ಕನ್ನಡ ಭಾಷೆಗೆ ವ್ಯವಹಾರದಲ್ಲಿ ವಿಶ್ವ ಮಾನ್ಯತೆ ದೊರಕಬೇಕು : ಡಾ.ಹೊಂಬಯ್ಯ ಹೊನ್ನಲಗೆರೆ
ನಿಪ್ಪಾಣಿ : ಕನ್ನಡ ಭಾಷೆಯು ಶ್ರೀಮಂತವಾದ ಭಾಷೆ. ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಸಾಹಿತ್ಯ ಸಂಸ್ಕೃತಿ ಹಾಗೂ ಆಚಾರ ವಿಚಾರಗಳಲ್ಲಿ ಕನ್ನಡ ಭಾಷೆಯು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆದರೆ ವ್ಯವಹಾರದಲ್ಲಿ ಮಾತ್ರ ಕನ್ನಡ ಭಾಷೆಯ ಬಳಕೆ ನಿಧಾನಗತಿಯಲ್ಲಿದೆ. ವ್ಯವಹಾರದಲ್ಲಿ ಹೆಚ್ಚು ಹೆಚ್ಚು ಕನ್ನಡ ಬಳಸಿದಷ್ಟು ವಿಶ್ವ ಮಾನ್ಯತೆ ದೊರಕಬೇಕು ಎಂದು ಬೇಡಕಿಹಾಳದ ಕೆ.ಎಂ.ಎ.ಸಿ. ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಹೊಂಬಯ್ಯ ಹೊನ್ನಲಗೆರೆ ಅಭಿಪ್ರಾಯಪಟ್ಟರು.
ಇವರು ನಿಪ್ಪಾಣಿಯ ಕೆಎಲ್ಇ ಸಂಸ್ಥೆಯ ಜಿ. ಐ. ಬಾಗೇವಾಡಿ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಮತ್ತು ವಾಣಿಜ್ಯಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ 50ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳ ಸರಮಾಲೆಯ ' ವ್ಯವಹಾರಿಕ ಕನ್ನಡ ಆಧುನಿಕ ರೂಪುರೇಷೆಗಳು'ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ವ್ಯವಹಾರವು ತುಂಬಾ ನಾಗಾಲೋಟದಲ್ಲಿ ಮುನ್ನಡೆಯುತ್ತಿದೆ. ಯಾವುದೇ ವಸ್ತುಗಳನ್ನು ಕೊಂಡುಕೊಳ್ಳಲು ಇಂದಿನ ತಂತ್ರಜ್ಞಾನ ಮತ್ತು ಸಮೂಹ ಮಾಧ್ಯಮದಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಅಂತರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್ ಹಿಂದಿ ಹಾಗೂ ಆಯಾಯ ರಾಷ್ಟ್ರಗಳ ಭಾಷೆಯಲ್ಲಿ ವ್ಯವಹಾರ ನಡೆಯುತ್ತದೆ. ಆದರೆ ಸ್ಥಳೀಯ ರಾಜ್ಯಗಳ ಭಾಷೆಗಳು ಸಹ ಜಾಗತಿಕ ಮಟ್ಟದಲ್ಲಿ ವ್ಯವಹಾರ ಮಾಡಿದ್ದಲ್ಲಿ ಹೆಚ್ಚಿನ ದೇಶದ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ.
ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆ. ಕರ್ನಾಟಕದಿಂದ ಯಾವುದೇ ರಾಷ್ಟ್ರ ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದ ವಸ್ತುಗಳನ್ನು ಕೊಂಡುಕೊಳ್ಳಲು ಆನ್ಲೈನ್ ಮಾಧ್ಯಮದಲ್ಲಿ ಕನ್ನಡವನ್ನು ಹೆಚ್ಚೆಚ್ಚು ಬಳಸಿದಂತೆ ಆಗ ಮಾತ್ರ ಕನ್ನಡ ಭಾಷೆ ಜಾಗತಿಕ ಭಾಷೆಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಆನ್ಲೈನ್ ನಲ್ಲಿ ನೂರಾರು ಬಿಜಿನೆಸ್ ಪ್ಲಾಟ್ಫಾರ್ಮ್ ಗಳು ಇವೆ. ಇವುಗಳಲ್ಲಿ ಸ್ಥಳೀಯ ರಾಜ್ಯಗಳ ಭಾಷೆಯಲ್ಲಿ ವ್ಯವಹಾರ ಮಾಡಬೇಕೆಂದು ಆಯಾಯ ಸರ್ಕಾರಗಳು ಕ್ರಮ ಕೈಗೊಂಡರೆ ಮಾತ್ರ ಆಯಾ ರಾಜ್ಯದ ಭಾಷೆಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ.ಎಂ.ಎಂ.ಹುರುಳಿ ಅವರು ಮಾತನಾಡುತ್ತಾ, ಕನ್ನಡ ಭಾಷೆಯು ಜಾಗತಿಕ ಭಾಷೆಯಾಗಬೇಕು ಎಂದರೆ ಮೊದಲು ಅನ್ನದ ಭಾಷೆಯಾಗಬೇಕು. ಕನ್ನಡ ಭಾಷೆಯಲ್ಲಿ ಎಲ್ಲಾ ರೀತಿಯ ಶಿಕ್ಷಣ ವ್ಯವಸ್ಥೆ ರೂಪಗೊಂಡಾಗ ಮಾತ್ರ ಅದು ಸಾಧ್ಯವಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳು, ವೈದಿಕೀಯ ವಿಷಯಗಳು ಕನ್ನಡ ಭಾಷೆಯಲ್ಲಿ ಜಾರಿಯಾಗಬೇಕು. ಇಂತಹ ವಿಷಯಗಳಲ್ಲಿ ಕಲಿತ ಉದ್ಯೋಗ ಆಕಾಂಕ್ಷಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ದೊರಕಿದಾಗ ಮಾತ್ರ ಕನ್ನಡ ಭಾಷೆಯು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಡಗೀತೆ ಹಾಡಲಾಯಿತು. ಕುಮಾರಿ ಪ್ರಾಜಕ್ತಾ ಅನುರೆ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ವಿ ಬಿ ಧಾರವಾಡ ಅವರು ಪ್ರಾಸ್ತಾವಿಕ ಮಾತುಲಾಡಿದರು. ಕುಮಾರಿ ಮೇಘ ಅತಿಥಿ ಪರಿಚಯ ಮಾಡಿದರು. ಕುಮಾರಿ ಶಿವಲೀಲಾ ಶಿಗಿಹೊಳೆ ವಂದಿಸಿದರು
ವರದಿ ಡಾ. ವಿಲಾಸ್ ಕಾಂಬಳೆ
ಹಾರೂಗೇರಿ .
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments