಉಲ್ಲೇಖಗಳು ಬೈಬಲ್ಲಿನಲ್ಲಿ ಸಿಗುತ್ತವೆ. ಋಗ್ವೇದದಲ್ಲಿ ಸಂವಾದ ಸೂಕ್ತಗಳಿವೆ. ಆದರೆ ಪುರಾಣ, ಇತಿಹಾಸಗಳ ಕಾಲದಲ್ಲಿ ನಾಟಕವಿತ್ತು ಎಂಬುದು ಸ್ಪಷ್ಟವಾಗಿಲ್ಲ.
ಗ್ರೀಸ್ ದೇಶದಲ್ಲಿ ನಾಟಕ ಒಂದು ರಮ್ಯ ಕಲೆಯಾಗಿ ಅರಳಿದ್ದು ಧಾರ್ಮಿಕ ಉತ್ಸವಗಳ ಸಂಬಂಧದಲ್ಲೇ. ಡೈಯೊನಿಸಸ್ ಎನ್ನುವ ದ್ರಾಕ್ಷಾರಸದ ದೇವತೆಯ ಪ್ರೀತಿ ಅರ್ಥವಾಗಿ ನಡೆಯುತ್ತಿದ್ದ ಉತ್ಸವದಲ್ಲಿ ಸುಮಾರು 50 ಜನರ ಮೇಳ ಆ ದೇವತೆಯ ಚರಿತ್ರೆಯನ್ನು ಹಾಡುತ್ತ ಕುಣಿಯುತ್ತಿತ್ತು. ಮೇಳದಲ್ಲಿ ನಾಯಕ ವೇದಿಕೆಯ ಮೇಲೆ ನಿಂತು ದೇವತಾ ಕತೆಯನ್ನು ಕುರಿತು ಸಂವಾದ ನಡೆಸುತ್ತಿದ್ದ. ಕ್ರಿಸ್ತಪೂರ್ವ 6ನೇ ಶತಮಾನ ಥೆಸ್ ಪಿಸ್ ಈ ಮೇಳದ ಪ್ರಮುಖ ನಾಯಕನಾಗಿ ಗ್ರೀಕ್ ರಂಗಭೂಮಿಯ ಪ್ರಥಮ ನಟನಾದ. ಗ್ರೀಕ್ ನಾಟಕಗಳು ಪದ್ಯ ರೂಪದಲ್ಲಿ ಇದ್ದವು ಮೇಳ ಗೀತವನ್ನು ಅಭಿನಯದೊಡನೆ ಹಾಡುತ್ತಾ ಕುಣಿಯುತ್ತಿದ್ದರು.
ಧಾರ್ಮಿಕ ಉತ್ಸವಗಳ ಆವರಣದಲ್ಲಿ ಬೆಳೆದು ವಿಕಾಸಗೊಂಡ ನಾಟಕ ಕಲೆಗೆ ದೇವತೆಗಳ, ಮಹಾಪುರುಷರ ಜೀವನ ಕಥೆ ವಸ್ತುವಾಗಿತ್ತು. ಮಧ್ಯಯುಗದಲ್ಲಿ ಯುರೋಪಿನಲ್ಲಿ ಕೂಡ ನಾಟಕ ಧಾರ್ಮಿಕ ಪ್ರಭಾವಕ್ಕೆ ಒಳಗಾಗಿತ್ತು. ಇದರಿಂದ ನೀತಿ ಬೋಧಕ ನಾಟಕಗಳು ಬಂದುವು. ಕ್ರಮೇಣ ನಾಟಕದ ಸ್ವರೂಪ ಬದಲಾಯಿತು ಶೃಂಗಾರ, ಹಾಸ್ಯ ಪ್ರಧಾನ ನಾಟಕಗಳು ಹುಟ್ಟಿದವು. ಬುದ್ಧಿಜೀವಿಗಳು ಹಾಗೂ ಸಮಾಜ ಸುಧಾರಕರು ತಮ್ಮ ಅಭಿಪ್ರಾಯಗಳನ್ನು ಸಮಾಜದ ಸಮಸ್ಯೆಗಳನ್ನು ನಾಟಕದಲ್ಲಿ ತಂದರು. ವಾಸ್ತವಿಕತೆಯ ವಿಡಂಬನೆ ಅಂಶಗಳು ನಾಟಕದಲ್ಲಿ ಕಾಣಿಸಿದವು.
