*ಆದರ್ಶ ಶಿಕ್ಷಕ ಅಪರೂಪದ ಕವಿ,ಶ್ರೀ ಎಂ.ಕೆ.ಶೇಖ್*

 *ಆದರ್ಶ ಶಿಕ್ಷಕ ಅಪರೂಪದ ಕವಿ,ಶ್ರೀ ಎಂ.ಕೆ.ಶೇಖ್*



 *ರಾಯಬಾಗ:*  ಶ್ರೀ ಎಂ.ಕೆ.ಶೇಖ್ ರವರು ಮೂಲತಃ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದವರು. ಆದರೆ ಇವರು ಕಲಿತಿದ್ದು ಗಡಿಯಲ್ಲಿನ ಮಹಾರಾಷ್ಟ್ರದ ಜತ್ತ ತಾಲೂಕಿನ ಬೆಳ್ಳುಂಡಗಿ ಗ್ರಾಮದಲ್ಲಿ ಅದೂ ಕನ್ನಡ ಮಾದ್ಯಮದಲ್ಲಿ. ಬಾಲ್ಯದಿಂದಲೇ ಸಾಹಿತ್ಯ ಓದಿನ ಹವ್ಯಾಸ ಬೆಳೆಸಿಕೊಂಡ ಇವರು ಶಾಲಾ ಅಭ್ಯಾಸದೊಂದಿಗೆ ಹೆಚ್ಚಿನ ಸಾಹಿತ್ಯ ಓದುತಿದ್ದರು. ಇವರು ತಮ್ಮ ಶಿಕ್ಷಕ ತರಬೇತಿ ಓದುವಾಗ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡು ತುಂಬಾ ಅನಾಥತನದ ನೋವು ಅನುಭವಿಸಿದರು. ನಂತರ ಪಕ್ಕದ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ 10 ವರ್ಷಗಳವರೆಗೂ ಖಾಸಗಿ ಶಿಕ್ಷಕ ವೃತ್ತಿ ನಡೆಸಿ ಇಂದಿಗೂ ಸರಕಾರಿ ನೌಕರಿ ಪಡೆಯಲಾಗದೇ ಹೀಗೆ ಖಾಸಗಿ ಶಾಲೆಯಲ್ಲಿ ವೃತ್ತಿಜೀವನ ಮುಂದುವರೆಸಿದ್ದಾರೆ. 


 ಕನ್ನಡ ಸಾಹಿತ್ಯದಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿರುವ ಶ್ರೀ ಎಂ.ಕೆ.ಶೇಖ್ ರವರು ಸಾಹಿತ್ಯದೊಂದಿಗೆ ಸಂಘಟನೆ, ಶಾಲೆಗಳಲ್ಲಿ ಶೈಕ್ಷಣಿಕ ಪ್ರಯೋಗಗಳ ಸಂಶೋಧನೆ, ದೇಶ ವಿದೇಶಗಳ ಆಧುನಿಕ ಪ್ರಾಚೀನ ನಾಣ್ಯ ನೋಟುಗಳ ಸಂಗ್ರಹಣೆ ಮಾಡುವದು ,ಅದರೊಂದಿಗೆ ವೃತ್ತಪತ್ರಿಕೆಗಳಲ್ಲಿ ಬರುವ ವಿಶೇಷ ಚಿತ್ರಗಳ ಸಂಗ್ರಹಣೆ ಮಾಡುತ್ತಾರೆ. ಇವರ ನಾಣ್ಯ ಸಂಗ್ರಹದ ಬತ್ತಳಿಕೆಯಲ್ಲಿ ಇಲ್ಲಿಯವರೆಗೆ 60 ಕ್ಕೂ ಹೆಚ್ಚು ದೇಶಗಳ 70 ಕ್ಕೂ ಹೆಚ್ಚು ನೋಟುಗಳು ಹಾಗೂ 200 ಕ್ಕೂ ಹೆಚ್ಚು ಹೊಸ ಹಳೆಯ ದೇಶ ವಿದೇಶ ನಾಣ್ಯಗಳಿವೆ. ಇವರ ಈ ಹವ್ಯಾಸ ಕರ್ನಾಟಕ ಬುಕ್ ಆಫ್ ರೇಕಾರ್ಡಗೆ ಸೇರಿದೆ. ಅಲ್ಲದೆ ವಿವಿಧ ಸಂಘಟನೆಗಳನ್ನು ಸಂಘಟಿಸುತ್ತ ಇವರು ರಾಜ್ಯ ಯುವ ಬರಹಗಾರರ ಒಕ್ಕೂಟ ಎಂಬ ಬಳಗದ ರಾಜ್ಯಾಧ್ಯಕ್ಷರಾಗಿ ರಾಜ್ಯಾದ್ಯಂತ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಂಡಿದ್ದಾರೆ, ವಿಜಯಪುರ ಚಡಚಣ ತಾಲೂಕಿನ ತಾವು ಸೇವೆ ಸಲ್ಲಿಸಿದ ಖಾಸಗಿ ಶಾಲೆಯಲ್ಲಿ ಕಸದಿಂದ ರಸ ಎಂಬ ಉದ್ದೇಶದಲ್ಲಿ 8 ×12 ಎತ್ತರ ಉದ್ದದ , ಕೇವಲ 200 ರೂಪಾಯಿಗಳಲ್ಲಿ  ಒಂದು ದೊಡ್ಡದಾದ ಡೈನೋಸಾರ್ ಮಾದರಿ ತಯಾರಿಸಿ ಇಟ್ಟಿದ್ದಾರೆ. ಹಾಗೂ ಎಂಟು ಅಡಿ ಎತ್ತರದ ಲೈಟ ಹೌಸ್ ತಯಾರಿಸುವುದರೊಂದಿಗೆ ಮಕ್ಕಳಿಗೆ ಮಾದರಿ ಶಿಕ್ಷಕರಾಗಿ ಇಂಡಿ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ ಮತ್ತು ವಿಜಯಪುರ ಜಿಲ್ಲಾ "ಆದರ್ಶ ಶಿಕ್ಷಕ" ಪ್ರಶಸ್ತಿ ಪಡೆದಿದ್ದಾರೆ. ಇವರ ಸಾಹಿತ್ಯ ಮುಖ್ಯವಾಗಿ ಅನುಭವಗಳಿಂದ ಮೂಡಿ ಬಂದಂತಹದು. ಇಲ್ಲಿಯವರೆಗೆ ಇವರ ಸಾಹಿತ್ಯ ಬತ್ತಳಿಕೆಯಿಂದ  ಒಂಭತ್ತು ಕೃತಿಗಳು ಬರೆಯಲ್ಪಟ್ಟು ಲೋಕಾರ್ಪಣೆಯಾಗಿವೆ. ಇವರು ಬರೆದ  "ನೂಲು" ಕಥಾ ಹಂದರದ ಒಂದು ವಿಶೇಷ ಕಥೆಯಾದ "ಮನುಷ್ಯತ್ವದೆಡೆಗೆ ಆಹ್ವಾನ" ಎಂಬ ಕಥೆಯು ವಿಜಯಪುರದ            ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಿ.ಕಾಂ. ಮೂರನೆಯ ಸೆಮಿಸ್ಟರ್ ಗೆ ಪಠ್ಯವಾಗಿರುವುದು ಇವರ ಸಾಹಿತ್ಯದಲ್ಲಿನ ಗಟ್ಟಿತನಕ್ಕೆ ಒಂದು ನಿದರ್ಶನ.

  ಶ್ರೀ ಎಂ.ಕೆ.ಶೇಖ್ ರವರ ಪ್ರಕಟಿತ ಒಟ್ಟು ಕೃತಿಗಳು.


1) ಭೂಮಾತೆ ನನ್ನ ಮಾತೆ-ಕವನ ಸಂಕಲನ

2)  ನನ್ನೂರಿಗೆ ಬೇಂದ್ರೆ ಮತ್ತು ಇತರ ಕಥೆಗಳು -ಕಥಾ ಸಂಕಲನ.

3)  ಪ್ರತಿಕೃತಿ - ವಿಮರ್ಶಾ ಕೃತಿ

4)  ಜಾತಿಗಳ ಜಾಲದಿಂದ - ಕಾದಂಬರಿ

5)  ಭೂಮಾತೆಯ ಮಡಿಲಲ್ಲಿ -ಆಧುನಿಕ ವಚನ ಸಂಕಲನ

6)  ಸಮಭಾವ - ಸಂಪಾದಿತ ಕವನ ಸಂಕಲನ

7)  ನೂಲು- ಕಥಾ ಹಂದರ

8)  ಭೂರಮೆ- ಹೈಕುಗಳ ಸಂಕಲನ

9)  ಚಿತ್ರಾಂಗಧೆಗಳು -ಚುಟುಕುಗಳ ಸಂಕಲನ


  ಇದರೊಂದಿಗೆ ತಮ್ಮ ತಾಯಿಯ ಹೆಸರಿನಲ್ಲಿ "ಭೂಮಾತಾ ಸಾಹಿತ್ಯ ಪ್ರಕಾಶನ" ಪ್ರಾರಂಭಿಸಿ ಇಲ್ಲಿಯವರೆಗೆ ತಮ್ಮ ಕೃತಿಗಳೊಂದಿಗೆ ಇಪ್ಪತ್ತಕ್ಕೂ ಹೆಚ್ಚು ವಿವಿಧ ಕವಿಗಳ ಕೃತಿಗಳನ್ನು ಪ್ರಕಾಶಿಸಿದ್ದಾರೆ.


ಪ್ರಸ್ತುತ ಕುಡಚಿ ಪಟ್ಟಣದ ಪ್ರತಿಷ್ಠಿತ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅಪರೂಪದ ಕವಿ, ಆದರ್ಶ ಶಿಕ್ಷಕ ಶ್ರೀ ಎಂ.ಕೆ.ಶೇಖ್ ಅವರು ಸಾರಸ್ವತ ಲೋಕದಲ್ಲಿ ವಿರಾಜಮಾನರಾಗಿ ಕಂಗೊಳಿಸಲಿ ಎಂದು ಮನದುಂಬಿ ಆಶಿಸುತ್ತೇನೆ.


*ಲೇಖನ:ಡಾ.ಜಯವೀರ ಎ.ಕೆ.*

      【ಕನ್ನಡ ಪ್ರಾಧ್ಯಾಪಕರು】

ಕೆ.ಎಲ್.ಇ. ಪದವಿ ಮಹಾವಿದ್ಯಾಲಯ, ಶಿರಗುಪ್ಪಿ

Image Description

Post a Comment

0 Comments