ಗಗನ ಕುಸುಮ (ಕಾದಂಬರಿ )ಸಂಚಿಕೆ 64

 ಗಗನ ಕುಸುಮ (ಕಾದಂಬರಿ) ಸಂಚಿಕೆ-೬೪


ಹಿಂದಿನ ಸಂಚಿಕೆಯಲ್ಲಿ


ಗಗನಳ ಪ್ರೀತಿಯಿಂದ ವಂಚಿತನಾಗಬಾರದೆಂದು ಗಗನ ಹೇಳುವ ರೀತಿ ಕೇಳಬೇಕೆಂದು ನಿಶ್ಚಯಿಸುತ್ತಾನೆ


ಕಥೆಯನ್ನು ಮುಂದುವರೆಸುತ್ತಾ


ಸಂಜಯನು ಗಗನಳ ನೆನಪಲ್ಲೇ ಕಾಲ ಕಳೆಯುತ್ತಿದ್ದು ತನ್ನ ಹೆತ್ತವರ ಯೋಗಕ್ಷೇಮದ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದೆ ತಾನಾಯ್ತು ಗಗನಳೊಂದಿಗೆ ಸುತ್ತಾಟವಾಯ್ತು ಎಂಬಂತೆ ಇರುತ್ತಾನೆ

ಬೇಸರವಾದಾಗ ಕೆಲಸ ಮುಗಿಸಿ ಗಗನಳಿಗೆ  ಯಾವುದಾದರೂ ಹೋಟೆಲ್ ನಲ್ಲಿ ಮೀಟ್ ಮಾಡುವಂತೆ  ಫೋನ್ ಮಾಡಿ ಗಗನ ಹೇಳಿದ ಹೋಟೆಲ್ ಗೆ ಹೋಗಿ ಅವಳ ಸಹವಾಸದಲ್ಲೇ ಮೈ ಮರೆಯುತ್ತಿರುತ್ತಾನೆ

ಅವರಪ್ಪ ಅಮ್ಮ ಕುಸುಮಳ ಮನೆಯಲ್ಲಿ ಮೊಮ್ಮಕ್ಕಳ ಆಟಪಾಠಗಳನ್ನು ನೋಡುತ್ತಾ ಖುಷಿಯಿಂದ ಇರುತ್ತಾರೆ .

ಒಂದು ದಿನ ಸಂಜೆ ಐದು ಗಂಟೆಗೆ ಕುಸುಮಳ ಮನೆಯಲ್ಲಿ ಅವಳತ್ತೆ ಮಾವ ಕಾಫಿ ಕುಡಿಯುತ್ತಿರುವಾಗ

ರಘುರಾಂ ಮಾತನಾಡಿ ನಮ್ಮ ಮಗ ನಾವು ಇಲ್ಲಿರುವುದನ್ನೇ ಮರೆತಿದ್ದಾನೆ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಬಂದಾಗಿನಿಂದ ಒಂದು ದಿನವೂ ನಮ್ಮನ್ನು ನೋಡಲು ಬರಲೇ ಇಲ್ಲ ಎನ್ನಲು

ಈಗ ಅವನು ಮೊದಲಿನ ಸಂಜಯನಲ್ಲಾ ರೀ ಆ ಗಗನ ಸಿಕ್ಕಿದಾಗಿನಿಂದ ತುಂಬಾ ಬದಲಾಗಿದ್ದಾನೆ ಅವಳೇನು ಮಂಕು ಬೂದಿ ಎರಚಿದ್ದಾಳೋ ಏನೋ ರೀ ಮಾವನ ಮನೆಗೆ ಬರಬೇಕಲ್ಲಾ ಎಂದು ಬಂದೇ ಇಲ್ಲಾ ಎನಿಸುತ್ತದೆ.