ಎಲಿಜಬೆತ್ ರಾಣಿಯ 1533 ರಿಂದ 1603 ಆಡಳಿತಕಾಲ ಇಂಗ್ಲಿಷ್ ನಾಟಕದ ಚರಿತ್ರೆಯಲ್ಲಿ ಸುವರ್ಣ ಯುಗವೆಂದು ಪರಿಗಣಿಸಲ್ಪಟ್ಟಿದೆ. ಪ್ರತಿಭಾನ್ವಿತ ನಾಟಕಕಾರ ಶೇಕ್ಸ್ ಪಿಯರ್ ಈ ಕಾಲದವನು. ಜಗತ್ತಿನ ನಾಟಕ ಸಾಹಿತ್ಯಕ್ಕೆ ಅಮೂಲ್ಯ ಕೃತಿಗಳನ್ನು ಈತ ನೀಡಿದ. ಸರಳ ರಗಳೆಯ ಛಂದಸ್ಸು ಆಗಿನ ನಾಟಕಗಳಲ್ಲಿ ಉಪಯೋಗಿಸಲ್ಪಟ್ಟಿತು.
19ನೇ ಶತಮಾನದ ಉತ್ತರಾರ್ಧ 20ನೇ ಶತಮಾನದ ಪೂರ್ವಾರ್ಧದಲ್ಲಿ ಯುರೋಪಿನಲ್ಲಿ ರೋಮ್ಯಾಂಟಿಕ್ ನಾಟಕಗಳು, ಅತಿ ಕಾಲ್ಪನಿಕ ನಾಟಕಗಳು ಜನಪ್ರಿಯವಾದವು ಸಾಂಕೇತಿಕ ಅಭಿವ್ಯಕ್ತಿ ಪ್ರಧಾನ ನಾಟಕಗಳು ರಂಗಭೂಮಿಯ ಮೇಲೆ ಬಂದವು. ಎರಡನೆಯ ಮಹಾಯುದ್ಧದ ನಂತರ ಸಮಷ್ಠಿ ಪರಿಣಾಮ ಕಲೆ ನಾಟಕತಂತ್ರದ ಮೇಲೆ ಗಾಢ ಪ್ರಭಾವ ಬೀರಿತು. ಅಸಂಗತ ನಾಟಕಗಳು ಐರೋಪ್ಯ ರಂಗಭೂಮಿಯ ಮೇಲೆ ಅಭಿನಯಿಸಲ್ಪಟ್ಟವು.
ಭಾರತದಲ್ಲಿ ನಾಟಕ ಮೊದಲು ರೂಪುಗೊಂಡಿದ್ದು ಸಂಸ್ಕೃತದಲ್ಲಿ. ಸುಮಾರು ಒಂದನೆಯ ಶತಮಾನದೆಂದು ಪರಿಗಣಿಸಲಾಗಿರುವ ಭರತನ 'ನಾಟ್ಯ ಶಾಸ್ತ್ರ' ದಲ್ಲಿ ನಾಟಕದ ವಿವಿಧ ಅಂಗಗಳನ್ನು ಗುರುತಿಸಿರುವುದರಿಂದ ಆ ಕಾಲಕ್ಕೆ ಹಿಂದೆಯೇ ನಮ್ಮಲ್ಲಿ ನಾಟಕ ತಲೆ ಸಾಕಷ್ಟು ಬೆಳೆದಿತ್ತು ಎಂದು ಭಾವಿಸಬಹುದು. ಸಂಸ್ಕೃತ ನಾಟಕಗಳಲ್ಲಿ ಗದ್ಯ ಪದ್ಯಗಳೆರಡನ್ನು ಉಪಯೋಗಿಸುತ್ತಾರೆ. ಇವುಗಳಲ್ಲಿ ಸಂಸ್ಕೃತ ಭಾಷೆಯ ಜೊತೆಗೆ ಪ್ರಾಕೃತವು ಕಂಡುಬರುತ್ತದೆ. ಅಶ್ವಘೋಷ, ಭಾಸ, ಕಾಳಿದಾಸ, ವಿಶಾಕದತ್ತ ಮುಂತಾದವರು ಪ್ರಮುಖ ಸಂಸ್ಕೃತ ನಾಟಕಕಾರರು. ರಾಮಾಯಣ ಮಹಾಭಾರತಗಳ ಪ್ರಸಂಗಗಳೇ ಸಂಸ್ಕೃತ ನಾಟಕಗಳ ಪ್ರಧಾನ ಕಥ ವಸ್ತುಗಳು.
ಕನ್ನಡದಲ್ಲಿ ಎಂಟು ಮತ್ತು ಒಂಬತ್ತನೆಯ ಶತಮಾನದಿಂದ ನಾಟಕ ಪ್ರದರ್ಶನಗಳು ನಡೆಯುತ್ತಿದ್ದಿರಬೇಕು ಎಂದು ಆಧಾರಗಳಿಂದ ತಿಳಿಯಲಾಗಿದೆ. ಲಿಖಿತ ನಾಟಕವಿಲ್ಲದೆಯೇ ಕಾವ್ಯವನ್ನೇ ರಂಗದ ಮೇಲೆ ನಾಟಕಕ್ಕೆ ಅಳವಡಿಸಿಕೊಂಡು ಪ್ರದರ್ಶಿಸುವ ಪದ್ಧತಿ ನಮ್ಮಲ್ಲಿ ಇದ್ದಿರಬೇಕು ಈಗಲೂ ಉಳಿದಿರುವ ಯಕ್ಷಗಾನದ ಮಾದರಿ ಇದನ್ನ ಸೂಚಿಸುತ್ತದೆ. ಕನ್ನಡದಲ್ಲಿ ನಮಗೆ ದೊರೆತಿರುವ ಮೊದಲ ಲಿಖಿತ ನಾಟಕ ಸಿಂಗರಾರ್ಯರ "ಮಿತ್ರವಿಂದಾ ಗೋವಿಂದ" ಇದು ಸಂಸ್ಕೃತ ರತ್ನಾವಳಿಯ ನಾಟಕದ ರೂಪಾಂತರ. ಅನಂತರ ಕನ್ನಡದಲ್ಲಿ ನಾಟಕ ರಚನೆ ನಡೆದದ್ದು 19ನೇ ಶತಮಾನದ ಕೊನೆಯ ಭಾಗದಲ್ಲಿ ಈ ಕಾಲದಲ್ಲಿ ಸಂಸ್ಕೃತ ನಾಟಕಗಳ ಅನುವಾದಗಳು ಇಂಗ್ಲಿಷ್ ನಾಟಕಗಳ ರೂಪಾಂತರಗಳು ಕನ್ನಡದಲ್ಲಿ ಬಂದು 1887ರಲ್ಲಿ ಪ್ರಕಟವಾದ ಆಡುಮಾತಿನಲ್ಲೇ ಇರುವ ಸೂರಿ ವೆಂಕಟರಮಣ ಶಾಸ್ತ್ರಿಯವರ "ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ" ಕನ್ನಡದ ಪ್ರಥಮ ಸಾಮಾಜಿಕ ನಾಟಕ.
20ನೇ ಶತಮಾನದ ಆರಂಭದಲ್ಲಿ ಸ್ವತಂತ್ರ ಕನ್ನಡ ನಾಟಕಗಳು ಪ್ರಕಟವಾದುವು. ಇವೆಲ್ಲ ವೃತ್ತಿ ನಾಟಕ ಸಂಸ್ಥೆಗಳಿಗಾಗಿ ಬರೆದ ನಾಟಕಗಳು. ಇವುಗಳ ವಸ್ತು ಪ್ರಧಾನವಾಗಿ ಪೌರಾಣಿಕ. ಅನಂತರ ಸಾಮಾಜಿಕ ನಾಟಕಗಳು ಬಂದವು. ಪಾಶ್ಚಾತ್ಯ ರಂಗಭೂಮಿಯ ಪ್ರಭಾವ ಈ ಹೊಸ ರಚನೆಗೆ ಪ್ರೇರಕ. ಇದಲ್ಲದೆ ಗೀತ ನಾಟಕಗಳು, ಮಕ್ಕಳ ನಾಟಕಗಳು, ಐತಿಹಾಸಿಕ ನಾಟಕಗಳು ಕನ್ನಡದಲ್ಲಿ ರಚಿತವಾಗಿವೆ.
ರೇಡಿಯೋ ಅಥವಾ ಪ್ರಸಾರ ನಾಟಕಗಳು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗಿವೆ. ರೇಡಿಯೋ ನಾಟಕ ನೋಡುವ ನಾಟಕವಲ್ಲ ಕೇಳುವ ನಾಟಕ. ಆದ್ದರಿಂದ ಇದರಲ್ಲಿ ಕೇವಲ ಮಾತು ಶಬ್ದಗಳಿಂದ ನಾಟಕದ ಪ್ರಭಾವವನ್ನು ಸಾಧಿಸಬೇಕಾಗುತ್ತದೆ. ಅಸಂಗತ ನಾಟಕಗಳು ಕೂಡ ಇತ್ತೀಚೆಗೆ ಕನ್ನಡ ರಂಗಭೂಮಿಯ ಮೇಲೆ ಪ್ರದರ್ಶನಕ್ಕೆ ಬಂದಿವೆ ನಾಟಕದ ಪಾತ್ರಗಳು, ಹಾಡುವ ಮಾತು, ಸೃಷ್ಟಿಸಿದ ಸನ್ನಿವೇಶಗಳು ಮೇಲುನೋಟಕ್ಕೆ ಪರಸ್ಪರ ಹೊಂದಾಣಿಕೆ ಇಲ್ಲದಂತೆ ಕಂಡರೂ ಇವುಗಳಲ್ಲಿ ಜೀವನ ಪರಿಸ್ಥಿತಿಗಳ ಚುರುಕಾದ ವಿಡಂಬನೆ ಇರುವುದು ಯಾರಿಗಾದರೂ ಸ್ಪಷ್ಟವಾಗುತ್ತದೆ. ಹೀಗೆ ನಾಟಕ ನಡೆದು ಬಂದ ದಾರಿಯನ್ನು ನಾವು ಅವಲೋಕಿಸಬಹುದು.
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -560056
ಮೊ. 9739758558
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments