"ಕರಾವಳಿಯ ಕನ್ನಡ ಕುವರ "


 *ಕಾವ್ಯಧಾರೆ*


*ಕರಾವಳಿಯ ಕನ್ನಡ ಕುವರ*

ವಿನಯಕ್ಕೆ ಒಡೆಯರು
ಮೃದು ಮಾತುಗಳಿಂದ ಸೂಜಿಗಲ್ಲಿನಂತೆ ಸೆಳೆಯುವ ಸ್ನೇಹ ಜೀವಿಗಳು 
 ಸದಾವಕಾಲ  ಬಾಗಿದ ತಲೆ ಮುಗಿದು ಕೈವಾಗಿರಿಸಿಕೊಂಡ ಹದುಳ ಭಾವದ ಹೃದಯವಂತರು

ಹುಟ್ಟೂರು ರಾಮಕುಂಜವನ್ನು ಕಾಯಕ ಶ್ರದ್ಧೆಯಿಂದ ದೇಶದೆಲ್ಲೆಡೆ  ಪ್ರಸಿದ್ಧಿಗೊಳಿಸಿದ ನಿಜ ಭಗೀರಥರು
ಪೂಜ್ಯ ಸುಬ್ರಾಯ ಭಾಗೀರಥಿಯರ ಪುಣ್ಯ ದಂಪತಿಗಳ ಉದರದಿ ಜನಿಸಿ ನಾರಾಯಣ ಭಟ್ ಎಂಬ ಹೆಸರನ್ನು ಸಾಹಿತ್ಯ ಶಿಕ್ಷಣ ರಂಗದಲ್ಲಿ ವರ್ಣರಂಜಿತ ವ್ಯಕ್ತಿತ್ವದಿಂದ ಕಂಗೊಳಿಸುವಂತೆ ಮಾಡಿದ ಕಾಯಕಜೀವಿ

ಸಂತಶ್ರೇಷ್ಠ ಪೂಜ್ಯ ಶ್ರೀ ವಿಶ್ವೇಶತೀರ್ಥರ ಕೃಪೆಗೆ ಪಾತ್ರರಾಗಿ ಗುರು       
ಕಾರುಣ್ಯದ ಕಿರಣದಿಂದ ಬದುಕಿನ ದಿಕ್ಕನ್ನೇ ಬದಲಿಸಿಕೊಂಡು ಆದರ್ಶದ ರಹದಾರಿಯಲ್ಲಿ  ವಿಹರಿಸಿದ ಘನ ಮನ ಸಂಪನ್ನರು

ಬೋಧನೆ ಶೋಧನೆ ಸಾಧನೆ ಅವಿಭಾಜ್ಯ ಅಂಗವಾಗಿಸಿಕೊಂಡವರು
ಶಿಕ್ಷಕ ವೃತ್ತಿಗೆ ಅನುಪಮ ಸೇವೆಯಿಂದ ಗೌರವ ಹೆಚ್ಚಿಸಿದವರು

ಅಧ್ಯಯನ ಅಧ್ಯಾಪನದಿಂದ ಮಕ್ಕಳ ಮೃದು ಮನದಲ್ಲಿ ಸದ್ಗುಣಗಳನ್ನು ಸಮಾನವಾಗಿ ಬಿತ್ತಿ
ವಿಶ್ವಮಾನವಪ್ರಜ್ಞೆ ಜಾತ್ಯತೀತ ತತ್ವಗಳನ್ನು ನಿಜ ಜೀವನದೊಳು ಅಳವಡಿಸಿಕೊಂಡು ನಡೆ ನುಡಿ ಏಕತ್ರಯಗೊಳಿಸಿ ಆದರ್ಶದ ಆಲದ  ಮರವಾದವರು

ತನು ಮನ ಭಾವ ಶುದ್ದಿಯಾಗಿಸಿಕೊಂಡು ಸಕಲರಿಂದ ಲೇಸೆನಿಸಿಕೊಂಡು ಸಕಲರಿಗೂ ಲೇಸನ್ನೇ ಬಯಸುತ್ತ ಹಮ್ಮು ಬಿಮ್ಮು ಇಲ್ಲದ  ಕಲೆ ಸಾಹಿತ್ಯ ಸಮಾಜ ಸೇವಾ ಕ್ಷೇತ್ರವನ್ನು  ಯುಕ್ತಿಯಿಂದ ಸಿರಿವಂತಗೊಳಿಸಿದ  ಪ್ರಬುದ್ಧ ಚಿಂತಕ 

ಶಿಕ್ಷಣ ಸಂಬಂಧಿತ  ಮೇರು ಕೃತಿಪುಷ್ಪಗಳನ್ನು ಸಮರ್ಪಿಸಿ 
ಕನ್ನಡ ಮನಸ್ಸುಗಳನ್ನು ಮುದಗೊಳಿಸಿ
ವೈವಿಧ್ಯಮಯ ಪುಸ್ತಕಗಳನ್ನು ವಿರಚಿಸಿದ  ಅಕ್ಷರ ಸಂಸ್ಕೃತಿಯ ಅಪರೂಪದ ಸಾರಥಿ


ವೃತ್ತಿಯಿಂದ ನಿವೃತ್ತರಾದರೂ
 ಮನವಾರೆ  ಸಮರ್ಪಣಾ ಭಾವದಿಂದ ಇಂದಿಗೂ
ಪಾಠ ಪ್ರವಚನದ ಸೇವೆಯಲ್ಲಿಯೇ ನೆಮ್ಮದಿಯನ್ನು  ಕಂಡುಕೊಂಡು
ನಿಸ್ವಾರ್ಥ ಎಂಬ  ಪದಕ್ಕೆ ಅನನ್ಯ ಸಂಕೇತವಾದವರು

ಬದ್ಧತೆ ಶಿಸ್ತುಗಳೆಂಬ ಎರಡು ಕಣ್ಣುಗಳಿಂದ ಸಮಾಜದ ಹಿತ ಬಯಸುತ್ತ   ಜನಮನ ಮೆಚ್ಚಿದ ಶಿಕ್ಷಕರಾಗಿ ಮಹೋನ್ನತ ರಾಷ್ಟ್ರ ಪ್ರಶಸ್ತಿಯನ್ನು  ಮುಡಿಗೇರಿಸಿಕೊಂಡವರು
ಪ್ರೀತಿ, ನಂಬಿಕೆ, ವಿಶ್ವಾಸಗಳೇ ತನ್ನ ನಿಜ ಆಸ್ತಿಗಳೆಂದರುಹಿದ ಸುವರ್ಣ ಪುರುಷ

ಬಾಳ ಪಯಣದಿ ಸಾಧನೆಯ ಪಥದಲ್ಲಿ ಸ್ಫೂರ್ತಿಯ ಹೂವುಗಳನ್ನು ಚೆಲ್ಲಿ ಪ್ರೇರಣೆಯ ಪನ್ನೀರು ಚುಮುಕಿಸುವ ಬಾಳ ಸಂಗಾತಿ ಸಂಧ್ಯಾ, ಬದುಕೆಂಬ ತೋಟದೊಳು ಅಪರೂಪದಿ ಅರಳಿದ ಕರುಳಿನ ಕುಡಿ  ಮೌಲಿಕಾ ಎಂಬ  ಬೆಳದಿಂಗಳ  ಬೆಳಕಿನಲ್ಲಿ ಸಮೃದ್ಧವಾಗಿ ಕಂಗೊಳಿಸಿ ಸಾಹಿತ್ಯಾನಂದ ಸಾಗರದಲ್ಲಿ ಆತ್ಮವಿಶ್ವಾಸದಿಂದ ಈಜುತ್ತಿರುವ ಅಪ್ರತಿಮ ಸಾಹಸಿಗರು ಇವರೇ ನಮ್ಮ ಕರಾವಳಿಯ ಕನ್ನಡ ಕುವರ

*ಕವಿ: ಡಾ.ಜಯವೀರ ಎ.ಕೆ*
【ಕನ್ನಡ ಪ್ರಾಧ್ಯಾಪಕರು】
ಕೆ.ಎಲ್.ಇ. ಪದವಿ ಮಹಾವಿದ್ಯಾಲಯ,ಶಿರಗುಪ್ಪಿ

Image Description

Post a Comment

0 Comments