ಹೌದು ನಿನ್ನ ಮಾತು ನಿಜ ಹೇಗಿದ್ದೀಯಪ್ಪಾ ಎಂದು ದಿನಕ್ಕೊಂದು ಸಲ ಫೋನ್ ಕೂಡಾ ಮಾಡುವುದಿಲ್ಲ  ಮೂರು ದಿನಕ್ಕೊಮ್ಮೆ ಫೋನ್ ಮಾಡಿ ಮನೆಗೆ ಬಾ ಎಂದು ಕರೆಯುತ್ತಾನೆ ಅವನಿಗೆ ಗಗನ ಒಬ್ಬಳು ಇದ್ದರೆ ಸಾಕು ಹೆಂಡತಿ ಮಕ್ಕಳು ಏನೂ ಬೇಡದಂತಾಗಿದೆ

 ನಾವು ಇಲ್ಲಿರುವುದರಿಂದ ಅವನಿಗೆ ಗಗನಳ ಹಿಂದೆ ಓಡಾಡಲು ಅನುಕೂಲವಾಗಿದೆ ಈಗ ಯಾರ ಅಡತಡೆಯೂ ಇಲ್ಲವಾಗಿದೆ. ನಾವಿಬ್ಬರೂ ಇಲ್ಲೇ ಇದ್ದರೆ ಕುಸುಮಳಿಂದ ಡೈವೋರ್ಸ್ ತೆಗೆದುಕೊಂಡು ಗಗನಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದರೂ ಆಶ್ಚರ್ಯವಿಲ್ಲ

ಹೌದೌದು ನಿನ್ನ ಮಾತು ನಿಜ ಪಾಪ ಕುಸುಮ ತನ್ನ ಗಂಡ ಬೇಜಾರಾಗಬಾರದೆಂದು ಹೇಗೋ ಮಕ್ಕಳ ಜೊತೆ ಜೀವನ ಕಳೆಯಬಹುದೆಂದು ಡೈವೋರ್ಸ್ ಪೇಪರ್ ಗೆ ಸಹಿ ಹಾಕಿದ್ದಳು. ಅವನು ಅದನ್ನು ಕೋರ್ಟಿಗೆ ಹಾಕಿಸಿದ್ದಾನಂತೆ ಕೋರ್ಟಿನಲ್ಲಿ  ಬಲವಂತದಿಂದ ಹೆದರಿಸಿ ಸಹಿ ಪಡೆದಿದ್ದಾನೆಂದು ಹೇಳೆಂದು ನಾನೇ ಸೊಸೆಗೆ ಹೇಳಿದ್ದೆ ಅದರಂತೆ ಕೋರ್ಟಿನಲ್ಲಿ ಹೇಳಿದ್ದಳು  ಅದಕ್ಕೆ ಕೋರ್ಟು ಪುನಃ ಯೋಚಿಸಿ ಒಂದು ನಿರ್ಧಾರಕ್ಕೆ ಬನ್ನಿ ಎಂದು ಹೇಳಿದೆಯಂತೆ ಅಷ್ಟು ಸುಲಭವಾಗಿ ಡೈವೋರ್ಸ್ ಸಿಗುವುದಿಲ್ಲ .

ಒಳ್ಳೆಯ ಕೆಲಸವನ್ನೇ ಮಾಡಿದ್ದೀರಿ ಮಗ ಹೇಗೋ ಡೈವೋರ್ಸ್ ತೆಗೆದುಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದು ಮೊದಲಿನಂತಾದರೆ ಸಾಕು ರೀ 

ನನಗೂ ಹಾಗೆ ಅನ್ನಿಸುತ್ತಿದೆ ಎಂದು ಸಂಭಾಷಣೆ ಮುಂದುವರೆದಿರುವಂತೆ ಕರೆಗಂಟೆ ಭಾರಿಸಿದ್ದನ್ನು ಕೇಳಿ ಅವರಪ್ಪನೇ ಬಾಗಿಲು ತೆಗೆದು ತನ್ನ ಮಗ ಬಂದಿರುವುದನ್ನು ನೋಡಿ ಸಂತೋಷವಾಗಿ ನಿನಗೆ ನೂರು ವರ್ಷ ಆಯಸ್ಸು ಕಣೋ ಈಗ ತಾನೇ ನಾನೂ ನಿನ್ನ ಅಮ್ಮ ನಿನ್ನ ವಿಷಯವನ್ನೇ ಮಾತನಾಡುತ್ತಿದ್ದೆವು ಎನ್ನಲು

ಇನ್ನೂ ಎಷ್ಚು ದಿನ ಕಂಡೋರ ಮನೆಯಲ್ಲಿ ಇರುತ್ತೀರಿ? ಮನೆಗೆ ಬರಬಾರದಾ?

