ನವೆಂಬರ್ 7.
*ವಿದ್ಯಾರ್ಥಿ ದಿನ*
ಜಾಗತಿಕ ವಿದ್ವಾಂಸರು, ಮಹಾನ್ ನ್ಯಾಯಶಾಸ್ತ್ರಜ್ಞರು, ಭಾರತೀಯ ಸಂವಿಧಾನದ ಕರ್ತೃ, ಮಹಾನ್ ಅರ್ಥಶಾಸ್ತ್ರಜ್ಞ, ಸರ್ವಶ್ರೇಷ್ಠ ಪ್ರಾಧ್ಯಾಪಕರು, ಮಹಾನ್ ಬ್ಯಾರಿಸ್ಟರ್, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಜಗತ್ತಿನ ಮಹಾನ್ ವಿದ್ಯಾರ್ಥಿಯಾಗಿ ಹೋಗಿದ್ದಾರೆ. ಅವರು ಜಗತ್ತಿನ ಎಲ್ಲ ವಿದ್ಯಾರ್ಥಿಗಳಿಗೂ ಆದರ್ಶಮಯರಾಗಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನನ 1891 ಏಪ್ರಿಲ್ 14ರಂದು ಮಧ್ಯ ಪ್ರದೇಶದ ಮೋಹು ಎಂಬ ಪ್ರದೇಶದಲ್ಲಿ ಆಯಿತು. ಅವರ ತಂದೆ ರಾಮಜಿ
ಯವರು ಬ್ರಿಟಿಷರ ಸೈನ್ಯದಲ್ಲಿ ಸುಬೇದಾರ ಮೇಜರರಾಗಿದ್ದರು.
ರಾಮಜಿಯವರು ಯಾವ ಸೈನ್ಯದಲ್ಲಿ ಕಲಿತಿದ್ದರೋ ಅದೇ ಸೈನ್ಯದಲ್ಲಿ ಶಿಕ್ಷಕರಾಗಿ, ಅಲ್ಲಿಯೇ ಮುಖ್ಯೋಪಾದ್ಯರಾದರು. ಅವರು ಇಂಗ್ಲಿಷ್ ಹಾಗೂ ಗಣಿತದ ವಿಷಯಗಳಲ್ಲಿ ಪಾರಂಗತರಾಗಿದ್ದರು. ಹೀಗಾಗಿ ಸ್ವತಃ ಅವರೇ ಬಾಬಾ ಸಾಹೇಬರಿಗೆ ಇಂಗ್ಲಿಷ್ , ವ್ಯಾಕರಣ,ಗಣಿತ ಇವುಗಳನ್ನು ಮನೆಯಲ್ಲಿಯೆ ಕಲಿಸುತ್ತಿದ್ದರು. ಬಾಬಾ ಸಾಹೇಬರ ಜೀವನದಲ್ಲಿಯ ಮೊದಲ ಗುರುವೇ ಅವರ ತಂದೆಯಾಗಿದ್ದರು, ರಾಮಜೀ ಹಾಗೂ ಭೀಮಾಯಿಯವರ ಉತ್ತಮ ಸಂಸ್ಕಾರವು ಬಾಬಾರವರ ಮೇಲೆ ಆಗಿತ್ತು. ಬಾಬಾ ಸಾಹೇಬರ ಅಜ್ಜ ಮಾಲೋಜಿ ಯವರು ಕೂಡ ಬ್ರಿಟಿಷರ ಸೈನ್ಯದಲ್ಲಿದ್ದರು. ರಾಮಜೀ ಅವರು ಬ್ರಿಟಿಷ್ ಸೈನ್ಯದಿಂದ ನಿವೃತ್ತಿಯಾದ ಬಳಿಕ, ದಾಪೋಲಿಗೆ ಬಂದು ನೆಲೆ ನಿಂತರು. ತದನಂತರ ರಾಮಜೀಯವರು ಸಾತಾರದಲ್ಲಿಯ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಸ್ಟೋರ್ ಕೀಪರರಾಗಿ ಕೆಲಸಕ್ಕೆ ಸೇರಿದರು,ಆಗ ಬಾಬಾಸಾಹೇಬರು 6 ವರ್ಷದವರಾದಾಗ ಅವರನ್ನು ಸಾತಾರದಲ್ಲಿಯ ಸರ್ಕಾರಿ ಶಾಲೆಯಲ್ಲಿ ಸೇರಿಸಿದರು. ಆದರೆ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಜಾತಿವಾದದ ಕಠೋರವಾದ ಕರಾಳತೆಯನ್ನು ಸಹಿಸಿಕೊಳ್ಳಬೇಕಾಯಿತು. ಭೀಮಾಬಾಯಿಯವರು ಮರಣ ಹೊಂದಿದಾಗ ಬಾಬಾ ಸಾಹೇಬರು ಬಹಳ ಚಿಕ್ಕವರಾಗಿದ್ದರು. ಆಗ ಅವರ ಸೋದರತ್ತೆಯಾದ ಮೀರಾಬಾಯಿಯವರು ತುಂಬಾ ಅಕ್ಕರೆಯಿಂದ ಅವರ ಲಾಲನೆ ಪಾಲನೆಯನ್ನು ಮಾಡಿದರು. ಅಂಬೇಡ್ಕರ್ ರವರ ಮನೆತನದ ಹೆಸರು ಸಕ್ಪಾಲ ಆಗಿತ್ತು. ಆದರೆ ಶಾಲೆಯಲ್ಲಿ ಅಂಬೇಡ್ಕರ್ ಎಂಬ ಗುರುಗಳು ತಮ್ಮ ಮನೆತನದ ಹೆಸರನ್ನೇ ಬಾಬಾ ಸಾಹೇಬ್ ರಿಗೆ ಇಟ್ಟರು. ಮುಂದೆ ಇದೆ ಹೆಸರು ಸುಪ್ರಸಿದ್ಧವಾಯಿತು. ಚಿಕ್ಕಂದಿನಲ್ಲಿ ಕ್ಷೌರಿಕರು ಬಾಬಾ ಸಾಹೇಬರು ಅಸ್ಪರ್ಶನೆಂಬ ಕಾರಣಕ್ಕಾಗಿ ಅವರ ಕೂದಲನ್ನು ಕತ್ತರಿಸುತ್ತಿರಲಿಲ್ಲ. ಬಾಬಾ ಸಾಹೇಬರು ಹಾಗೂ ಅವರ ಸಹೋದರ ಆನಂದ್ ರಾವ್ ರವರು ವರ್ಗದಿಂದ ಹೊರಗೆ ಕುಳಿತು ಶಿಕ್ಷಣ ಪಡೆಯುವಂತಹ ವ್ಯವಸ್ಥೆ ಆ ಕಾಲಘಟ್ಟದಲ್ಲಿತ್ತು.ಅಷ್ಟೇ ಅಲ್ಲದೆ ಅವರಿಗೆ ಶಾಲೆಯಲ್ಲಿ ನೀರು ಕುಡಿಯಲು ಕೂಡ ಬಿಡುತ್ತಿರಲಿಲ್ಲ. ಒಂದು ಸಾರಿ ನೀರು ಕುಡಿಯಲು ಹೋಗಿ ಎಲ್ಲರಿಂದ ಬಡಿಸಿಕೊಂಡಿದ್ದರು.
ಸಾತಾರದ ಶಾಲೆಯಲ್ಲಿ ಅವರಿಗೆ ಪ್ರವೇಶ ಕೊಡಲು ಜಾತಿವಾದದ ಅಡಚಣೆ ತುಂಬಾ ಇತ್ತು. ಆದರೂ ರಾಮಜೀ ಅವರು ಬಾಬಾ ಸಾಹೇಬರನ್ನು ಶಾಲೆಗೆ ಸೇರಿಸುವ ಸಲುವಾಗಿ ಸಾಕಷ್ಟು ಪ್ರಯತ್ನವನ್ನು ಮಾಡಿದರು.
ಭಾರತದಲ್ಲಿ ವರ್ಣಭೇದ ಹಾಗೂ ಜಾತಿಭೇದದಿಂದಾಗಿ ಹಿಂದುಳಿದ ಹಾಗೂ ಬಹುಜನ ಸಮಾಜದ ಮಹಿಳೆಯರ ಮೇಲೆ ಬಹಳಷ್ಟು ಅನ್ಯಾಯವಾಗುತ್ತಿತ್ತು
ಪೇಶ್ವೆಯವರ ಕಾಲಘಟ್ಟದಲ್ಲಿ ಜಾತಿವಾದವು ತಾರಕಕ್ಕೆ ಏರಿತ್ತು.ರಾಮಾಜಿ ಅವರಿಂದಾಗಿ ಮನೆಯಲ್ಲಿಯೇ ಎಲ್ಲರಿಗೂ ಕಬೀರರ ದೋಹೆಗಳನ್ನು, ತುಕಾರಾಮರ
ಗಾಥೆಗಳನ್ನು ಅಧ್ಯಯನ ಮಾಡುವುದು ಅವಶ್ಯವಾಗಿತ್ತು. ಬಾಲ್ಯದಲ್ಲಿ ಅವರಿಗೆ ಕ್ರಿಕೆಟ್ ಆಡುವಾಗ ಜಾತಿವಾದವನ್ನು ಸಹಿಸಬೇಕಾಯಿತು. ಜೀಜಾಬಾಯಿ ಯವರು ಬಾಬಾಸಾಹೇಬರ ಮಲತಾಯಿಯಾಗಿದ್ದರು, ಅಂದು ಬಾಬಾಸಾಹೇಬರಿಗೆ ಸಂಸ್ಕೃತವನ್ನು ಕಲಿಯಲು ಆಗಿನ ಪರಂಪರೆ ಅವಕಾಶ ನೀಡಲಿಲ್ಲ. ಅನಂತರ ಮುಂದೆ ಅವರೇ ಸ್ವತಃ ಸಂಸ್ಕೃತವನ್ನು ಕಲಿತರು. ಅವರು ಸತಾರದಲ್ಲಿ 7, ನವೆಂಬರ 1900 ರಲ್ಲಿ ಇಂಗ್ಲಿಷ್ ಮೊದಲನೇ ತರಗತಿಗೆ ಪ್ರವೇಶ ಪಡೆದುಕೊಂಡರು.1941 ರಲ್ಲಿ ಆ
ಶಾಲೆಯ ಹೆಸರು ಪ್ರತಾಪ್ ಸಿಂಹ ಹೈಸ್ಕೂಲ್ ಎಂದು ಮರು ನಾಮಕರಣವಾಯಿತು. ಇದರ ಹಿಂದಿನ ಹೆಸರು ಗೋರ್ಮೆಂಟ್ ಹೈಸ್ಕೂಲ್ ಎಂದಿತ್ತು.
ಅನಂತರ ಬಾಬಾಸಾಹೇಬರ ತಂದೆ ರಾಮ್ ಜಿ ಅವರು ಮುಂಬೈಗೆ ಬಂದರು ಅಲ್ಲಿ ಎಲ್ಫಿಸ್ಟನ ಹೈಸ್ಕೂಲ್ನಲ್ಲಿ ಪ್ರವೇಶಕ್ಕಾಗಿ ಹೋದರು ಆದರೆ ಆ ಶಾಲೆಯಲ್ಲಿ ಅವರನ್ನು ತೆಗೆದುಕೊಳ್ಳಬೇಕು ಅಥವಾ ಬೇಡವೋ ಎಂಬುದರ ಕುರಿತು ಮೂರು ದಿನಗಳವರೆಗೆ ಚರ್ಚೆ ನಡೆಯಿತು,
ಬಾಬಾಸಾಹೇಬರು ಬಾಲ್ಯದಿಂದಲೇ ಬುದ್ಧಿಮತ್ತೆಯಲ್ಲಿ ತುಂಬಾ ಚುರುಕಾಗಿದ್ದರು. ಎಲಿಫನಸ್ಟ್ ನಲ್ಲಿ ಓರ್ವ ಉಚ್ಚವರ್ಗದ ಶಿಕ್ಷಕ ದಿನಾಲು ಅವರನ್ನು ಜಾತಿವಾದದ ದೃಷ್ಟಿಕೋನದಿಂದ ನೋಡುತ್ತಿದ್ದರು, ಆ ಶಿಕ್ಷಕ ಒಂದು ಸಾರಿ ಬಾಬಾ ಸಾಹೇಬರಿಗೆ ಈ ರೀತಿಯಾಗಿ ಅಂದರು "ನೀನು ಕಲಿತು ಏನು ಮಾಡುವೆ ? ಆಗ ಬಾಬಾ ಸಾಹೇಬರ ಪ್ರತ್ಯುತ್ತರ "ಅದನ್ನು ಕೇಳುವುದು ನಿಮ್ಮ ಕೆಲಸವಲ್ಲ" ಎಂಬುದಾಗಿತ್ತು.
1907ರಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮ್ಯಾಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆಗ ಎಲ್ಲರಿಗೂ ಸಂತಸವಾಯಿತು ಎಲ್ಲರು ಸೇರಿ ಅವರಿಗೆ ಸತ್ಕಾರ ಮಾಡಲು ಸಜ್ಜಾದರು, ಕೇಳುಸ್ಕರ್ (ಕದಂ) ಗುರುಗಳು ಮಹಾರಾಷ್ಟ್ರದ ಕುಣಬಿ ಸಮಾಜದ ಸತ್ಯಶೋಧಕರಾಗಿದ್ದರು, ಅವರು ಬಾಬಾ ಸಾಹೇಬರಿಗೆ ಸಾಕಷ್ಟು ಸಹಾಯವನ್ನು ಮಾಡಿದರು. ಕೇಳುಸ್ಕರವರ ಸಹಾಯದಿಂದಲೇ ಬರೋಡಾದ ಮಹಾರಾಜರಾದ ಸಯಾಜಿರಾವ್ ಗಾಯಕ್ವಾಡ್ ಅವರು ಬಾಬಾ ಸಾಹೇಬರಿಗೆ ಸ್ಕಾಲರ್ಶಿಪ್ ಅನ್ನು ನೀಡಿದರು. ಬಾಬಾ ಸಾಹೇಬರು 1912ರಲ್ಲಿ ಬಿಎ ಪದವೀಧರರಾದರು. ಅವರು ನೌಕರಿಗಾಗಿ ಬಡೋದೆಗೆ ಹೋದರು, ಆದರೆ ರಾಮಜಿ ಅವರಿಗೆ ಅನಾರೋಗ್ಯ ಇದ್ದಿದ್ದರಿಂದ ಪುನಃ ಬಡೋದದಿoದ ಮುಂಬೈಗೆ ಬಂದರು. ಡಾಕ್ಟರ್ ಬಾಬಾ ಸಾಹೇಬರಿಗೆ ರಮಾಯಿಯವರು ತುಂಬಾ ಕಷ್ಟ ಸಹಿಸುವುದರ ಮೂಲಕ ಅವರಿಗೆ ಬೆನ್ನೆಲುಬಾಗಿ ನಿಂತರು. 1912 ರಲ್ಲಿ ಬಾಬಾ ಸಾಹೇಬರಿಗೆ ಮೊದಲ ಗಂಡು ಮಗುವಾದ ಯಶವಂತ ಉರ್ಪ್ ಭಯ್ಯಸಾಹೇಬ್ ಜನಿಸಿದರು.
ಸೈಯಾಜಿರಾವ್ ಗಾಯಕ್ವಾಡರು ಸುಧಾರಣಾವಾದಿಗಳಾಗಿದ್ದರು, ಹೀಗಾಗಿ ಅವರು ಬಾಬಾಸಾಹೇಬರಿಗೆ ಅಮೆರಿಕಾಗೆ ಉನ್ನತ ವ್ಯಾಸಂಗಕ್ಕಾಗಿ 1913 ರಲ್ಲಿ ಕಳುಹಿಸಿದರು. ಡಾಕ್ಟರ್ ಬಾಬಾಸಾಹೇಬರಿಗೇ ಅಲ್ಲಿ ನವಲ ಭತೆನಾ ಎಂಬ ಪಾರ್ಸಿ ಧರ್ಮದ ಗೆಳೆಯ ತುಂಬಾನೇ ಸಹಾಯವನ್ನು ಮಾಡಿದರು.
ಬಾಬಾ ಸಾಹೇಬರು ಅಮೆರಿಕದಲ್ಲಿ 18- 18 ಗಂಟೆಗಳ ತನಕ ಅಭ್ಯಾಸವನ್ನು ಮಾಡುತ್ತಿದ್ದರು. ಎಂ ಎ ಪಿ ಹೆಚ್ ಡಿ ಪದವಿ ಪಡೆದರು. ಅಲ್ಲಿ ಯೇ ಅವರಿಗೆ ಸತ್ಕಾರವೂ ಮಾಡಲಾಯಿತು. ಅವರನ್ನು ಭಾರತದ ಬೂಕರ್ ಟಿ ವಾಷಿಂಗ್ಟನ್ ಎಂದು ಸಂಬೋಧಿಸಲಾಯಿತು. ಪ್ರೊಫೆಸರ್ ಸೇಲ್ಲಿಂಗ್ ಮನ್ ರವರಿಗೆ ಡಾಕ್ಟರ್ ಬಾಬಾ ಸಾಹೇಬರ ಬಗ್ಗೆ ಅಪಾರವಾದ ಅಭಿಮಾನವಿತ್ತು. ಡಾಕ್ಟರ್ ಬಾಬಾಸಾಹೇಬರು ಪುನಃ ಬಡೋದೆಗೆ ನೌಕರಿಗಾಗಿ ಹೋದರು ಆದರೆ ಅಲ್ಲಿಯ ಜಾತಿವಾದಿ ಜನ ಅವರಿಗೆ ಬಹಳಷ್ಟು ತೊಂದರೆಗಳನ್ನು ನೀಡಿದರು.
" ಡಾಕ್ಟರ್ ಭೀಮರಾವ್ ಅಂಬೇಡ್ಕರ್ ಎಲ್ಲ ವಿದ್ಯಾರ್ಥಿಗಳಲ್ಲಿಯೆ ಅತ್ಯಂತ ಜಾಣರಾಗಿದ್ದರು" ಎಂದು ಅಮೆರಿಕಾದ ಪ್ರೊಫೆಸರ್ ಸೆಲ್ಲಿಂಗ್ ಮನ್ ರವರು ಆಗಾಗ ಹೇಳುತ್ತಿದ್ದರು. ಡಾಕ್ಟರ್ ಬಾಬಾ ಸಾಹೇಬರು ಶಿಕ್ಷಣಕ್ಕಾಗಿ ಲಂಡನ್ಗೆ ಒಂದು ವರ್ಷದವರೆಗೆ ಹೋಗಿದ್ದರು, ಅವರು ಅರ್ಥಶಾಸ್ತ್ರದಲ್ಲಿ ಎಮ್ ಎ., ಎಂ ಎಸ್ ಸಿ., ಡಿ ಎಸ್ ಸಿ., ಪದವಿಗಳನ್ನು ಪಡೆದು ಭಾರತಕ್ಕೆ ಬಂದು ಪುನಃ ಲಂಡನ್ ಗೆ ಹೋಗಿ ಬ್ಯಾರಿಸ್ಟರ್ ಪದವಿಯನ್ನು ಪೂರ್ಣಗೊಳಿಸಿದರು. ಅವರಿಗೆ ಅಧ್ಯಯನದ ಅಭಿರುಚಿ ಅಪಾರವಾಗಿತ್ತು. ಬಹಳಷ್ಟು ಪುಸ್ತಕಗಳನ್ನು ಖರೀದಿಸುತ್ತಿದ್ದರು, ಅವರ ಗ್ರಂಥವಿದ್ದ ಹಡಗು ಯುದ್ಧದ ಸಮಯದಲ್ಲಿ ಬಾಂಬ್ ಬಿದ್ದುದ್ದರಿಂದ ಮುಳುಗಿ ಹೋಗಿತ್ತು.
10 ನವೆಂಬರ್ 1918ರಲ್ಲಿ ಮುಂಬೈಯ ಸಿಡನಹ್ಯಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದರು.1919 ರಲ್ಲಿ ಕೊಲ್ಲಾಪುರದ ರಾಜ ಛತ್ರಪತಿ ಶಾಹು ಮಹಾರಾಜರು ಬಾಬಾ ಸಾಹೇಬರಿಗೆ "ಮೂಕ ನಾಯಕ" ಎಂಬ ವರ್ತಮಾನ ಪತ್ರಿಕೆಯನ್ನು ಆರಂಭಿಸಲು ಆರ್ಥಿಕವಾಗಿ ಧನಸಹಾಯ ಮಾಡಿದರು. ಅವರ ಸಹೋದರ ಬಾಳರಾಮ ರವರು ಜೊತೆಯಾಗಿದ್ದುಕೊಂಡು ಅವರ ಸಹಾಯಕ್ಕೆ ನಿಂತರು. ನಂತರ ಲಂಡನಿಗೆ ಹೋದರು ಊಟ ಮಾಡಬೇಕಾದರೆ ಹಣ ಇದ್ದಿರಲಿಲ್ಲ ಆದರೂ ಕೂಡ ಅವರು 21- 21 ಗಂಟೆಗಳವರೆಗೆ ಅಧ್ಯಯನ ಮಾಡಿದರು.1923 ಕ್ಕೆ ಅವರು ಬ್ಯಾರಿಸ್ಟರ್ ರಾಗಿ ಮರಳಿ ಭಾರತಕ್ಕೆ ಬಂದರು.1927ರಲ್ಲಿ ಬಾಬಾ ಸಾಹೇಬರು ಮನುಸ್ಮೃತಿಯನ್ನು ದಹಿಸಿದರು. ಲಾಲಾ ಲಜಪತ್ ರಾಯ್ ರವರ ಇಚ್ಛೆಯು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬ್ರಿಟಿಷರ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಭಾಗವಹಿಸಬೇಕೆಂಬುದಾಗಿತ್ತು. ಆದರೆ ಬಾಬಾ ಸಾಹೇಬರಿಗೆ ಭಾರತದಲ್ಲಿ ಯ ಸಾಮಾಜಿಕ ಗುಲಾಮಗಿರಿಯ ನಷ್ಟ ಮಾಡಬೇಕಾಗಿತ್ತು. ಸಿಡನಹ್ಯಾಮ್ ಕಾಲೇಜಿನಲ್ಲಿ ಅವರ ಉತ್ಕೃಷ್ಟವಾದ ಬೋಧನೆಯಿಂದಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿ ಹೊರಹೊಮ್ಮಿದರು.
ತಮ್ಮ ಪ್ರಾಧ್ಯಾಪಕರಾದ ಡಾ. ಸೋಲಿಂಗಮನ್ ಅವರ ಬಗ್ಗೆ ಬಾಬಾ ಸಾಹೇಬರು ಹೇಳುತ್ತಾರೆ
"ಸೋಲಿಂಗಮನ ಪ್ರಾಧ್ಯಾಪಕರ ಋಣವು ನನ್ನ ಮೇಲೆ ತುಂಬಾ ಇದೆ."ಏಕೆಂದರೆ ಅವರಿಂದಲೇ ನಾನು ಎಷ್ಟೊಂದು ಮಹತ್ವಪೂರ್ಣವಾದ ಕಲಿಕೆಯನ್ನು ಕಲಿತೆ.
