ಸಿದ್ದೇಶ್ವರ ಮಹಾತ್ಮಾರಿಗೆ: ನುಡಿ ನಮನ






ನುಡಿಯಲ್ಲೇ ನಡೆದು 
ಕೃತಿಯಲ್ಲಿ ಪ್ರಕೃತಿಯಾಗಿ ಪಂಚಭೂತಗಳಲ್ಲಿ ಲೀನವಾಗಿ ನಿಸರ್ಗವಾಗಿ ಉಳಿದವರು  ಎಷ್ಟಿಹರು ಜಗದಲಿ?

 ಆಸೆಗಳನ್ನು ಮಿತಗೊಳಿಸಿ, ಹಿತ-ಮಿತ ನುಡಿಗಳು
ಸತ್ಯ ಸತ್ವ ಸುಂದರ ವಿಚಾರಗಳು 
ಕತ್ತಲೆ ಕರಗಿಸುವ ಬೆಳಕಾಗಿ ಕೋಟಿ ನಕ್ಷತ್ರ ತಾರೆಗಳೆ ನಾಚುವಂತೆ,
ಬಾಳಿ ಬೆಳಗಿದ ಯೋಗಿ 

ರೋಗ - ರುಜಿನ ಸಾವು - ನೋವು ಕಷ್ಟ- ನಷ್ಟ ಯಾರನ್ನು ಬಿಡಲಿಲ್ಲವಾದರೂ 
ಮನುಷ್ಯ ಜನ್ಮವೇ ಹೆಮ್ಮೆ ಪಡುವಷ್ಟು 
ಸರಳ ಸೌಜನ್ಯ, ಜ್ಞಾನ - ವಿಜ್ಞಾನದ ಪ್ರತೀಕ 
ಮಾಡಿದ ಬೋಧವೆಲ್ಲ ವೇದವಾಗಿದೆ 
ಜಗದ ಸರ್ವ ಶ್ರೇಷ್ಠ ತತ್ವಜ್ಞಾನಿಗಳ ಸೇರಿ
 ತಾನೊಂದು ಕ್ರಾಂತಿಯಾಗಿ ಬೆಳೆದು 
ಹಾಡುವ ಕೋಗಿಲೆಗಳ ಮಾಮರವಾಗಿ
ಕವಿಯಾಗಿ ಪ್ರವಚನಗಾರನಾಗಿ ಈ ಯುಗದ 
ಪ್ರವರ್ತಕನಾಗಿ ವಚನ ನಿರ್ವಹಿಸಿದ ಸರಳ ಸಾಧು 

ಸಾಮಾನ್ಯ ಕುಟುಂಬದಲ್ಲಿ ಸಾಮಾನ್ಯನಾಗಿ ಹುಟ್ಟಿ ಬಯಲು ಸೀಮೆಯಲಿ
ಆಧ್ಯಾತ್ಮ -ಜ್ಞಾನ ಜಲವಾಗಿ ಹರಿದು 
ಯೋಗಿಯಾಗಿ, ತ್ಯಾಗಿಯಾಗಿ, ಉತ್ತಮರಲ್ಲೇ ಸರ್ವೋತ್ತಮನಾಗಿ 
ದೃತಿಗಡದೆ, ಮತಿಗಡದೆ ಸನ್ಮಾರ್ಗದಲ್ಲಿ ತಾನೊಂದು ಕೃತಿಯಾಗಿ, 
ಕೋಟಿ ಮನಗಳಿಗೆ ಜ್ಞಾನ ಉನ ಬಡಿಸಿ 
ಹುಟ್ಟು ಸಾವಿನ ನಡುವೆ
ಸೃಷ್ಟಿಗೆ ಸಮನಾದ ಸಂತ-ಶರಣ ಸದ್ಗುಣಿ, ನಿಜಗುಣಿ, ಸುಯೋಗಿ 

ಅದೆಂತ ನಡೆ-ನುಡಿ 
ಆಚಾರ- ವಿಚಾರ
ಸಂಸ್ಕೃತಿ ಸಂಸ್ಕಾರ? 
ಎಂಥಾ ಮಾತುಗಾರಿಕೆ?
ಜ್ಞಾನ -ವಿಜ್ಞಾನ, ಪ್ರವಚನ, ವಿವೇಚನ 
ವಿಶಾಲತೆ, ವಿವೇಕ,ವಿದ್ಯೆ ಝರಿಯಾಗಿ,ಹರಿಯಾಗಿ ನದಿಯಾಗಿ
 ಸಾಗರ -ಸಮೃದ್ಧಿಯಾಗಿ ಮೃದುವಾಗಿ,ಸಂಜೀವಿನಿಯಾಗಿ, ವಾಹಿನಿಯಾಗಿ,ಭಾಷೆಯಾಗಿ, ಬದುಕಾಗಿ,ಬಲವಾಗಿ, ಛಲವಾಗಿ ಪ್ರಕೃತಿಯಲ್ಲಿ ಒಂದಾಗುವ ಬಯಕೆ 
ಎಂಥಾ ದೃಢ ನಿರ್ಧಾರ?

ಅಸ್ತಿ ಇಲ್ಲ, ಆಸ್ತಿ ಇಲ್ಲ 
ಗುಡಿ- ಗುಂಡಾರ ಅರಮನೆಯಿಲ್ಲ
ಆಡಂಬರವಿಲ್ಲ ಆದರೂ ಅಳಿದಿಲ್ಲ, ಮರೆಯಾಗಿಲ್ಲ                     ನದಿಯಲ್ಲಿ ನೀರಾಗಿ, ಪ್ರಕೃತಿಯಲ್ಲಿ ಹಸಿರಾಗಿ, ತನು-ಮನಗಳಲ್ಲಿ ಉಸಿರಾಗಿ ಬೆಳಕಾಗಿ ಮರುಜನ್ಮ ಪಡೆದವರು
ಸರ್ವಶ್ರೇಷ್ಠ ಸಿದ್ದೇಶ್ವರ ಮಹಾ ಸ್ವಾಮೀಜಿಗಳಿಗೆ 
ಭಕ್ತಿಗಾಗಿ ನುಡಿ ನಮನ 

ಡಾ.ಮಹಾದೇವ  ಪೋತರಾಜ್


 

Image Description

Post a Comment

0 Comments