ಇದು ಕಂಡೋರ ಮನೆಯಲ್ಲಾ ಕಣೋ ನಿನ್ನ ಹೆಂಡತಿ ಕುಸುಮಳ ಮನೆ ನಾವು ಬೇರೆ ಯಾರದ್ದೋ.   ಮನೆಯಲ್ಲಿಲ್ಲ ನಮ್ಮ ಸೊಸೆಯ ಮನೆಯಲ್ಲಿದ್ದೇವೆ

ನೀವು ಎಲ್ಲಾದರೂ ಇರಿ ನನಗೇನು ಈಗ ಅವಳೆಲ್ಲಿ ಹೋದಳು? ಎಂದು ಕೇಳಿದಾಗ

ಅವಳು ಎಂದರೆ ಯಾರೋ ?

ನೀವು ಯಾರ ಮನೆಯಲ್ಲಿದ್ದೀರಿ ಅವಳೇ

ಏನೋ ಕೈ ಹಿಡಿದ ಹೆಂಡತಿಯ ಮನೆಗೆ ಬಂದು ಅವಳ ಹೆಸರನ್ನು ಹೇಳದೆ ಅವಳೆಲ್ಲಿ ಎನ್ನುತ್ತಿದ್ದೀಯಲ್ಲಾ?

ನೋಡಪ್ಪಾ ನನಗೆ ಮಾತನಾಡಲು ಸಮಯವೂ ಇಲ್ಲ ತಾಳ್ಮೆಯೂ ಇಲ್ಲ ಅವಳನ್ನು ಕರೆಯಿರಿ ಎಂದು ಕೋಪದಿಂದ ಹೇಳುತ್ತಿರುವಾಗ

ರೂಮಿನಲ್ಲಿದ್ದ ಕುಸುಮಳಿಗೆ ಸಂಜಯನ ಮಾತು ಕಿವಿಯ ಮೇಲೆ ಬಿದ್ದು ಇದೇನು ನನ್ನ ಗಂಡ ಬಂದಿರುವಂತಿದೆ ಎಂದುಕೊಳ್ಳುತ್ತಾ ಹೊರಗೆ ಬಂದು ನೋಡಲು ತನ್ನ ಗಂಡ ಅಪ್ಪ ಅಮ್ಮನ ಜೊತೆಯಲ್ಲಿ ಮಾತನಾಡುತ್ತಿರುವುದನ್ನು  ಕಂಡು ಓಹೋ ಕೋರ್ಟಿನಲ್ಲಿ ಹೇಳಿದ ಮಾತು ತಲೆಗೆ ಹೋಗಿದೆ ಅದಕ್ಕೆ ನಮ್ಮನ್ನು ಕರೆದುಕೊಂಡು ಹೋಗಲು ಬಂದಿರಬಹುದೆಂದು ಮೂರು ಜನರೂ ಮಾತನಾಡುತ್ತಿದ್ದಲ್ಲಿಗೆ ಬಂದು ತನ್ನ ಗಂಡನಿಗೆ ಇದೇನು ನಿಂತುಕೊಂಡೇ ಮಾತನಾಡುತ್ತಿದ್ದೀರಲ್ಲಾ ಕುಳಿತುಕೊಳ್ಳಬಾರದಾ ಎನ್ನಲು

ಸಂಜಯ ಕೋಪದಿಂದ ನಾನು ಕುಳಿತುಕೊಳ್ಳಲು ಬಂದಿಲ್ಲ ನಿನ್ನ ತೀರ್ಮಾನ ಕೇಳಲು ಬಂದಿದ್ದೇನೆ

ಏನು ತೀರ್ಮಾನಾ ರೀ?

ನನಗೆ ಡೈವೋರ್ಸ್ ಕೊಡುತ್ತೀಯೋ ಇಲ್ಲವೋ,? 

ನೀವೇ ಕೋರ್ಟಿಗೆ ಹಾಕಿದ್ದೀರಲ್ಲವಾ? ಕೋರ್ಟಿನಲ್ಲಿ ಅದೇನು ತೀರ್ಪು ಬರುತ್ತದೋ ನೋಡೋಣ ಬಿಡಿ

ನೋಡು ನೀನು ಈ ರೀತಿ ಊಸರವಳ್ಳಿಯಂತೆ ಬಣ್ಣ ಬದಲಿಸಬೇಡಾ

ನಿಮಗೆ ಬುದ್ದಿ ಬರುತ್ತದೇನೋ ಎಂದು ಹಾಗೆ ಮಾಡಿದೆ

ನನಗೆ ನೀನು ಬುದ್ದಿ ಕಲಿಸುವ ಅವಶ್ಯಕತೆ ಇಲ್ಲ ಡೈವೋರ್ಸ್ ಕೇಸನ್ನು ನಾಡಿದ್ದಿಗೆ ಮುಂಗಡವಾಗಿ ಹಾಕಿಕೊಂಡಿದ್ದಾರಂತೆ ಆ ದಿವಸ ಕೋರ್ಟಿಗೆ ಬಂದು ನನಗೆ ಗಂಡನಿಂದ ಡೈವೋರ್ಸ್ ಕೊಡಿಸಿ ಎಂದು ನೀನು ಹೇಳಬೇಕಷ್ಟೇ

ಈ ಮಾತು ಕೇಳಿದ ಅವರಪ್ಪ ಅಮ್ಮ ಲೋ ಸಂಜಯಾ ಮಗನೇ ಕೆಟ್ಟ ಹಠ ಮಾಡಬೇಡ ಡೈವೋರ್ಸ್ ಪೇಪರ್ ವಾಪಸ್ ತೆಗೆದುಕೊಂಡು ಮೊದಲಿನಂತೆ ಸಂಸಾರ ಮಾಡಿಕೊಂಡಿರಪ್ಪಾ

ನನಗೆ ಅದೆಲ್ಲಾ ಇಷ್ಟವಿಲ್ಲ ಎನ್ನುತ್ತಾ ಕುಸುಮಳ ಕಡೆ ತಿರುಗಿ ಲೇಯ್ ನಾಡಿದ್ದು ಕೋರ್ಟಿಗೆ ಬಂದು ನಾನು ಹೇಳಿದಂತೆ ಹೇಳಬೇಕಷ್ಟೇ ಇಲ್ವದಿದ್ದರೆ ಆ ದಿನ 

ವಿಷದ ಬಾಟಲ್ ತಂದಿರುತ್ತೇನೆ ನೀನೇನಾದರೂ ಊಸರವಳ್ಳಿ ತರ ಬಣ್ಣ ಬದಲಿಸಿದೆಯೋ ಕೋರ್ಟಿನಲ್ಲಿ ಎಲ್ಲರ ಮುಂದೆ ವಿಷ ಕುಡಿದು ಸತ್ತುಹೋಗುತ್ತೇನೆ 

ಅಯ್ಯೋ ಬೇಡಾರೀ ಅಂತಹ ಕೆಲಸ ಮಾಡಬೇಡ್ರೀ ನಿಮ್ಮ ಅಪ್ಪನಿಗೆ ದುಃಖ ನೀಡಬೇಡ್ರೀ ನೀವು ಹೇಳಿದಂತೆ ಕೇಳುತ್ತೇನೆ ಎಂದಾಗ

ಸಂಜಯನ ಅಪ್ಪನಿಗೆ ಕೋಪ ಬಂದು ನೀನು ಸುಮ್ಮನಿರಮ್ಮಾ ಇವನು ಹೇಳಿದಂತೆ ಕೇಳಿದ್ದಕ್ಕೆ ಹೆಂಡತಿ ಮಕ್ಕಳನ್ನು ನಡು ನೀರಲ್ಲಿ ಕೈ ಬಿಟ್ಟು  ಅದ್ಯಾವೋಳೋ ಹಿಂದೆ ಹೋಗಿದ್ದಾನೆ

ಹೌದಪ್ಪಾ ನಾನು ಅವಳನ್ನೇ ಮದುವೆಯಾಗುತ್ತೇನೆ ಅದು ಈ ಜನ್ಮದಲ್ಲಿ ಸಾಧ್ಯವಿಲ್ಲಾ ನಾನು ನಿನಗೆ ನನ್ನ ಸೊಸೆಯಿಂದ ಡೈವೋರ್ಸ್ ಕೊಡಿಸುವುದಿಲ್ಲ

ನೀವು ಕೊಡಿಸದಿದ್ದರೆ ಕೋರ್ಟಿನಲ್ಲಿ ಎಲ್ಲರ ಮುಂದೆ ವಿಷ ಕುಡಿದು ಸಾಯುತ್ತೇನೆ ಹುಷಾರ್

ಲೇಯ್ ಹೆದರಿಸುತ್ತಿದ್ದೀಯೇನೋ ಕುಡಿ ಹೋಗೋ 

ನನಗೆ ಮಗನೇ ಹುಟ್ಟಲಿಲ್ಲ ಎಂದು ಕೊಂಡು ನೀನು ಸತ್ತದಿನ ತಲೆಗೆ ತಣ್ಣೀರು ಹಾಕಿಕೊಳ್ಳುತ್ತೇನೆ ಎನ್ನಲು

ಹಾಗೆ ಹೇಳಬೇಡಿರಿ ಮಾವಾ ಅವರು ಎಲ್ಲಾದರೂ ಚೆನ್ನಾಗಿರಲಿ ಹುಚ್ಚು ಮನಸ್ಸು ಅಕಸ್ಮಾತ್ ವಿಷ ಕುಡಿದು ಸತ್ತರೆ ಆಗ ನಾನು ದುಃಖಪಟ್ಟರೂ ಪರವಾಗಿಲ್ಲ ಆದರೆ ನೀವು ದುಃಖಪಡುವುದನ್ನು ನಾನು ನೋಡುವುದಕ್ಕೆ ಆಗುವುದಿಲ್ಲವೆಂದು ಬಿಕ್ಕಿ ಬಿಕ್ಕಿ ಕುಸುಮ ಅಳುತ್ತಾಳೆ

ನೋಡೋ ….ನೋಡಿದ್ಯೇನೋ ನಿನ್ನ ಹೆಂಡತಿ ಎಷ್ಟು ಒಳ್ಳೆಯವಳೆಂದು ಈಗಲಾದರೂ ತಿಳೀತೇನೋ ? ಇಂತಹ ಹೆಂಡತಿಯನ್ನು ಪಡೆದಿರುವುದಕ್ಕೆ ನೀನು ಏಳು ಜನ್ಮದ ಪುಣ್ಯ ಮಾಡಿದ್ದೀ ಕಣೋ ಯಾವೊಳೋ ಮಾತು ಕೇಳಿ ಡೈವೋರ್ಸ್ ಕೇಳುತ್ತಿದ್ದೀಯಲ್ಲಾ ನಿನಗೆ ನಾಚಿಕೆಯಾಗಬೇಕು ಛೀ …..ನಾಚಿಕೆಗೆಟ್ಟವನೇ ….

ಈ ಮಾತಿಗೆ ಸಂಜಯ ನಗುತ್ತಾ ಅಪ್ಪಾ ಈ ನೀತಿಗೆಟ್ಟವಳನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನಾ ನನಗೆ ಆ ಪುಣ್ಯ ಖಂಡಿತಾ  ಬೇಡಪ್ಪಾ  ಅವಳು ಕೋರ್ಟಿಗೆ ಬಂದು ಡೈವೋರ್ಸ್ ಗೆ ಒಪ್ಪಿಗೆ ಕೊಡಲು ಹೇಳಿ ಎಂಬ ಮಾತಿಗೆ

ಅಲ್ಲೇ ಇದ್ದ ಅವರ ಮಾವನಿಗೆ ತಡೆಯಲಾರದ ಕೋಪ ಬಂದು ಏನು ನೀನು ಹೇಳುತ್ತಿರುವುದು?  ಅಪ್ಪ ಮಗ ಮಾತನಾಡುತ್ತಿದ್ದೀರಿ ನಿಮ್ಮ ಮದ್ಯೆ ಬಂದು ಮಾತನಾಡಬಾರದೆಂದು ಜೊತೆಗೆ ಮನೆ ಅಳಿಯನೆಂದು ಸುಮ್ಮನಿದ್ದು ನಿಮ್ಮಪ್ಪ ಹೇಳುತ್ತಿರುವುದನ್ನು ಕೇಳುತ್ತಿದ್ದೆ ಏನಯ್ಯಾ ಅಳೀಮಯ್ಯಾ ನಮ್ಮ ಮನೆಗೆ ಬಂದು ನಮ್ಮ ಎದುರಿಗೆ ನನ್ನ ಮಗಳನ್ನು ನಡತೆಗೆಟ್ಟವಳೆಂದು ಹೇಳುತ್ತಿದ್ದೀಯಲ್ಲಾ ನಿನಗೆಷ್ಟು ಧೈರ್ಯ? ನೀನೇನೂ ಸಾಚಾನಾ? ಹೆಂಡತಿ ಮಕ್ಕಳಿದ್ದು ನಾಚಿಕೆ ಇಲ್ಲದೆ ಯಾವೋಳೋ ಹಿಂದೆ ಬೀದಿ ನಾಯಿಯಂತೆ ಓಡಾಡುತ್ತಿದ್ದೀಯಲ್ಲಾ ನೀನು ಅಪ್ಪಟ ಅಪರಂಜಿಯಂತಿರುವ ನನ್ನ ಮಗಳನ್ನು ನೀತಿಗೆಟ್ಟವಳು ನಡತೆಗೆಟ್ಟವಳೆಂದು ಹೇಳುತ್ತಿದ್ದೀಯಲ್ಲಾ ನಿನಗೇನು ಕರೆಯಬೇಕು ಹೇಳು? ನನ್ನ ಮಗಳು ಗಂಗೆಯಂತೆ ಪವಿತ್ರಳು  ಪರಿಶುದ್ದಳು ಕಣೋ ನಿನ್ನಿಂದ ನನ್ನ ಮಗಳಿಗೆ ಸರ್ಟಿಫಿಕೇಟ್ ಬೇಕಾಗಿಲ್ಲ 

ನಿಮ್ಮ ಅಪರಂಜಿಯನ್ನು ನೀವೇ ಇಟ್ಟುಕೊಳ್ಳಿ ನಾಡಿದ್ದು ಕೋರ್ಟಿಗೆ ಬಂದು ಡೈವೋರ್ಸ್ ಗೆ ಒಪ್ಪಿಗೆ ಕೊಡಿಸಿ ನಿಮ್ಮ ಸಹವಾಸವೇ ಬೇಡಾ

ಡೈವೋರ್ಸ್ ಗೆ ಒಪ್ಪಿಗೆ ಕೊಡಿಸುತ್ತೀನಿ ಕಣೋ ಸಂಜಯಾ ಪುನಃ ನಿನ್ನ ಮುಖ ನೋಡದಂತೆ ಹೇಳುತ್ತೇನೆ ಎನ್ನುತ್ತಾ ಕುಸುಮಳ ಕಡೆ ತಿರುಗಿ ಅಮ್ಮಾ ಮಗಳೇ ಈ ನೀಚ ನಡತೆಗೆಟ್ಟವನು ನಿನ್ನ ಗಂಡನಾಗಲು ಇವನಿಗೆ ಯೋಗ್ಯತೆಯಿಲ್ಲ ಮೊದಲು ಅವನಿಗೆ ಡೈವೋರ್ಸ್ ಕೊಟ್ಟು ಬಿಟ್ಟು ಪುನಃ  ಇವನ ಮುಖ ನೋಡದಂತೆ ಮನೆಗೆ ಬಾಮ್ಮಾ ಎನ್ನಲು

ಸಂಜಯನ ತಂದೆ ಏನು ಹೇಳುತ್ತಿದ್ದೀರಾ ಬೀಗರೇ?

ನೀವು ಸುಮ್ಮನಿರಿ ರಘುರಾಂ ಅನುಮಾನ ಪಿಶಾಚಿಯ ಸಂಬಂಧ ಇಟ್ಟುಕೊಳ್ಳಬಾರದು 

ಅವನು ನಮ್ಮ ಮಗ ಬೀಗರೇ ಸಂಬಂಧ ಎಲ್ಲೂ ಹೋಗುವುದಿಲ್ಲ

ಗೊತ್ತು ರಘುರಾಂ ಕ್ಷಮಿಸಿ ಕೋಪದಲ್ಲಿ ಏನೇನೋ ಹೇಳಿದೆ 

ನೀವು ಕ್ಷಮಿಸುವ ತಪ್ಪೇನೂ ಮಾಡಿಲ್ಲ ಇವನು ನಮ್ಮ ಮಗ ಎಂದು ಹೇಳಿದೆ ಅಷ್ಟೇ ಇವನ ಅಪ್ಪ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ.

ಸಂಜಯನ ಅಮ್ಮ ಮಾತನಾಡಿ ಲೋ ಸಂಜಯಾ ನೀನೇಕೆಇಷ್ಟೊಂದು ಬದಲಾಗಿ ಹೋಗಿದ್ದೀಯಾ?

ಈ ಮಾತಿಗೆ ನೀವು ಸುಮ್ಮನೆ ಮಾತನಾಡುತ್ತಿರುತ್ತೀರೋ ಅಥವಾ ನಾಡಿದ್ದು ಡೈವೋರ್ಸ್ ಕೊಡುವಂತೆ  ಹೇಳುತ್ತೀರೋ ಎನ್ನಲು

ಅಲ್ಲೇ ನಿಂತಿದ್ದ ಕುಸುಮ  ತನ್ನ ಕಣ್ಣನ್ನು ಒರೆಸಿಕೊಳ್ಳುತ್ತಾ ಆಯ್ತೂ ರೀ ನಾಡಿದ್ದು ಕೋರ್ಟಿಗೆ  ಬಂದು ಡೈವೋರ್ಸ್ ಗೆ ಒಪ್ಪಿಗೆ ಕೊಡುತ್ತೇನೆಂದಾಗ

ಏನಾದರೂ ಪುನಃ ಬಣ್ಣ ಬದಲಿಸಿದೆಯೋ ನಾನು ಸುಮ್ಮನಿರುವುದಿಲ್ಲವೆಂದು ಬಾಗಿಲ ಬಳಿ ಬಂದಾಗ

ರೂಮಿನಲ್ಲಿದ್ದ ಮಕ್ಕಳು ಅಪ್ಪ ಬಂದಿದೆಯೆಂದು ಅಪ್ಪಾ ಅಪ್ಪಾ ಎನ್ನುತ್ತಾ ಅವನ ಬಳಿ ಓಡಿ ತಬ್ಹಿಕೊಳ್ಳಲು ಹೋದಾಗ ಛೀ  ಎಂದು ಅವರಿಂದ ಬಿಡಿಸಿಕೊಂಡು ಇಬ್ಬರು ಮಕ್ಕಳನ್ನು ದೂರ ತಳ್ಳಿ ದಢಾರನೆ ಬಾಗಿಲು ಹಾಕಿಕೊಂಡು ಹೋಗುತ್ತಾನೆ


ಮುಂದುವರೆಯುತ್ತದೆ


ಡಾ. ಎನ್ ಮುರಳೀಧರ್ 

ವಕೀಲರು ಹಾಗೂ ಸಾಹಿತಿ

ನೆಲಮಂಗಲ


Image Description

Post a Comment

0 Comments