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಶಿಕ್ಷಣವನ್ನು ಬಲು ಕಷ್ಟ ಹಾಗೂ ಛಲದಿಂದ ಪದವಿಗಳನ್ನು ಪಡೆದುಕೊಂಡರು. ಅವರಿಗೆ ಅತ್ಯುನ್ನತವಾದ ದೊಡ್ಡ ದೊಡ್ಡ ಹುದ್ದೆಗಳು ದೊರೆಯುತ್ತಿದ್ದವು. ಆದರೆ ಅವರು ಸಮಸ್ತ ಭಾರತೀಯ ಜನರಿಗಾಗಿ ತಮ್ಮ ಎಲ್ಲಾ ಹುದ್ದೆಗಳನ್ನು ಧಿಕ್ಕರಿಸಿದರು. ಸಮಾಜಕ್ಕಾಗಿ ವಕೀಲ ವೃತ್ತಿಯನ್ನು ಆರಂಭಿಸಿದರು. ಅವರು ಕಾಯ್ದೆ ಪಂಡಿತರಾಗಿದ್ದರು. 1936ರಲ್ಲಿ ಅವರಿಗೆ ಜಿಲ್ಲಾನ್ಯಾಯಾಧೀಶ ಪದವಿ ದೊರೆಯುವುದಿತ್ತು. ಆದರೆ ಅದು ತನ್ನ ಸಾಮಾಜಿಕ ಕಾರ್ಯಕ್ಕೆ ಅಡೆತಡೆ ಉಂಟುಮಾಡುತ್ತದೆ ಎಂಬ ಕಾರಣಕ್ಕೆ ಆ ಪದವಿಯನ್ನೇ ತಿರಸ್ಕರಿಸಿದರು. 1942 ರಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಹುದ್ದೆ ಒಲಿಯುವುದಿತ್ತು ಆದರೆ ಅವರು ಅದನ್ನು ಕೂಡ ತಿರಸ್ಕರಿಸಿದ್ದರು. ಅನಂತರ ಅವರು ಸಾಮಾಜಿಕ ಚಳುವಳಿಯನ್ನು ಮಾಡತೊಡಗಿದರು. ಪಾರ್ವತಿ ಮಂದಿರ ಸತ್ಯಾಗ್ರಹ, ನಾಸಿಕ್ ಕಾಳಾರಾಮ್ ಮಂದಿರ್ ಸತ್ಯಾಗ್ರಹ, ಮಹಾಡ್ ಚೌದಾರ್ ಕೆರೆಯ ಸತ್ಯಾಗ್ರಹಗಳನ್ನು ಮಾಡಿದರು. ಮುಂದೆ ಅವರು ಭಾರತದ ಕಾರ್ಮಿಕ ಮಂತ್ರಿಗಳಾದರು. ಸಮಾನತೆಗಾಗಿ ಹಿಂದೂ ಕೋಡ್ಬಿಲ್ಲನ್ನು ತಯಾರಿಸಿದರು. ಸ್ವತಂತ್ರ ಭಾರತದ ಕಾನೂನು ಮಂತ್ರಿಗಳಾದರು. ಭಾರತೀಯ ಸಂವಿಧಾನದ ಕರ್ತೃವಾದರೂ. ಎಲ್ಲಕ್ಕಿಂತ ಮಿಗಿಲಾಗಿ ಭಾರತದಲ್ಲಿ 'ಜ್ಞಾನವನ್ನು ಪುನರುಜ್ಜೀವನ' ಗೊಳಿಸಿದರು. ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಡಾ. ಬಾಬಾಸಾಹೇಬರ ದೊಡ್ಡದಾದ ಮೂರ್ತಿಯನ್ನು ಮಾಡಲಾಗಿದ್ದು ಅದರ ಕೆಳಗಡೆ "ಸಿಂಬಾಲ್ ಆಫ್ ಕ್ನೋಲೆಜ್ "
ಎಂದು ಬರೆಯಲಾಗಿದೆ. ಇದರ ಬಗ್ಗೆ ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆ, ಅಭಿಮಾನವನ್ನು ಸದಾ ಪಡುತ್ತಲೇ ಇರಬೇಕಾಗಿದೆ. ಅವರ ಆದರ್ಶವನ್ನು ಇಂದಿನ ವಿದ್ಯಾರ್ಥಿ ಸಮೂಹವು ಮೈಗೂಡಿಸಿಕೊಳ್ಳುವುದು ಹಿಂದಿನಗಿಂತ ಇಂದು ಅತೀ ಅವಶ್ಯಕವಾಗಿದೆ..
▪️▪️▪️
ಶ್ರೀ ಅರ್ಜುನ ನಿಡಗುಂದೆ.
ಕನ್ನಡ ಉಪನ್ಯಾಸಕರು,
ಸದಲಗಾ.
ದಿನಾಂಕ:- 07 / 11/ 2023.
9743711213.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments